Justice BV Nagarathna
Justice BV Nagarathna

ನ್ಯಾಯಾಧೀಶರು ವರ್ಚುವಲ್ ವಿಧಾನದಲ್ಲಿ ಹಾಜರಾಗುವ ದಾವೆದಾರರು, ವಕೀಲರ ಮುಖಭಂಗ ಮಾಡಬಾರದು: ನ್ಯಾ. ಬಿ ವಿ ನಾಗರತ್ನ

ಹೈಬ್ರಿಡ್ ವಿಚಾರಣೆ ಪರವಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ತಳೆದಿರುವ ಸಕಾರಾತ್ಮಕ ನಿಲುವನ್ನು ನ್ಯಾ ನಾಗರತ್ನ ಪ್ರಸ್ತಾಪಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವ ವಕೀಲರು ಮತ್ತು ದಾವೆದಾರರನ್ನು ಪ್ರೋತ್ಸಾಹಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ನ್ಯಾಯಾಂಗವನ್ನು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಇಂದು (ಶನಿವಾರ) ಹಮ್ಮಿಕೊಳ್ಳಲಾಗಿದ್ದ ರಾಮಯ್ಯ ಕಾನೂನು ಕಾಲೇಜಿನ ಬೆಳ್ಳಿಹಬ್ಬ ಸಮಾರಂಭದಲ್ಲಿ  ಅವರು ಮಾತನಾಡಿದರು.

ಭೌತಿಕವಾಗಿ ಹಾಜರಾಗುವವನ್ನು ಕಾಣುವಂತೆಯೇ ಆನ್‌ಲೈನ್‌ ಮೂಲಕ ವಿಚಾರಣೆಗೆ ಹಾಜರಾಗುವವರನ್ನು ಪರಿಗಣಿಸಬೇಕು ಎಂದ ಅವರು ಹೈಬ್ರಿಡ್‌ ವಿಚಾರಣೆ ಪರವಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ತಳೆದಿರುವ ನಿಲುವನ್ನು ಪ್ರಸ್ತಾಪಿಸಿದರು.

ವರ್ಚುವಲ್ ಕೋರ್ಟ್‌ಗಳು ತೆರೆದ ನ್ಯಾಯಾಲಯಗಳಂತಿರಬೇಕು. ವರ್ಚುವಲ್‌ ವಿಧಾನದಲ್ಲಿ ಹಾಜರಾಗುವವರನ್ನು ನ್ಯಾಯಾಧೀಶರು ನಿರ್ಲಕ್ಷಿಸಬಾರದು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ವರ್ಚುವಲ್‌ ಕಲಾಪವನ್ನು ಪ್ರೋತ್ಸಾಹಿಸುತ್ತಿದ್ದರೂ ಅದನ್ನು ಒಲ್ಲದ ನ್ಯಾಯಾಧೀಶರಿದ್ದಾರೆ. ಅಂತಹವರು ವರ್ಚುವಲ್‌ ವಿಚಾರಣೆಗೆ ಅಡ್ಡಿಪಡಿಸಬಾರದು ಎಂದು ಅವರು ಹೇಳಿದರು.

ಕುತೂಹಲಕರ ಸಂಗತಿ ಎಂದರೆ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ಕಳೆದ ವರ್ಷ ನ್ಯಾ. ನಾಗರತ್ನ ಅವರೊಂದಿಗೆ ರಜಾಕಾಲದ ಪೀಠದಲ್ಲಿ ವಿಚಾರಣೆ ನಡೆಸುತ್ತಿದ್ದಾಗ, ವಕೀಲರು ವರ್ಚುವಲ್‌ ವಿಧಾನದಲ್ಲಿ ಹಾಜರಾಗಲು ಅವಕಾಶ ನಿರಾಕರಿಸಿದ್ದರು.

ಭಾಷಣದ ವೇಳೆ ನ್ಯಾ. ನಾಗರತ್ನ ಅವರು ನ್ಯಾಯದಾನವನ್ನು ಸಮಾನವಾಗಿ ಎಲ್ಲರಿಗೂ ದೊರಕಿಸಿಕೊಡುವ ಮೊದಲ ಹಂತ ಎಂದರೆ ಸಮಾಜದ ಹಿಂದುಳಿದ ವರ್ಗಗಳಿಗೆ ಕಾನೂನು ನೆರವು ನೀಡುವುದಾಗಿದೆ ಎಂದರು.

"ಬಡವರಿಗೆ ಕಾನೂನು ನೆರವು ಒದಗಿಸುವುದು ಎಂದರೆ ಕಳಪೆ ಕಾನೂನು ನೆರವು ಒದಗಿಸುವುದು ಎಂದಲ್ಲ. ಅದು ಗುಣಾತ್ಮಕವಾಗಿರಬೇಕು ಎಂದು ನಾನು ಒತ್ತಿ ಹೇಳುತ್ತೇನೆ. ಜನರು ಕಾನೂನು ನೆರವು ಪಡೆಯದೆ ಇರಲು ಇರುವ ಕಾರಣವೆಂದರೆ ಒಂದು ಅವರು ತಮ್ಮ ಕಾನೂನು ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಹೊಂದಿಲ್ಲ, ಮತ್ತೊಂದು ತಮಗೆ ದೊರೆಯುವ ಕಾನೂನು ನೆರವಿನ ಗುಣಮಟ್ಟದ ಬಗ್ಗೆ ಅವರಿಗೆ ವಿಶ್ವಾಸವಿರುವುದಿಲ್ಲ. ಇದು ನಿಜಕ್ಕೂ ಅಪಾಯಕಾರಿ. ನಾನು ಎಲ್ಲ ವಕೀಲರಿಗೆ ಸ್ವಯಂ ಕಾನೂನು ಸೇವೆ ಒದಗಿಸಲು ಕೋರುತ್ತೇನೆ. ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿ ನಡೆಸುತ್ತಿರುವ 200 ಹಿರಿಯ ವಕೀಲರು ವರ್ಷಕ್ಕೆ ಕನಿಷ್ಠ 2 ಪ್ರಕರಣಗಳಲ್ಲಿ ಸ್ವಯಂ ಸೇವೆ ಒದಗಿಸಿದರೆ ಅದು ಅಗಾಧ ಪ್ರಮಾಣದಲ್ಲಿ ಸಹಾಯ ನೀಡಿದಂತಾಗುತ್ತದೆ" ಎಂದು ಅವರು ಈ ವೇಳೆ ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ, ಅರವಿಂದ್ ಕುಮಾರ್, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಜಿ ನರೇಂದ್ರ ಹಾಗೂ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹಾಗೂ ಆಂಧ್ರಪ್ರದೇಶ ರಾಜ್ಯಪಾಲರಾದ  ಎಸ್ ಅಬ್ದುಲ್ ನಜೀರ್ ಈ ಸಂದರ್ಭದಲ್ಲಿ ಮಾತನಾಡಿದರು.

Related Stories

No stories found.
Kannada Bar & Bench
kannada.barandbench.com