ಭ್ರಷ್ಟಾಚಾರ ಎಂಬ ವ್ಯಾಧಿಯನ್ನು ನ್ಯಾಯಾಂಗ, ಶಾಸಕಾಂಗಗಳು ನಿರ್ಮೂಲನೆ ಮಾಡಬೇಕು: ನಿರ್ಗಮಿತ ನ್ಯಾ. ಬಿ ವೀರಪ್ಪ

ನ್ಯಾ. ವೀರಪ್ಪ ಅವರು 9,060 ಪ್ರಮುಖ ಪ್ರಕರಣ, 8,558 ಮಧ್ಯಂತರ ಅರ್ಜಿಗಳು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಸುಮಾರು 24,500 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ.
Justice B Verappa and Karnataka HC
Justice B Verappa and Karnataka HC
Published on

“ನ್ಯಾಯಾಂಗ ಮತ್ತು ಶಾಸಕಾಂಗಗಳು ಭ್ರಷ್ಟಾಚಾರ ಎಂಬ ವ್ಯಾದಿಯನ್ನು ನಿರ್ಮೂಲನೆ ಮಾಡಬೇಕು. ಇದು ಕ್ಯಾನ್ಸರ್‌ಗಿಂತ ಅಪಾಯಕಾರಿ. ಇದು ಭವಿಷ್ಯದ ತಲೆಮಾರು ಮತ್ತು ದೇಶದ ಬೆಳವಣಿಗೆಗೆ ಮಾರಕ. ನ್ಯಾಯಮೂರ್ತಿಗಳು ಮತ್ತು ವಕೀಲರು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಶಪಥ ಮಾಡಬೇಕು. ಆ ಮೂಲಕ ಪ್ರಜಾಪ್ರಭುತ್ವದ ಇತರ ಅಂಗಗಳಿಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಜನಮಾನಸದಲ್ಲಿ ನಂಬಿಕೆ ಉಳಿಯುವಂತೆ ಮಾಡುವ ಮತ್ತು ಈ ಘನ ನ್ಯಾಯಾಲಯದ ಗೌರವ ರಕ್ಷಿಸುವುದು ವಕೀಲರು ಮತ್ತು ನ್ಯಾಯಮೂರ್ತಿಗಳ ಜವಾಬ್ದಾರಿಯಾಗಿದೆ” ಎಂದು ನಿರ್ಗಮಿತ ನ್ಯಾಯಮೂರ್ತಿ ಬಿ ವೀರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರಿನ ಹೈಕೋರ್ಟ್‌ ಪ್ರಧಾನ ಪೀಠದ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ಕೋರ್ಟ್‌ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ತಮಗೆ ಇಂದು ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಭಾರತದ ನ್ಯಾಯಾಂಗದ ಮೇಲೆ ಜನರಿಗೆ ಅಪಾರವಾದ ನಂಬಿಕೆ ಇದೆ. ಜನರು ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯದ ಕಾವಲುಗಾರ ಎಂದು ನ್ಯಾಯಾಲಯವನ್ನು ಪರಿಗಣಿಸಿದ್ದಾರೆ. ನ್ಯಾಯಾಲಯವು ನ್ಯಾಯದಾನದ ದೇಗುಲ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗವೂ ಇನ್ನೊಂದು ಅಂಗವಾಗಿದ್ದು, ಅದರಲ್ಲಿ ಕೆಲಸ ಮಾಡುವವರು ಸಹ ಮನುಷ್ಯರೇ ಆಗಿರುತ್ತಾರೆ. ಆದರೆ, ನ್ಯಾಯಾಂಗದ ಕಾರ್ಯನಿರ್ವಹಣೆ ಬೇರೆ. ನ್ಯಾಯಾಂಗವು ಜನರ ನಂಬಿಕೆಯಾಗಿದ್ದು, ಇದು ಜನರ ಕೊನೆಯ ಭರವಸೆಯಾಗಿದೆ. ಎಲ್ಲಾ ದಾರಿಗಳು ಮುಚ್ಚಿದಾಗ ಕೊನೆಯದಾಗಿ ಜನರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಈ ದೇಶದ ಪ್ರತಿಯೊಬ್ಬ ಪ್ರಜೆಯು ಪೂಜಿಸುವ ದೇಗುಲ ನ್ಯಾಯಾಲಯ. ಇಲ್ಲಿ ಜಾತಿ-ಮತ, ಪಂಥ, ಭೇದ ಎಂಬುದು ಇಲ್ಲ” ಎಂದು ಹೇಳಿದರು.

