ನ್ಯಾಯಾಂಗ ಸ್ವಾತಂತ್ರ್ಯಕ್ಕೆ ನ್ಯಾಯಮೂರ್ತಿಗಳ ವಸತಿ ನಿಲಯ ಅಗತ್ಯ: ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

ನ್ಯಾಯಾಂಗದ ಸ್ವಾತಂತ್ರ್ಯವು ಸಂವಿಧಾನದ ಮೂಲಭೂತ, ಮೂಲಭೂತ ರಚನೆಯ ಲಕ್ಷಣವಾಗಿದ್ದು, ವಸತಿ ಸೇರಿದಂತೆ ಹೈಕೋರ್ಟ್‌ ನ್ಯಾಯಮೂರ್ತಿಗಳ ಸೇವಾ ಪರಿಸ್ಥಿತಿಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಚೌಕಟ್ಟಿನ ಭಾಗ ಎಂದಿರುವ ಹೈಕೋರ್ಟ್‌.
Justice DK and Justice TM Nadaf
Justice DK and Justice TM Nadaf
Published on

ನ್ಯಾಯಾಲಯಗಳು ಸ್ವತಂತ್ರ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನ್ಯಾಯಮೂರ್ತಿಗಳಿಗೆ ಅಧಿಕೃತ ವಸತಿ, ಸಾರಿಗೆ, ಗ್ರಂಥಾಲಯಗಳು ಮತ್ತು ಸಂಬಂಧಿತ ಭತ್ಯೆಗಳಂತಹ ಸೌಲಭ್ಯಗಳು ಅತ್ಯಗತ್ಯ ಎಂದಿರುವ ಕರ್ನಾಟಕ ಹೈಕೋರ್ಟ್‌, ನಗರದ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿಗೆ ಸೇರಿದ ಭೂಮಿಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ವಸತಿ ನಿಲಯ (ಜಡ್ಜಸ್‌ ಕ್ವಾರ್ಟಸ್‌) ನಿರ್ಮಾಣಕ್ಕಾಗಿ ವರ್ಗಾಯಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದೆ.

ಕರ್ನಾಟಕ ಪಶುವೈದ್ಯಕೀಯ ಸಂಘ, ಬೆಂಗಳೂರು ಪಶುವೈದ್ಯಕೀಯ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ, ಹಿರಿಯ ಪಶುವೈದ್ಯರ ಸಂಘ ಹಾಗೂ ಡೈರಿ ಸೈನ್ಸ್‌ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಗಳು ಸಲ್ಲಿಸಿದ್ದ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ನ್ಯಾಯಾಂಗದ ಸ್ವಾತಂತ್ರ್ಯವು ಸಂವಿಧಾನದ ಮೂಲಭೂತ, ಮೂಲಭೂತ ರಚನೆಯ ಲಕ್ಷಣವಾಗಿದ್ದು, ವಸತಿ ಸೇರಿದಂತೆ ಹೈಕೋರ್ಟ್‌ ನ್ಯಾಯಮೂರ್ತಿಗಳ ಸೇವಾ ಪರಿಸ್ಥಿತಿಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಚೌಕಟ್ಟಿನ ಭಾಗವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಸಂಪೂರ್ಣ ಸುಸಜ್ಜಿತ ಅಧಿಕೃತ ವಸತಿ ಸೌಕರ್ಯಗಳಿಗೆ ಅರ್ಹರಾಗಿದ್ದಾರೆ. ಇದು ನ್ಯಾಯಮೂರ್ತಿಗಳ ಸೇವಾ ಪರಿಸ್ಥಿತಿಗಳು ಮತ್ತು ನ್ಯಾಯಾಂಗ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯವಾದ ಸೌಲಭ್ಯಗಳಲ್ಲಿ ಹುದುಗಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ಸಾಂವಿಧಾನಿಕ ಅಧಿಕಾರದ ಸ್ಥಾನಮಾನಕ್ಕೆ ಸೂಕ್ತವಾದ ಸಂಪೂರ್ಣ ಸುಸಜ್ಜಿತ ಅಧಿಕೃತ ವಸತಿ ಸೌಕರ್ಯ ಒದಗಿಸುವುದು ರಾಜ್ಯದ ಕರ್ತವ್ಯವಾಗಿದೆ ಎಂದಿರುವ ಪೀಠ ಭೂಮಿ ಹಸ್ತಾಂತರವನ್ನು ಎತ್ತಿಹಿಡಿದಿದೆ.

ರಾಜ್ಯ ಹೈಕೋರ್ಟ್‌ಗೆ 62 ನ್ಯಾಯಮೂರ್ತಿ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ 19 ಅಧಿಕೃತ ನಿವಾಸಗಳು ಮಾತ್ರ ಲಭ್ಯವಿವೆ. ಹಲವು ನ್ಯಾಯಮೂರ್ತಿಗಳು ಬಾಡಿಗೆ ವಸತಿಗಳಲ್ಲಿ ವಾಸಿಸುತ್ತಿದ್ದಾರೆ. ಇದು ಹೈಕೋರ್ಟ್‌ ನ್ಯಾಯಮೂರ್ತಿಗಳಂತಹ ಸಾಂವಿಧಾನಿಕ ಅಧಿಕಾರದಲ್ಲಿರುವವರಿಗೆ ಹೊಂದಿಕೆಯಾಗುವುದಿಲ್ಲ ಎಂದು ಪೀಠ ಹೇಳಿದೆ.

