'ನ್ಯಾಯಾಂಗವೂ ಭ್ರಷ್ಟಾಚಾರದಿಂದ ಹೊರತಲ್ಲ' ಎಂದಿರುವ ಮದ್ರಾಸ್ ಹೈಕೋರ್ಟ್ ಇದನ್ನು ಸರಿಪಡಿಸಲು ಹೇಳಿದ್ದೇನು?

“ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಲಾಗದು… ಇಲ್ಲಿ ಅದು ಸರ್ಕಾರಿ ಇಲಾಖೆಗಳಿಗಿಂತಲೂ ಕೆಟ್ಟದಾಗಿದೆ. ನ್ಯಾಯಾಂಗವೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂದು ಹಲವು ನಿವೃತ್ತ ಮುಖ್ಯ ನ್ಯಾಯಾಮೂರ್ತಿಗಳು ಹೇಳಿದ್ದಾರೆ.”
Justice SM Subramaniam
Justice SM Subramaniam

ಲಂಚ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ತಿರುನೆಲ್ವೇಲಿ ರಿಜಿಸ್ಟ್ರಾರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿರುವುದನ್ನು ದೃಢಪಡಿಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್‌ ಸುಬ್ರಮಣಿಯಮ್ ಅವರು ನ್ಯಾಯಾಂಗದಲ್ಲಿ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆಗಳಲ್ಲಿ ವಿಚಕ್ಷಣಾ ಕ್ರಮಗಳನ್ನು ಹೆಚ್ಚಿಸಬೇಕಿದೆ ಎಂದು ಈಚೆಗೆ ಹೇಳಿದ್ದಾರೆ.

ಅಕ್ಟೋಬರ್ 5ರಂದು ಹೊರಡಿಸಲಾದ ಆದೇಶದಲ್ಲಿ ನ್ಯಾ ಸುಬ್ರಣಿಯಮ್ ಅವರು ಹೀಗೆ ಹೇಳಿದ್ದಾರೆ.

“ಸರ್ಕಾರಿ ಸಂಸ್ಥೆಗಳಲ್ಲಿನ ಭ್ರಷ್ಟಾಚಾರ ಚಟುವಟಿಕೆಗಳ ಬಗ್ಗೆ ಅವಲೋಕನ ನಡೆಸುತ್ತಲೇ ನ್ಯಾಯಾಂಗವೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಿದೆ. ನ್ಯಾಯಾಂಗ ಇಲಾಖೆ ಮತ್ತು ನ್ಯಾಯಾಲಯದ ಆವರಣದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಚಟುವಟಿಕೆಗಳನ್ನು ಉಲ್ಲೇಖಿಸದಿದ್ದರೆ ಈ ನ್ಯಾಯಾಲಯದ ಆತ್ಮಸಾಕ್ಷಿ ಒಪ್ಪುವುದಿಲ್ಲ… ನ್ಯಾಯಾಂಗವೂ ಭ್ರಷ್ಟಾಚಾರ ಚಟುವಟಿಕೆಗಳಿಂದ ಹೊರತಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಹಲವು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಹೇಳಿರುವುದನ್ನು ನೆನೆಪಿಸಿಕೊಳ್ಳುವುದು ಸಮಂಜಸವಾಗಿದೆ.”
ಮದ್ರಾಸ್ ಹೈಕೋರ್ಟ್

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಏಕೆ ಆತಂಕಕಾರಿ ಬೆಳವಣಿಗೆ ಎಂಬದನ್ನು ನ್ಯಾ. ಸುಬ್ರಮಣಿಯಮ್ ಅವರು ಹೀಗೆ ವಿವರಿಸಿದ್ದಾರೆ.

“ನ್ಯಾಯದಾನ ವ್ಯವಸ್ಥೆಯ ಸ್ಥಿರತೆ ಅತ್ಯಂತ ಮುಖ್ಯವಾಗಿದ್ದು, ಎಲ್ಲಾ ನಾಗರಿಕರನ್ನು ಸಮಾನವಾಗಿ ಕಾಣಬೇಕಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಎಂದಿಗೂ ಸಹಿಸಲಾಗದು. ಇದು ಸರ್ಕಾರಿ ಇಲಾಖೆಗಳಿಗಿಂತಲೂ ಅತ್ಯಂತ ಕೆಟ್ಟದು. ಸಾಮಾನ್ಯ ಜನರಿಗೆ ನ್ಯಾಯಾಂಗವೇ ಕೊನೆಯ ತಾಣವಾಗಿದ್ದು, ಪರಿಣಾಮಕಾರಿ, ಸಮರ್ಥ ಮತ್ತು ಪಕ್ಷಪಾತರಹಿತ ನ್ಯಾಯಾಂಗ ವ್ಯವಸ್ಥೆಯನ್ನು ಸಾಂವಿಧಾನಿಕ ತತ್ವ ಹಾಗೂ ಉದ್ದೇಶಗಳೊಟ್ಟಿಗೆ ಸಾಧಿಸಬೇಕಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಹೆಚ್ಚಿಸುವುದು ಸಾಂವಿಧಾನಿಕ ಜರೂರು. ಜನರ ಮನದಲ್ಲಿ ಅನುಮಾನ ಸೃಷ್ಟಿಯಾಗುವುದರಿಂದ ಸಾಂವಿಧಾನಿಕ ತತ್ವಗಳ ನಾಶಕ್ಕೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.