“ನ್ಯಾಯಾಂಗವು ಬಾಹ್ಯ ಮತ್ತು ಆಂತರಿಕ ಒತ್ತಡದಿಂದ ಕೆಲಸ ಮಾಡುತ್ತಿದೆ. ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದ್ದು, ವಿಲೇವಾರಿ ಭಾರಿ ತಡವಾಗಿವಾಗುತ್ತಿರುವುದು ಸಮಸ್ಯೆಯಾಗಿದೆ. 27 ವರ್ಷ ವಕೀಲನಾಗಿ ಆನಂತರ ಸುಮಾರು 8.5 ವರ್ಷ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದೇನೆ. ವಕೀಲನಾಗಿದ್ದಾಗ ಮಾಡಿದ ತಪ್ಪು ನನಗೆ ಅರಿವಾಗಿದೆ. ಎಂಟು ಮುಖ್ಯಮಂತ್ರಿಗಳು, ಎಂಟು ಅಡ್ವೊಕೇಟ್‌ ಜನರಲ್‌ಗಳ ಅಡಿ ಕೆಲಸ ಮಾಡಿದ್ದು, ಐವರು ಮುಖ್ಯ ನ್ಯಾಯಮೂರ್ತಿಗಳ ಮುಂದೆ ವಾದಿಸಿದ್ದೇನೆ” ಎಂದು ನೆನೆಪಿಸಿಕೊಂಡರು.

“2021ರ ಅಕ್ಟೋಬರ್‌ 13ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯಕಾರಿ ಅಧ್ಯಕ್ಷನಾಗಿ ನೇಮಕವಾಗಿದ್ದು, ಆರು ಲೋಕ ಅದಾಲತ್‌ ನಡೆಸಿದ್ದೇನೆ. 1.08 ಕೋಟಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನ್ಯಾಯಾಂಗ ಸೇವೆಯಲ್ಲಿರುವ ಅಧಿಕಾರಿಗಳನ್ನು ನಾನು ಯಾವಾಗಲೂ ನ್ಯಾಯಾಂಗದ ಸೈನಿಕರು ಎಂದು ಸಂಭೋದಿಸುತ್ತೇನೆ. ಅವರ ಸಹಕಾರದಿಂದ ಈ ಕೆಲಸ ಸಾಧ್ಯವಾಗಿದೆ” ಎಂದು ಸ್ಮರಿಸಿದರು.

ಮುಂದುವರೆದು, “ಕಾನೂನುಬಾಹಿರ ಮೋಹಕ್ಕೆ ಒಳಗಾಗದೇ ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸಬೇಕು. ನ್ಯಾಯಮೂರ್ತಿಗಳಾಗಿ ಜನರ ಸೇವೆ ಮಾಡಲು ದೇವರು ನಮಗೆ ಅವಕಾಶ ಮಾಡಿಕೊಟ್ಟಿದ್ದಾನೆ. ಹೀಗಾಗಿ, ನಮ್ಮ ನಡತೆ ಮತ್ತು ಆತ್ಮಸಾಕ್ಷಿ ಎರಡೂ ನ್ಯಾಯಿಕವಾಗಿರಬೇಕು. ನನಗೆ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದು, ಅತ್ಯಂತ ಆತ್ಮತೃಪ್ತಿಯಿಂದ ಇಲ್ಲಿಂದ ನಿರ್ಗಮಿಸುತ್ತಿದ್ದೇನೆ” ಎಂದರು.

“ನಾನು ನ್ಯಾಯಮೂರ್ತಿಯಾದ ದಿನಕ್ಕಿಂತ ಈ ದಿನ ನನಗೆ ಬಾರಿ ಸಂತೋಷ ಉಂಟು ಮಾಡಿದೆ. ನಾನು ಏನು ಕೊಟ್ಟಿದ್ದೇನೋ ನನಗೆ ತಿಳಿಯದು. ಆದರೆ, ನನ್ನ ಜೀವನ ಪೂರ್ತಿ ನಿಮ್ಮ ಪ್ರೀತಿಯನ್ನು ಮರೆಯಲಾಗದು” ಎಂದು ಭಾವುಕರಾದರು.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು “ನ್ಯಾ. ವೀರಪ್ಪ ಧೀರತ್ವ ಮತ್ತು ನೇರನುಡಿಗೆ ಹೆಸರುವಾಸಿ. ಕೆಲವು ಸಂದರ್ಭದಲ್ಲಿ ನ್ಯಾ. ವೀರಪ್ಪ ಅವರು ನ್ಯಾಯಾಲಯದ ಕೊಠಡಿಯಲ್ಲಿ ಘರ್ಜಿಸಿದ್ದು, ಈ ಕಾರಣಕ್ಕೆ ಅವರು ಟೈಗರ್‌ ಎಂದು ಜನಜನಿತವಾಗಿದ್ದಾರೆ” ಎಂದರು.