ನ್ಯಾಯಮೂರ್ತಿಗಳ ಕ್ವಾರ್ಟಸ್‌ ನಿರ್ಮಾಣಕ್ಕೆ ಮಂಜೂರು ಮಾಡಲಾದ ನಾಲ್ಕು ಎಕರೆ ಜಮೀನು ಹೆಚ್ಚುವರಿ ಭೂಮಿಯಾಗಿದೆ. ಅಂತಹ ಭೂ ವರ್ಗಾವಣೆಯು ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆಯ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಬದಲಾಗಿ ಭೂ ವರ್ಗಾವಣೆಯು ನ್ಯಾಯಾಂಗದ ಸ್ವಾತಂತ್ರ್ಯ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ನ್ಯಾಯಗ್ರಾಮದ ಪಕ್ಕದಲ್ಲಿರುವ ನಾಲ್ಕು ಎಕರೆ ಭೂಮಿಯನ್ನು ಹಂಚಿಕೆ ಮಾಡುವುದರಿಂದ ಯಾವುದೇ ರೀತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಅಡ್ಡಿಯಾಗುತ್ತದೆ ಅಥವಾ ವಿರುದ್ಧವಾಗಿದೆ ಎಂದು ಅನಿಸುವುದಿಲ್ಲ. ಆದರೆ, ಇದು ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಸಲುವಾಗಿ, ಅಂದರೆ ಸಂವಿಧಾನದ ಮೂಲ ಅಡಿಪಾಯವಾದ ನ್ಯಾಯಾಂಗದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಪೀಠ ಆದೇಶಿಸಿದೆ.

ಇದೇ ವೇಳೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಮೂರು ಎಕರೆ ಕಾಲೇಜು ಭೂಮಿ ವರ್ಗಾವಣೆ ಪ್ರಶ್ನಿಸಿದ್ದ ಅರ್ಜಿಗಳನ್ನೂ ವಜಾಗೊಳಿಸಿರುವ ನ್ಯಾಯಾಲಯ, ಪಶುವೈದ್ಯಕೀಯ ಕಾಲೇಜಿನಲ್ಲಿ ಪ್ರಸ್ತುತ ಅಗತ್ಯವಿರುವ ಭೂಮಿಗಿಂತ ಹೆಚ್ಚುವರಿ ಭೂಮಿ ಇದ್ದಾಗ ಸಾರ್ವಜನಿಕರಿಗಾಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಮಂಜೂರು ಮಾಡಲಾದ ಮೂರು ಎಕರೆ ಭೂಮಿಯನ್ನು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ಎಂದು ಹೇಳಲಾಗುವುದಿಲ್ಲ. ವಾಸ್ತವವಾಗಿ, ಸರ್ಕಾರ ಸಾರ್ವಜನಿಕರಿಗಾಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಹೊಂದುವ ಮೂಲಕ ದೊಡ್ಡ ಸಾರ್ವಜನಿಕ ಹಿತಾಸಕ್ತಿಯನ್ನು ಪೂರೈಸುತ್ತಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ ನ್ಯಾಯಮೂರ್ತಿಗಳ ವಸತಿ ನಿಲಯ ಹಾಗೂ ಸಾರ್ವಜನಿಕರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಿಂದ (ಕೆವಿಎಎಫ್‌ಎಸ್‌ಯು) ಏಳು ಎಕರೆ ಭೂಮಿಯನ್ನು ವರ್ಗಾಯಿಸಲು ನಿರ್ದೇಶಿಸಿದ ಸರ್ಕಾರಿ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು.

ಭೂಮಿಯ ವರ್ಗಾವಣೆಯು ಜಾಗದ ಕೊರತೆಗೆ ಕಾರಣವಾಗಲಿದ್ದು, ಪಶುವೈದ್ಯಕೀಯ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸುವ ಅಪಾಯವಿದೆ. ಭೂಮಿಯ ಕೊರತೆಯು ಕೆವಿಎಎಫ್‌ಎಸ್‌ಯು‌ನ ಶ್ರೇಯಾಂಕವನ್ನು ಇಳಿಕೆ ಮಾಡುತ್ತದೆ ಹಾಗೂ ಇದು ಭಾರತೀಯ ಪಶುವೈದ್ಯಕೀಯ ಮಂಡಳಿಯಿಂದ ಅನುದಾನ ಕಡಿತಕ್ಕೆ ಕಾರಣವಾಗುತ್ತದೆ ಎಂದು ಪೀಠಕ್ಕೆ ವಿವರಿಸಲಾಗಿತ್ತು.

Kannada Bar & Bench
kannada.barandbench.com