ಚಾಲ್ತಿಯಲ್ಲಿರುವ ವಿಚಕ್ಷಣಾ ದಳದಿಂದ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಚಟುವಟಿಕೆಗಳನ್ನು ನಿಗ್ರಹಿಸಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯಾಂಗದಲ್ಲಿನ ವಿಚಕ್ಷಣಾ ದಳವನ್ನು ಸಶಕ್ತಗೊಳಿಸುವುದು ಅಗತ್ಯವಾಗಿದೆ ಎಂದಿರುವ ನ್ಯಾಯಮೂರ್ತಿಗಳು “ನ್ಯಾಯಾಂಗ ಸಂಬಂಧಿತ ಇಲಾಖೆಗಳು ಹಾಗೂ ಅವರಣದಲ್ಲಿ ಆಗಾಗ್ಗೆ ಅನಿರೀಕ್ಷಿತ ಭೇಟಿ, ಪರಿವೀಕ್ಷಣೆ ನಡೆಸುವುದು ಅಗತ್ಯ” ಎಂದು ಸಲಹೆ ನೀಡಿದ್ದಾರೆ.

ಅದಾಗ್ಯೂ, ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದಿರುವ ನ್ಯಾಯಮೂರ್ತಿಗಳು ಹೀಗೆ ಹೇಳಿದ್ದಾರೆ.

Also Read
ನಟ ಸೂರ್ಯ ವಿರುದ್ಧ ನಿಂದನಾ ಪ್ರಕ್ರಿಯೆ ಕೈಗೊಳ್ಳದಂತೆ ಮದ್ರಾಸ್ ಸಿಜೆಗೆ ಆರು ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದೇನು?
“ದುರದೃಷ್ಟವಶಾತ್, ನ್ಯಾಯಾಂಗ ವ್ಯವಸ್ಥೆಯೊಳಗೆ ತಾಂಡವವಾಡುತ್ತಿರುವ ಭ್ರಷ್ಟಾಚಾರ ಚಟುವಟಿಕೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಇನ್ನಷ್ಟೇ ಪರಿಣಾಮಕಾರಿ ಕ್ರಮಕೈಗೊಳ್ಳಬೇಕಿದೆ. ತೀರ್ಪನ್ನು ಅವಲೋಕಿಸುವುದು ಪ್ರಕರಣದ ಒಂದು ಭಾಗವಾದರೆ ಆಡಳಿತಗಾರರು ಸೂಚಿತ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಿದರೆ ಮಾತ್ರ ನಮ್ಮ ಮಹಾನ್ ದೇಶದ ಅಭಿವೃದ್ಧಿಯನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಆಡಳಿತಗಾರರು ಮುಕ್ತ ಮತ್ತು ಹೃದಯವಿಶಾಲತೆಯಿಂದ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನೋಡುವುದರ ಜೊತೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಸಮರ್ಥ ಮತ್ತು ಪರಿಣಾಮಕಾರಿ ವ್ಯವಸ್ಥೆ ರೂಪಿಸಬಹುದು” ಎಂದಿದ್ದಾರೆ.

ನ್ಯಾಯಾಲಯದ ಅಭಿಪ್ರಾಯಗಳನ್ನು ಜಾರಿಗೊಳಿಸಲು ಕ್ರಮವಹಿಸುವ ದೃಷ್ಟಿಯಿಂದ ತೀರ್ಪಿನ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮದ್ರಾಸ್ ಹೈಕೋರ್ಟ್‌ ನ ರಿಜಿಸ್ಟ್ರಾರ್‌ ಜನರಲ್ ಅವರಿಗೆ ತಲುಪಿಸುವಂತೆ ನ್ಯಾಯಪೀಠ ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com