ನ್ಯಾಯಮೂರ್ತಿಗಳು ಮಾಧ್ಯಮದ ಒತ್ತಡದಿಂದ ಹೊರತಾಗಿಲ್ಲ, ಮಾಧ್ಯಮ ಸಂಕಥನ ಪ್ರಕರಣದ ದಿಕ್ಕು ಬದಲಿಸಬಹುದು: ನ್ಯಾ. ಭಂಭಾನಿ

ವಿದ್ಯುನ್ಮಾನ ದಾಖಲೆಗಳು, ಸರ್ವರ್‌ಗಳು ಮತ್ತು ಕಂಪ್ಯೂಟರ್‌ ಸಾಧನಗಳನ್ನು ವಶಪಡಿಸಿಕೊಂಡು ಅವುಗಳಲ್ಲಿ ಕೆಲವೇ ಕೆಲವನ್ನು ಸಾಕ್ಷಿ ಎಂದು ಪ್ರಸ್ತುತಪಡಿಸುವ ತನಿಖಾ ಸಂಸ್ಥೆಗಳ ಬಗ್ಗೆಯೂ ನ್ಯಾ. ಭಂಭಾನಿ ಮಾತನಾಡಿದರು.
Justice Anup Jairam Bhambhani
Justice Anup Jairam Bhambhani

ನ್ಯಾಯಮೂರ್ತಿಗಳು ಮತ್ತು ತನಿಖಾ ಸಂಸ್ಥೆಗಳು ಮಾಧ್ಯಮದ ಒತ್ತಡದಿಂದ ಹೊರತಾಗಿಲ್ಲ ಮತ್ತು ಅವರು ಏನು ಓದುತ್ತಾರೋ ಅದು ಅವರ ಯೋಚನೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಅನೂಪ್‌ ಜಯರಾಂ ಭಂಭಾನಿ ಹೇಳಿದರು.

ಕ್ರಿಮಿನಲ್‌ ಮತ್ತು ಸಾಂವಿಧಾನಿಕ ನ್ಯಾಯವ್ಯವಸ್ಥೆಯ ಸಂವಾದ ಕೇಂದ್ರ ಆಯೋಜಿಸಿದ್ದ ʼನ್ಯಾಯಯುತ ವಿಚಾರಣೆ: ಕಾಲ್ಪನಿಕ ಕತೆ, ಸಂಕಥನ ಅಥವಾ ಮತ್ತಷ್ಟುʼ ಎಂಬ ವಿಚಾರದ ಮೇಲೆ ಅವರು ಮಾತನಾಡಿದರು.

ಮಾಧ್ಯಮಗಳ ಕಟ್ಟುವ ಕಥನ (ಸಂಕಥನ) ಮತ್ತು ಮಾಧ್ಯಮ ವಿಚಾರಣೆಯು ಪ್ರಕರಣದ ದಿಕ್ಕು ಬದಲಿಸುತ್ತದೆ ಎಂದು ಅವರು ಹೇಳಿದರು. “ನ್ಯಾಯಮೂರ್ತಿಗಳು, ವಕೀಲರು ಮತ್ತು ಕ್ರಿಮಿನಲ್‌ ನ್ಯಾಯದಾನ ವ್ಯವಸ್ಥೆಯಲ್ಲಿ ನಿರತವಾಗಿರುವ ನಾವು ಏನು ಓದುತ್ತೇವೆಯೋ ಅದು ನಮ್ಮ ಯೋಚನೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ನಾವು ಯಾವಾಗಲೂ ನೆನಪಿಸಿಕೊಳ್ಳಬೇಕು ಮತ್ತು ಅದರ ಬಗ್ಗೆ ಪ್ರಜ್ಞಾಪೂರ್ವಕವಾಗಿರಬೇಕು” ಎಂದು ನ್ಯಾ. ಭಂಭಾನಿ ಹೇಳಿದರು.

ದೇಶದಲ್ಲಿ ನ್ಯಾಯಯುತ ವಿಚಾರಣೆಗೆ ಎದುರಾಗುವ ಸಮಸ್ಯೆಗಳು ಮತ್ತು ಮಾಧ್ಯಮಗಳ ಒತ್ತಡ, ತನಿಖಾ ಸಂಸ್ಥೆಗಳ ಪಾತ್ರ ಹಾಗೂ ಕಾನೂನು ನೆರವು ವಿಚಾರಗಳ ಕುರಿತು ನ್ಯಾ. ಭಂಭಾನಿ ಮಾತನಾಡಿದರು.

