ನ್ಯಾಯಾಂಗದ ಸ್ವಾತಂತ್ರ್ಯಕ್ಕಾಗಿ ನ್ಯಾಯಾಧೀಶರು ಆರ್ಥಿಕ ಘನತೆಯಿಂದ ಜೀವನ ನಡೆಸುವುದು ಅತ್ಯಗತ್ಯ: ಸುಪ್ರೀಂ ಕೋರ್ಟ್

ನ್ಯಾಯಾಧೀಶರು ತಮ್ಮ ಜೀವನದ ಗಮನಾರ್ಹ ಭಾಗವನ್ನು ನ್ಯಾಯಾಂಗ ಸಂಸ್ಥೆಯ ಸೇವೆಯಲ್ಲಿ ಕಳೆಯುತ್ತಾರೆ ಎಂದಿರುವ ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠವು ನ್ಯಾಯಾಧೀಶರು ನಿವೃತ್ತಿಯ ನಂತರ ಘನತೆಯಿಂದ ಬದುಕಲು ಅನುವು ಮಾಡಿಕೊಡುವ ಮಹತ್ವ ಒತ್ತಿಹೇಳಿತು.
CJI DY Chandrachud, Justice JB Pardiwala,, Justice Manoj Misra
CJI DY Chandrachud, Justice JB Pardiwala,, Justice Manoj Misra
Published on

ನ್ಯಾಯಾಧೀಶರು ಆರ್ಥಿಕ ಘನತೆಯಿಂದ ಬದುಕುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಗುರುವಾರ ಒತ್ತಿ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ನ್ಯಾಯಾಧೀಶರು ತಮ್ಮ ಕೆಲಸದ ಜೀವನದ ಗಮನಾರ್ಹ ಭಾಗವನ್ನು ನ್ಯಾಯಾಂಗ ಸಂಸ್ಥೆಯ ಸೇವೆಯಲ್ಲಿ ಕಳೆಯುತ್ತಾರೆ. ಹಾಗಾಗಿ ನಿವೃತ್ತಿಯ ನಂತರ ಘನತೆಯಿಂದ ಬದುಕಲು ಅನುವು ಮಾಡಿಕೊಡಬೇಕಾದ ಮಹತ್ವವನ್ನು ಒತ್ತಿಹೇಳಿತು.

"ನ್ಯಾಯಾಂಗ ಅಧಿಕಾರಿಗಳು ತಮ್ಮ ಜೀವನದ ಹೆಚ್ಚಿನ ಭಾಗವನ್ನು ನ್ಯಾಯಾಂಗ ಸಂಸ್ಥೆಯ ಸೇವೆಯಲ್ಲಿ ಕಳೆಯುತ್ತಾರೆ. ಅಲ್ಲದೆ, ಬಾರ್‌ನ ಇತರ ಸದಸ್ಯರಿಗೆ ಲಭ್ಯವಿರುವ ಪ್ರಯೋಜನಗಳನ್ನು ಪಡೆದುಕೊಳ್ಳುವುದಿಲ್ಲ. ಆದ್ದರಿಂದ, ನ್ಯಾಯಾಂಗ ಅಧಿಕಾರಿಗಳು ನಿವೃತ್ತಿಯ ನಂತರ ಘನತೆಯಿಂದ ಬದುಕಬೇಕು ಎಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕು" ಎಂದು ಸಿಜೆಐ ಹೇಳಿದರು.

ಆರ್ಥಿಕ ಘನತೆ ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ನಡುವಿನ ಸಂಬಂಧವನ್ನು ಒತ್ತಿಹೇಳಿದ ಸಿಜೆಐ, ಕಾನೂನು ಆಡಳಿತದಲ್ಲಿ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸ ಕಾಪಾಡಿಕೊಳ್ಳುವುದು ನ್ಯಾಯಾಧೀಶರು ಆರ್ಥಿಕ ಘನತೆಯ ಪ್ರಜ್ಞೆಯೊಂದಿಗೆ ಜೀವನ ನಡೆಸುವುದನ್ನು ಅವಲಂಬಿಸಿರುತ್ತದೆ ಎಂದು ಪ್ರತಿಪಾದಿಸಿದರು.

