
ಪತ್ರಿಕಾ ವರದಿಯೊಂದರ ಮೂಲಕ ಸಮುದಾಯಗಳ ನಡುವೆ ಸಾಮರಸ್ಯ ಕೆಡಿಸಿದ ಆರೋಪ ಹೊತ್ತಿರುವ ಪತ್ರಕರ್ತನ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಗುವಾಹಟಿ ಹೈಕೋರ್ಟ್ ಆಗಸ್ಟ್ 7ರಂದು ರದ್ದುಗೊಳಿಸಿದೆ [ಕೊಂಗ್ಕಾನ್ ಬೋರ್ಥಾಕೂರ್ ಮತ್ತು ಅಸ್ಸಾಂ ಸರ್ಕಾರ ಇನ್ನಿತರರ ನಡುವಣ ಪ್ರಕರಣ] . 2016ರಲ್ಲಿ ವರದಿಯು ಪ್ರಕಟವಾಗಿತ್ತು.
ಅಕ್ರಮ ವಲಸೆ, ಧಾರ್ಮಿಕ ಮೂಲಭೂತವಾದ ಮತ್ತು ಉಗ್ರಗಾಮಿ ಚಟುವಟಿಕೆಗಳಂತಹ ವಿಷಯಗಳ ಬಗ್ಗೆ ವರದಿ ಮಾಡುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿ ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ಪ್ರಾಂಜಲ್ ದಾಸ್ ತೀರ್ಪು ನೀಡಿದರು.
"ಸಮಾಜಕ್ಕೆ ಮುಖ್ಯವಾದ ಜ್ವಲಂತ ಸಮಸ್ಯೆಗಳನ್ನು ಎತ್ತಿ ತೋರಿಸುವುದು ಪತ್ರಿಕೋದ್ಯಮದ ಪ್ರಮುಖ ಕರ್ತವ್ಯ. ಅಕ್ರಮ ವಲಸಿಗರು, ಧಾರ್ಮಿಕ ಮೂಲಭೂತವಾದ, ಉಗ್ರಗಾಮಿ ಚಟುವಟಿಕೆಗಳು ಮತ್ತು ಸ್ಥಳೀಯ ಜನರಿಗೆ ಇರುವ ಬೆದರಿಕೆಗಳ ಬಗ್ಗೆ ಕಾಳಜಿ ತೋರಿದ್ದನ್ನು ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವ ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಯತ್ನವೆಂದು ಅರ್ಥೈಸುವಂತಿಲ್ಲ" ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಲಾಗಿದೆ.
ನವೆಂಬರ್ 8, 2016 ರಂದು ಅಸ್ಸಾಮಿ ದಿನಪತ್ರಿಕೆ ದೈನಿಕ್ ಜನಭೂಮಿಯಲ್ಲಿ ಪ್ರಕಟವಾದ ವರದಿ ಶಾಂತಿಯುತ ಪ್ರದೇಶದಲ್ಲಿ ಸಾಮರಸ್ಯವನ್ನು ಕೆಡಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿ ಅಖಿಲ ಅಸ್ಸಾಂ ಮುಸ್ಲಿಂ ವಿದ್ಯಾರ್ಥಿ ಒಕ್ಕೂಟ (ಶಿವ ಸಾಗರ್) ಅಧ್ಯಕ್ಷರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಪತ್ರಕರ್ತ ನ್ಯಾಯಾಲಯದ ಮೊರೆ ಹೋಗಿದ್ದರು.
ವರದಿಯು ಬೇರುಮಟ್ಟದ ಸಂಶೋಧನೆಯನ್ನು ಆಧರಿಸಿದ್ದು, ಜನಸಂಖ್ಯಾ ಬದಲಾವಣೆಗಳು, ಗಡಿಯಾಚೆಗಿನ ವಲಸೆ ಮತ್ತು ಮೂಲಭೂತವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಕಳವಳಗಳನ್ನು ಎತ್ತಿ ತೋರಿಸಿದೆ ಎಂದು ಅವರು ವಾದಿಸಿದ್ದರು. ಐಪಿಸಿಯ ಸೆಕ್ಷನ್ 153 ಎ ಅಡಿ ಎರಡು ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ನೀಡುವುದಕ್ಕೆ ಸಂಬಂಧಿಸಿದ ಪುರಾವೆಗಳು ಎಫ್‌ಐಆರ್‌ನಲ್ಲಿ ದಾಖಲಾಗಿಲ್ಲ ಎಂದು ಅವರು ಹೇಳಿದ್ದರು.
ಸೆಕ್ಷನ್ 153ಎ ಅಡಿಯಲ್ಲಿ ಮೊಕದ್ದಮೆ ಹೂಡಲು ಕನಿಷ್ಠ ಎರಡು ಸಮುದಾಯಗಳನ್ನು ಪರಸ್ಪರ ವಿರುದ್ಧ ಎತ್ತಿಕಟ್ಟಿರಬೇಕು, ಜೊತೆಗೆ ಹಿಂಸೆ ಅಥವಾ ದ್ವೇಷವನ್ನು ಪ್ರಚೋದಿಸುವ ಉದ್ದೇಶ ಆ ಕೃತ್ಯದ್ದಾಗಿರಬೇಕು ಎಂಬುದನ್ನು ವಿವರಿಸಿ ಈ ಹಿಂದೆ ಪ್ರಕಟವಾಗಿದ್ದ ವಿವಿಧ ತೀರ್ಪುಗಳನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಉಲ್ಲೇಖಿಸಿತು. ಸಾಮಾಜಿಕ ಸಮಸ್ಯೆಗಳನ್ನು ಟೀಕಿಸುವುದು ಅಥವಾ ಎತ್ತಿ ತೋರಿಸುವುದು ದ್ವೇಷವನ್ನು ಉತ್ತೇಜಿಸುವುದಕ್ಕೆ ಸಮನಾಗುವುದಿಲ್ಲ ಎಂದು ಅದು ಹೇಳಿತು.
ಲೇಖನ ಯಾವುದೇ ನಿರ್ದಿಷ್ಟ ಧಾರ್ಮಿಕ ಅಥವಾ ಜನಾಂಗೀಯ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಾಗಿ ಸಮಸ್ಯೆಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು ಪತ್ರಕರ್ತನ ವೃತ್ತಿಪರ ಕರ್ತವ್ಯವಾಗಿದೆ ಎಂದು ನ್ಯಾಯಮೂರ್ತಿ ದಾಸ್ ತಿಳಿಸಿದರು. ಸಾರ್ವಜನಿಕ ಕಳಕಳಿಯ ವಿಷಯಗಳನ್ನು ಎತ್ತಿದ್ದಕ್ಕಾಗಿ ಪತ್ರಿಕೋದ್ಯಮವನ್ನು ಶಿಕ್ಷಿಸಲಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದರು.
"ಪತ್ರಕರ್ತ ಯಾವುದೇ ಜನಾಂಗೀಯ ಅಥವಾ ಧಾರ್ಮಿಕ ಸಮೂಹದ ಮೇಲೆ ದೂಷಣೆಗಳನ್ನು ಮಾಡಿಲ್ಲ" ಎಂದ ನ್ಯಾಯಾಲಯ, ಕ್ರಿಮಿನಲ್ ಮೊಕದ್ದಮೆಗಳನ್ನು ಬದಿಗೆ ಸರಿಸಿತು.
[ತೀರ್ಪಿನ ಪ್ರತಿ]