“ಅತ್ಯಂತ ಕೆಳಮಟ್ಟದಲ್ಲಿರುವ ಜನರಿಗೆ ಕಾನೂನು ನೆರವು ಕಲ್ಪಿಸುವ ನಿಟ್ಟಿನಲ್ಲಿ ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷರಾಗಿ ನ್ಯಾ. ವೀರಪ್ಪ ಅವರು ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ. 26 ಆಸ್ಪತ್ರೆಗಳು, 11 ಜೈಲುಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಯನ್ನು ಅರಿತಿದ್ದಾರೆ. ಹಲವು ಮಹತ್ವದ ತೀರ್ಪುಗಳನ್ನೂ ನೀಡಿದ್ದಾರೆ” ಎಂದು ನೆನೆದರು.

ಕೆಎಸ್‌ಬಿಸಿ ಅಧ್ಯಕ್ಷ ಎಚ್‌ ಎಲ್‌ ವಿಶಾಲ್‌ ರಘು ಅವರು “ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದ ನ್ಯಾ. ವೀರಪ್ಪ ಅವರು ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನರಾಗಿದ್ದರು. ಅವರ ಎದೆಯಲ್ಲಿ ನಡುಕು ಹುಟ್ಟಿಸಿದಂತ ವಿಶೇಷ ತೀರ್ಪು ನೀಡಿದ್ದಾರೆ. ಭ್ರಷ್ಟಾಚಾರ ಕ್ಯಾನ್ಸರ್‌ಗಿಂತಲೂ ಅಪಾಯಕಾರಿ ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದು, ಗಮನಾರ್ಹ. ಲೋಕಾಯುಕ್ತ ಬಲಪಡಿಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಪಡಿಸಲು ನ್ಯಾ. ವೀರಪ್ಪ ಅವರು ನೀಡಿದ ತೀರ್ಪು ಅವರ ಕಾರ್ಯಕ್ಷಮತೆಗೆ ಸಾಕ್ಷಿ. ಇದರಿಂದ ಜನ ಸಾಮಾನ್ಯರಲ್ಲಿ ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಲು ಕಾರಣರಾಗಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಮರಣ ದಂಡನೆ ವಿಧಿಸುವ ನಿಟ್ಟಿನಲ್ಲಿ ಐಪಿಸಿ ಸೆಕ್ಷನ್‌ಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ನ್ಯಾ. ವೀರಪ್ಪ ಅವರ ಐತಿಹಾಸಿಕ ತೀರ್ಪುಗಳ ಪೈಕಿ ಒಂದಾಗಿದೆ” ಎಂದು ಸ್ಮರಿಸಿದರು.

“ತಮ್ಮ ಎಲ್ಲಾ ತೀರ್ಪುಗಳ ಮುದ್ರಿತ ಒಂದು ಸಾವಿರ ಪ್ರತಿಗಳನ್ನು ರಾಜ್ಯದ ವಕೀಲರಿಗೆ ಉಚಿತವಾಗಿ ಹಂಚಿಕೆ ಮಾಡುವ ಮೂಲಕ ನ್ಯಾ. ವೀರಪ್ಪ ಅವರು ಗಮನಾರ್ಹ ಕೆಲಸ ಮಾಡಿದ್ದಾರೆ. 9,060 ಪ್ರಮುಖ ಪ್ರಕರಣಗಳು, 8,558 ಮಧ್ಯಂತರ ಅರ್ಜಿಗಳು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಸುಮಾರು 24,500 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ” ಎಂದು ವಿವರಿಸಿದರು.

ಹೈಕೋರ್ಟ್‌ ನ್ಯಾಯಮೂರ್ತಿಗಳು, ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, ಕೆಎಸ್‌ಬಿಸಿ ಮತ್ತು ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ನ್ಯಾ. ವೀರಪ್ಪ ಕುಟುಂಬಸ್ಥರು, ವಕೀಲರ ವೃಂದ ಕಾರ್ಯಕ್ರಮದಲ್ಲಿ ಹಾಜರಿದ್ದರು.

Kannada Bar & Bench
kannada.barandbench.com