"ನ್ಯಾಯಾಧೀಶರು ಎಲ್ಲಿಯವರೆಗೆ ಆರ್ಥಿಕ ಘನತೆಯ ಭಾವನೆಯೊಂದಿಗೆ ತಮ್ಮ ಜೀವನ ನಡೆಸಲು ಸಾಧ್ಯವಿರಲಿದೆಯೋ ಅಲ್ಲಿಯವರೆಗೆ ಕಾನೂನಿನ ಆಡಳಿತದಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸ ಕಾಪಾಡಿಕೊಳ್ಳಲು ಅಗತ್ಯವಾದ ನ್ಯಾಯಾಂಗ ಸ್ವಾತಂತ್ರ್ಯವನ್ನು ಖಾತರಿಪಡಿಸಬಹುದು ಮತ್ತು ಹೆಚ್ಚಿಸಬಹುದು" ಎಂದು ಸಿಜೆಐ ಹೇಳಿದರು.

ನ್ಯಾಯಾಧೀಶರ ಸೇವೆಗಳು ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಅಖಿಲ ಭಾರತ ನ್ಯಾಯಾಧೀಶರ ಸಂಘದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಾನೂನಿನ ನಿಯಮ ಬಲಪಡಿಸುವಲ್ಲಿ ಜಿಲ್ಲಾ ನ್ಯಾಯಾಂಗದ ಪಾತ್ರವನ್ನು ನ್ಯಾಯಾಲಯವು ಎತ್ತಿ ತೋರಿಸಿತು. ಅಲ್ಲದೆ, ಸೇವೆ ಮತ್ತು ನಿವೃತ್ತಿಯ ವೇಳೆ ನೀಡಲಾಗುವ ಸೇವೆಗಳ ಲಭ್ಯತೆಯು ಮಾಜಿ ನ್ಯಾಯಾಂಗ ಅಧಿಕಾರಿಗಳಿಗೆ ಒದಗಿಸಲಾದ ಸೌಲಭ್ಯಗಳು ಮತ್ತು ವೇತನಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕಾದ ಸರ್ಕಾರದ ಕರ್ತವ್ಯದ ಬಗ್ಗೆ ಒತ್ತಿಹೇಳಿತು.

ಇದಲ್ಲದೆ, ಜಿಲ್ಲಾ ನ್ಯಾಯಾಂಗವು ಕಾರ್ಯನಿರ್ವಹಿಸುವ ಬೇಡಿಕೆಯ ಪರಿಸ್ಥಿತಿಗಳನ್ನು ನ್ಯಾಯಾಲಯವು ಒಪ್ಪಿಕೊಂಡಿತು. ಇದು ಸಾಂಪ್ರದಾಯಿಕ ಕೆಲಸದ ಸಮಯದ ಮಿತಿಗಳನ್ನು ಮೀರಿದೆ. ನ್ಯಾಯಾಂಗ ಕಾರ್ಯಗಳಿಗೆ ಪ್ರಕರಣಗಳನ್ನು ಕರೆಯುವ ಮೊದಲು ಸಿದ್ಧತೆ ಮತ್ತು ವಿಚಾರಣೆಯ ನಂತರ ವಿಷಯಗಳನ್ನು ನಿರ್ವಹಿಸುವ ಅಗತ್ಯವಿದೆ ಎಂದು ಅದು ಒತ್ತಿಹೇಳಿತು.

"ಆದ್ದರಿಂದ ನ್ಯಾಯಾಲಯದ ಕೆಲಸದ ಅವಧಿಯನ್ನಷ್ಟೇ ಪರಿಗಣಿಸಿ ಕರ್ತವ್ಯದ ಕಾರ್ಯಕ್ಷಮತೆಯ ದೃಷ್ಟಿಯಿಂದ ನ್ಯಾಯಾಧೀಶರ ಕೆಲಸವನ್ನು ನಿರ್ಣಯಿಸಲು ಮುಂದಾಗುವುದು ತಪ್ಪು" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಧೀಶರಿಗೆ ಸೇವೆಗಳನ್ನು ಒದಗಿಸುವ ಸಕಾರಾತ್ಮಕ ಬಾಧ್ಯತೆ ಹೊಂದಿರುವ ರಾಜ್ಯವು ಅಂತಹ ಪ್ರಯೋಜನಗಳನ್ನು ವಿಸ್ತರಿಸದಿರುವುದಕ್ಕೆ ಕಾರಣವಾಗಿ ಆರ್ಥಿಕ ಹೊರೆಯನ್ನು ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಪೀಠವು ಪ್ರತಿಪಾದಿಸಿತು.

Kannada Bar & Bench
kannada.barandbench.com