ವಿದ್ಯುನ್ಮಾನ ದಾಖಲೆಗಳು, ಸರ್ವರ್‌ಗಳು ಮತ್ತು ಕಂಪ್ಯೂಟರ್‌ ಸಾಧನಗಳನ್ನು ವಶಪಡಿಸಿಕೊಂಡು ಅವುಗಳಲ್ಲಿ ಕೆಲವೇ ಕೆಲವನ್ನು ಸಾಕ್ಷಿ ಎಂದು ಪ್ರಸ್ತುತಪಡಿಸುವ ತನಿಖಾ ಸಂಸ್ಥೆಗಳ ಬಗ್ಗೆಯೂ ನ್ಯಾ. ಭಂಭಾನಿ ಮಾತನಾಡಿದರು.

“ಇತ್ತೀಚೆಗೆ ನಡೆಯುತ್ತಿರುವ ಅನೇಕ ಹಣಕಾಸು ಅಪರಾಧ ಸಂಬಂಧಿ ತನಿಖೆಗಳಲ್ಲಿ, ತನಿಖಾಧಿಕಾರಿಗಳು ಕಚೇರಿಗಳ ಮೇಲೆ ದಾಳಿ ಮಾಡಿ ವಿದ್ಯುನ್ಮಾನ ದಾಖಲೆಗಳನ್ನು ಇಡಿಯಾಗಿ ಹೊತ್ತೊಯ್ಯುತ್ತಾರೆ, ಸರ್ವರ್‌ ಮತ್ತು ಕಂಪ್ಯೂಟರ್‌ ಸಾಧನಗಳನ್ನು ಕೊಂಡೊಯ್ಯುತ್ತಾರೆ. ಅವರು ನಕಲು ಪ್ರತಿಗಳನ್ನಾಗಲಿ, ಕ್ಲೋನ್‌ಗಳನ್ನಾಗಲಿ ಬಿಟ್ಟು ಹೋಗುವುದಿಲ್ಲ. 10,000 ಈಮೇಲ್‌ಗಳಿದ್ದರೆ ಅದರಲ್ಲಿ ಆಯ್ದ ಐದೇ ಐದನ್ನು ನ್ಯಾಯಾಲಯದ ಮುಂದಿಟ್ಟು, ಈ ಈ ವ್ಯಕ್ತಿ ಅಪರಾಧಿ ಎನ್ನುತ್ತಾರೆ” ಎಂದು ತನಿಖಾ ಸಂಸ್ಥೆಗಳ ಕಾರ್ಯವೈಖರಿಗೆ ನ್ಯಾ. ಭಂಭಾನಿ ಕನ್ನಡಿ ಹಿಡಿದರು.  

ಮೌನದ ಹಕ್ಕಿನ ಕುರಿತಾಗಿ ಮಾತನಾಡಿದ ನ್ಯಾ. ಭಂಭಾನಿ ಅವರು ತನಿಖೆಗೆ ಸಹಕಾರ ನೀಡುವ ಹಾಗೂ ತಪ್ಪೊಪ್ಪಿಗೆಯ ನಡುವೆ ವಿಷದೀಕರಿಸುವಂತಹ ಗೆರೆ ಎಳೆಯುವ ಅಗತ್ಯದ ಬಗ್ಗೆ ಹೇಳಿದರು.

ʼಮುಗ್ಧತೆಯ ಪೂರ್ವಭಾವನೆʼ (ಪ್ರಿಸಂಪ್ಷನ್‌ ಆಫ್‌ ಇನೊಸೆನ್ಸ್‌) ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಿದ್ಧಾರ್ಥ್‌ ಮೃದುಲ್‌ ಅವರು “ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗತ ಸ್ವಾತಂತ್ರ್ಯದ ರಕ್ಷಣೆಯು ಮೂಲಭೂತ ಕರ್ತವ್ಯವಾಗಿದೆ. ಈಗ ಅದು ಸಂವಿಧಾನದ ಮೂಲರಚನೆಯ ಭಾಗ” ಎಂದರು.

Related Stories

No stories found.
Kannada Bar & Bench
kannada.barandbench.com