
ನ್ಯಾಯಾಧೀಶರು ಚುನಾಯಿತರಾಗಿಲ್ಲ ತೀರ್ಪುಗಳನ್ನು ಪ್ರಕಟಿಸುವ ಮುನ್ನ ಅವರು ಜನರಿಂದ ಸಾಮಾಜಿಕ ಮಾಧ್ಯಮದ ಅಭಿಪ್ರಾಯ ಸಂಗ್ರಹಿಸಲಾಗದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಹೇಳಿದ್ದಾರೆ.
ಸೊಸೈಟಿ ಫಾರ್ ಡೆಮಾಕ್ರಟಿಕ್ ರೈಟ್ಸ್ ಮತ್ತು ಜಾರ್ಜ್‌ಟೌನ್ ವಿಶ್ವವಿದ್ಯಾಲಯ ಕಾನೂನು ಕೇಂದ್ರ ಡಿಸೆಂಬರ್ 11 ರಂದು ಆಯೋಜಿಸಿದ್ದ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ಸಿಜೆಐ ಖನ್ನಾ ಮಾತನಾಡಿದರು.
ಬದಲಿಗೆ ಯಾವಾಗ ಕಾರ್ಯಪ್ರವೃತ್ತರಾಗಬೇಕು, ಯಾವಾಗ ಸಂಯಮದಿಂದಿರಬೇಕು ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರಿಗೆ ತರಬೇತಿ ನೀಡುವ ಮೂಲಕ ನ್ಯಾಯಾಂಗವನ್ನು ಉತ್ತರದಾಯಿಯನ್ನಾಗಿಸಲಾಗಿದೆ ಎಂದ ಅವರು ಈ ಹೊಣೆಗಾರಿಕೆಯನ್ನು ಕಾಪಾಡಿಕೊಳ್ಳುವಲ್ಲಿ ವಕೀಲ ಸಮುದಾಯ ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು.
ಸಿಜೆಐ ಸಂವಾದದ ಪ್ರಮುಖಾಂಶಗಳು
ನ್ಯಾಯಾಂಗ ಉತ್ತರದಾಯಿಯಾಗಬಲ್ಲದೆ? ನಾವು ಚುನಾಯಿತರಲ್ಲ.
ಸಾಮಾಜಿಕ ಮಾಧ್ಯಮಗಳಿಗೆ ತೆರಳಿ ಜನರೇ ತೀರ್ಪನ್ನು ಇಷ್ಟಪಡುತ್ತೀರಾ ಎಂದು ಕೇಳಲಾಗದು
ನಮ್ಮ ನ್ಯಾಯಾಲಯಗಳು ಮುಕ್ತ ಮತ್ತು ಪಾರದರ್ಶಕವಾಗಿದ್ದು ವಕೀಲರ ವಾದ ಆಲಿಸಿ ತೀರ್ಪಿನ ಮೂಲಕ ನಾವು ಮಾತನಾಡುತ್ತೇವೆ
ಪೀಠದಲ್ಲಿರುವ ವ್ಯಕ್ತಿಗಳು ಸದಾ ಸಮಯದಲ್ಲಿ ನ್ಯಾಯಾಂಗದ ಸಮಗ್ರತೆಯನ್ನು ರೂಪಿಸುವವರು ಹಾಗೂ ಅದನ್ನು ಎತ್ತಿ ಹಿಡಿಯುವವರಾಗಿದ್ದಾರೆ.
ಬಹುಧ್ವನಿ ನ್ಯಾಯಾಲಯಗಳಿದ್ದರೆ ಸಾಕಷ್ಟು ಅನುಕೂಲಗಳಿವೆ. ವಿವಿಧ ಪ್ರದೇಶಗಳ ನ್ಯಾಯಾಧೀಶರು ವಿವಿಧ ಅನುಭವ ದೃಷ್ಟಿಕೋನಗಳನ್ನು ಬಳಸುವುದರಿಂದ ತೀರ್ಪು ನೀಡುವುದಕ್ಕೆ ಬಲ ದೊರೆಯುತ್ತದೆ.
ಭಾರತದ ಕಾನೂನು ನೆರವು ವ್ಯವಸ್ಥೆ ವಿಶ್ವದ ಅತ್ಯಂತ ದೃಢ ನ್ಯಾಯಿಕ ಪ್ರಕ್ರಿಯೆಗಳಲ್ಲಿ ಒಂದಾಗಿದೆ.
ಪರ್ಯಾಯ ವ್ಯಾಜ್ಯ ಪರಿಹಾರದ ಲೋಕ ಅದಾಲತ್ ವ್ಯವಸ್ಥೆ ಯಶಸ್ವಿಯಾಗಿದ್ದು ಕಳೆದ ಏಳು ವರ್ಷಗಳಲ್ಲಿ ಸುಮಾರು 130 ಶತಕೋಟಿ ಪ್ರಕರಣಗಳನ್ನು ಇಂತಹ 'ಜನತಾ ನ್ಯಾಯಾಲಯಗಳು' ವಿಚಾರಣೆ ನಡೆಸಿವೆ.
ಈಗಾಗಲೇ ಪ್ರಕರಣಗಳ ಬಾಕಿ ಹೊರೆಯಾಗಿರುವ ಸಾಂಪ್ರದಾಯಿಕ ನ್ಯಾಯಾಲಯಗಳಿಗೆ ಇದು ದೊಡ್ಡ ಪರಿಹಾರವಾಗಿದೆ.
ಜಾರ್ಜ್‌ಟೌನ್ ಲಾ ವಿವಿಯ ಡೀನ್ ವಿಲಿಯಂ ಎಂ ಟ್ರೇನರ್, ಹಿರಿಯ ನ್ಯಾಯವಾದಿ ವಿಭಾ ಮಖಿಜ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.