ದುರಾಸೆಗೆ ಬಲಿಯಾಗುವ ನ್ಯಾಯಾಧೀಶರನ್ನು ಕಿತ್ತೊಗೆಯಬೇಕು: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ

ನಕಲಿ ಕೃತಕ ಬುದ್ದಿಮತ್ತೆ ಪ್ರಕರಣಗಳನ್ನು ಉಲ್ಲೇಖಿಸುವ ವಿಚಾರ ಪ್ರಸ್ತಾಪಿಸಿದ ನ್ಯಾ. ನಾಗರತ್ನ ಅವರು ಭವಿಷ್ಯದ ನ್ಯಾಯದಾನವನ್ನು ನ್ಯಾಯಮೂರ್ತಿಗಳು ಮತ್ತು ಸಾಂವಿಧಾನಿಕ ಮೌಲ್ಯಗಳು ವಿನ್ಯಾಸಗೊಳಿಸಬೇಕೆ ವಿನಾ ಕೃತಕ ಬುದ್ದಿಮತ್ತೆಯಲ್ಲ ಎಂದರು.
Supreme Court Justice BV Nagarathna
Supreme Court Justice BV Nagarathna
Published on

“ತಮ್ಮ ಸಂಪಾದನೆಯಲ್ಲಿ ಬದುಕಲು ಸಾಧ್ಯವಾಗದ ಮತ್ತು ದುರಾಸೆ ಮತ್ತು ಪ್ರಲೋಭನೆಗೆ ಒಳಗಾಗುವ ನ್ಯಾಯಾಧೀಶರನ್ನು ನ್ಯಾಯಾಂಗ ವ್ಯವಸ್ಥೆಯಿಂದ ಕಿತ್ತೊಗೆಯಬೇಕು” ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಹೇಳಿದರು.

ಬೆಂಗಳೂರಿನ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

“ನ್ಯಾಯಾಧೀಶರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಧೈರ್ಯ ಮತ್ತು ಸ್ವತಂತ್ರರಾಗಿರಬೇಕು. ಪ್ರಕರಣಗಳನ್ನು ನಿರ್ಧರಿಸುವಾಗ ಬಾಹ್ಯ ವಿಚಾರಗಳಿಂದ ಪ್ರಭಾವಿತರಾಗಕೂಡದು” ಎಂದು ಎಚ್ಚರಿಸಿದರು.

"ನಿರ್ಧಾರ ತೆಗೆದುಕೊಳ್ಳುವಾಗ ಯಾವುದೇ 'ಸಮನ್ವಯ' ಇರಲು ಸಾಧ್ಯವಿಲ್ಲ. ನ್ಯಾಯಾಧೀಶರ ಕಳಂಕಿತ ನಿರ್ಧಾರವು ನ್ಯಾಯಾಧೀಶರು ಮತ್ತು ನ್ಯಾಯಾಂಗದ ಮೇಲಿನ ಕಪ್ಪು ಚುಕ್ಕೆ” ಎಂದು ನ್ಯಾಯಮೂರ್ತಿ ನಾಗರತ್ನ ಅವರು ಒತ್ತಿ ಹೇಳಿದರು.

“ಕಾನೂನು ಸಂಶೋಧನೆಗೆ ಕೃತಕ ಬುದ್ದಿಮತ್ತೆ ಬಳಕೆ ಮಾಡುವಾಗ ಎಚ್ಚರದಿಂದ ಇರಬೇಕು. ಕೃತಕ ಬುದ್ದಿಮತ್ತೆಯು ಸುಳ್ಳಿನಿಂದ ಕೂಡಿದ ಕೇಸ್‌ ಲಾಗಳನ್ನು ಹಾಜರುಪಡಿಸಿದ ಸಂದರ್ಭಗಳಿವೆ. ಅದು ನನ್ನ ಪೀಠದ ಮುಂದೆಯೇ ಇಂಥದ್ದೊಂದು ಉದಾಹರಣೆ ನಡೆದಿದೆ” ಎಂದರು.  

“ನ್ಯಾಯಾಂಗ ಪೂರ್ವನಿದರ್ಶನಗಳನ್ನು ಆಧರಿಸಿರುವ ವಕೀಲರು, ತಾವು ಆಧರಿಸಿರುವ ತೀರ್ಪುಗಳು ನ್ಯಾಯಯುತ ಮತ್ತು ಸಂಬಂಧಿತ ಜರ್ನಲ್‌ಗಳಲ್ಲಿ ವರದಿಯಾಗಿರುವುದಕ್ಕೆ ಪೂರಕವಾಗಿ ಪ್ರಮಾಣಪತ್ರ ಸಲ್ಲಿಸುವ ಸಂದರ್ಭ ನಿರ್ಮಾಣವಾಗಿದೆ” ಎಂದರು.

“ಯಾವುದೇ ನ್ಯಾಯಾಂಗ ಅಧಿಕಾರಿಯು ತಮ್ಮ ನಿಜವಾದ ಕುಂದುಕೊರತೆಗಳನ್ನು ಪರಿಹರಿಸಲು ಹೈಕೋರ್ಟ್‌ ರಿಜಿಸ್ಟ್ರಿಯು ಸೂಕ್ತ ಸಮಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿ ತಾನು ಸಂಕಷ್ಟದಲ್ಲಿ ಸಿಲುಕಿದ್ದೇನೆ ಎಂದು ಭಾವಿಸಬಾರದು” ಎಂದು ಅವರು ಹೇಳಿದರು.

Also Read
ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯಗಳು ಸಂಗ್ರಹಿಸುತ್ತಿರುವ ಶೇ.75ರಷ್ಟು ಹಣವನ್ನಾದರೂ ಮರಳಿಸಿ: ನ್ಯಾ. ಕುಮಾರ್‌ ಆಗ್ರಹ

"ಮಹಿಳಾ ನ್ಯಾಯಾಧೀಶರಿಗೆ ಸುರಕ್ಷತೆ, ಘನತೆ ಮತ್ತು ಅನುಕೂಲಕರ ಕೆಲಸದ ಪರಿಸ್ಥಿತಿಗಳು ಇರಬೇಕು" ಎಂದೂ ಹೇಳಿದ ನ್ಯಾ. ನಾಗರತ್ನ ಅವರು ಕರ್ನಾಟಕ ನ್ಯಾಯಾಂಗವು ದೇಶದಲ್ಲಿ ಅತ್ಯುತ್ತಮವಾದ ವ್ಯವಸ್ಥೆಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

“ಭವಿಷ್ಯದ ನ್ಯಾಯದಾನವನ್ನು ಕೃತಕ ಬುದ್ದಿಮತ್ತೆ ವಿನ್ಯಾಸಗೊಳಿಸಲಾಗದು. ಅದನ್ನು ನ್ಯಾಯಮೂರ್ತಿಗಳೇ ಮಾಡಬೇಕು. ಪರಿಕರಗಳ ಬೆಂಬಲ, ಸಾಂವಿಧಾನಿಕ ಮೌಲ್ಯ, ಕಾನೂನು, ಸಮಾನತೆ ಮತ್ತು ನ್ಯಾಯಯುತೆಗಿನ ಬದ್ಧತೆಯಿಂದ ಮಾತ್ರ ಅದು ಸಾಧ್ಯ” ಎಂದು ಹೇಳಿದರು.

Kannada Bar & Bench
kannada.barandbench.com