ವಾಯು ವಿಹಾರ ಕೈಗೊಂಡಿದ್ದ ಧನ್‌ಬಾದ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರ ಕೊಲೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರನ್ನು ಜಾರ್ಖಂಡ್ ಸರ್ಕಾರ ಅಮಾನತು ಮಾಡಿದೆ.
ಆಟೊ ರಿಕ್ಷಾ ಮಾಲಕಿ ನೀಡಿದ್ದ ವಾಹನ ಕಳವು ದೂರಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳದ ಧನ್‌ಬಾದ್ ಜಿಲ್ಲೆಯ ವ್ಯಾಪ್ತಿಗೆ ಸೇರಿದ ಪಾಥರ್ಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಉಮೇಶ್ ಮಾಂಜಿ ಅವರನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾದ ಸಂಜೀವ್ ಕುಮಾರ್ ಅಮಾನತು ಮಾಡಿದ್ದಾರೆ. ಕಳವಾಗಿದ್ದ ವಾಹನವನ್ನು ನ್ಯಾಯಾಧೀಶ ಆನಂದ್ ಅವರ ಕೊಲೆಗೆ ಬಳಸಲಾಗಿತ್ತು.
ಆಟೊ ಕಳವಿಗೆ ಸಂಬಂಧಿಸಿದಂತೆ ಆಟೊ ಮಾಲಕಿಯಾದ ಸುಗ್ನಿ ದೇವಿ ಅವರು ದೂರು ನೀಡಿದ್ದು, ವಿಶೇಷ ತನಿಖಾ ತಂಡವು ಆಟೊ ಮಾಲಕಿ ಪತಿ ರಾಮದೇವ್ ಲೋಹ್ರಾ ಅವರನ್ನು ಬಂಧಿಸಿದೆ.
ಆಟೊ ರಿಕ್ಷಾವು ದೇವಿ ಅವರಿಗೆ ಸೇರಿದ್ದಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಆಟೊ ರಿಕ್ಷಾ ಕಳವಾಗಿದೆ ಎಂದು ದೇವಿ ಅವರು ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದರು ಎಂದು ಜಾರ್ಖಂಡ್ ಹೈಕೋರ್ಟ್‌ಗೆ ಈ ಹಿಂದೆ ಮಾಹಿತಿ ನೀಡಲಾಗಿತ್ತು.
ಬಂಧಿರಾಗಿರುವ ಇಬ್ಬರು ಆರೋಪಿಗಳು ಪಾಥರ್ಡಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ್ದು, ಇದೇ ವಿಭಾಗದಲ್ಲಿ ಅಪರಾಧಕ್ಕೆ ಬಳಸಲಾಗಿದ್ದ ತ್ರಿಚಕ್ರ ವಾಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಲಾಗಿದೆ.
ಈ ಮಧ್ಯೆ, ನ್ಯಾ. ಆನಂದ್ ಅವರ ಕುಟುಂಬ ಸದಸ್ಯರು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಭೇಟಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದಾರೆ.