ನ್ಯಾಯಮೂರ್ತಿಗಳು ಸರ್ಕಾರಿ ಉದ್ಯೋಗಿಗಳಲ್ಲ; ಜಿಲ್ಲಾ ನ್ಯಾಯಾಂಗದ ಸ್ವಾತಂತ್ರ್ಯವು ಮೂಲತತ್ವದ ಭಾಗ: ಸುಪ್ರೀಂ ಕೋರ್ಟ್‌

ಜಿಲ್ಲಾ ನ್ಯಾಯಾಂಗದ ಸೇವೆ ಮತ್ತು ವೇತನ ಷರತ್ತಿಗೆ ಸಂಬಂಧಿಸಿದಂತೆ ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗ ಮಾಡಿರುವ ಹಲವು ಶಿಫಾರಸ್ಸುಗಳನ್ನು ನ್ಯಾಯಾಲಯವು ಪರಿಗಣಿಸಿದ್ದು, ಅವುಗಳನ್ನು ಒಪ್ಪಿದೆ.
Justice V Ramasubramanian, CJI DY Chandrachud and Justice PS Narasimha
Justice V Ramasubramanian, CJI DY Chandrachud and Justice PS Narasimha

ದೇಶದಲ್ಲಿ ಬಹುತೇಕ ದಾವೆದಾರರಿಗೆ ಭೌತಿಕವಾಗಿ ನ್ಯಾಯದಾನ ಪಡೆಯಲು ಲಭ್ಯವಿರುವ ಏಕೈಕ ಸಂಸ್ಥೆ ಎಂದರೆ ಅದು ಜಿಲ್ಲಾ ನ್ಯಾಯಾಂಗವಾಗಿದೆ. ಹೀಗಾಗಿ, ಅದರ ಸ್ವಾತಂತ್ರ್ಯಕ್ಕೆ ಹೆಚ್ಚು ಮಹತ್ವವಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದೆ [ಅಖಿಲ ಭಾರತ ನ್ಯಾಯಾಧೀಶರ ಒಕ್ಕೂಟ ವರ್ಸಸ್‌ ಭಾರತ ಸರ್ಕಾರ].

ನ್ಯಾಯಾಂಗ ಅಧಿಕಾರಿಗಳ ಸೇವಾ ಉನ್ನತಿ ಷರತ್ತುಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್‌ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.

ಜಿಲ್ಲಾ ನ್ಯಾಯಾಲಯದಲ್ಲಿ ನಿಷ್ಪಕ್ಷಪಾತ ಮತ್ತು ಸ್ವತಂತ್ರ ನ್ಯಾಯಾಧೀಶರು ಇಲ್ಲದಿದ್ದರೆ ನ್ಯಾಯದಾನವು ಭ್ರಮೆಯಾಗಿರಲಿದೆ ಎಂದು ಪೀಠವು ಹೇಳಿದೆ.

“ಜಿಲ್ಲಾ ನ್ಯಾಯಾಂಗದ ಸ್ವಾತಂತ್ರ್ಯವು ಕೂಡ ಸಂವಿಧಾನ ಮೂಲತತ್ವದ ಭಾಗವೇ ಆಗಿದೆ. ಜಿಲ್ಲಾ ನ್ಯಾಯಾಂಗದಲ್ಲಿ ನಿಷ್ಪಕ್ಷಪಾತ ಮತ್ತು ಸ್ವತಂತ್ರ ನ್ಯಾಯಾಧೀಶರು ಇಲ್ಲದಿದ್ದರೆ ನ್ಯಾಯದಾನ ಮಾಡುವ ಗುರಿಯು ಭ್ರಮೆಯಾಗಲಿದೆ. ಹಲವು ಪ್ರಕರಣಗಳಲ್ಲಿ ಜಿಲ್ಲಾ ನ್ಯಾಯಾಲಯವು ದಾವೆದಾರರಿಗೆ ಹೆಚ್ಚು ಹತ್ತಿರವಾದ ನ್ಯಾಯಾಲಯವಾಗಿದೆ” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

“ಅಧಿಕಾರ ಪ್ರತ್ಯೇಕತೆಯು ನ್ಯಾಯಾಂಗದ ಅಧಿಕಾರಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಹೇಳುತ್ತದೆ. ಅವರು ಶಾಸಕಾಂಗ ಮತ್ತು ಕಾರ್ಯಾಂಗದ ಸಿಬ್ಬಂದಿಗಿಂತ ಭಿನ್ನವಾಗಿರುತ್ತಾರೆ. ನ್ಯಾಯಾಧೀಶರು ಸರ್ಕಾರದ ಉದ್ಯೋಗಿಗಳಲ್ಲ. ಆದರೆ, ಅವರಿಗೆ ಸಾರ್ವಭೌಮವಾದ ನ್ಯಾಯಾಂಗ ಅಧಿಕಾರವಿದ್ದು, ಸಾರ್ವಜನಿಕ ಕಚೇರಿಯ ನೇತೃತ್ವವಹಿಸುತ್ತಾರೆ ಎಂಬುದನ್ನು ನೆನಪಿಸಿನಲ್ಲಿರಿಸಿಕೊಳ್ಳಬೇಕು. ಹಾಗೆ ನೋಡುವುದಾದರೆ ನ್ಯಾಯಾಧೀಶರನ್ನು ಶಾಸನ ಸಭೆ ಸದಸ್ಯರು ಮತ್ತು ಕಾರ್ಯಾಂಗದಲ್ಲಿ ಸಚಿವರಿಗೆ ಮಾತ್ರ ಹೋಲಿಕೆ ಮಾಡಬಹುದು. ಹೀಗಾಗಿ, ಶಾಸಕಾಂಗ ಮತ್ತು ಕಾರ್ಯಾಂಗದ ಸಿಬ್ಬಂದಿಗಳಿಗೆ ಸಮಾನವಾಗಿ ನ್ಯಾಯಾಂಗದ ಅಧಿಕಾರಿಗಳನ್ನು ಕಾಣಲಾಗದು” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com