ನ್ಯಾಯಾಂಗವು ಸರ್ಕಾರದ ಭಾಗ ಎಂದ ಅರ್ಜಿದಾರನ ಕಿವಿ ಹಿಂಡಿದ ಹೈಕೋರ್ಟ್‌; ಐಡಿಯಾಗಳು ಪಿಐಎಲ್‌ ಆಗದು ಎಂದು ₹1 ಲಕ್ಷ ದಂಡ

“ಅರ್ಜಿಯು ಯಾವುದೇ ಮೂಲಭೂತ/ಶಾಸನಬದ್ಧ ಹಕ್ಕಿನ ಉಲ್ಲಂಘನೆಗೆ ಸಂಬಂಧಿಸಿದ್ದಲ್ಲ. ದಾವೆದಾರರು ಎಷ್ಟೇ ಚಾಣಾಕ್ಷರಾದರೂ ತಮ್ಮ ಐಡಿಯಾಗಳನ್ನು ನೀಡುವ ವೇದಿಕೆ ಪಿಐಎಲ್‌ ವ್ಯಾಪ್ತಿಗೆ ಬರುವುದಿಲ್ಲ” ಎಂದಿರುವ ಹೈಕೋರ್ಟ್‌.
Chief Justice Vibhu Bakhru & Justice Ramachandra D Huddar
Chief Justice Vibhu Bakhru & Justice Ramachandra D Huddar
Published on

“ನ್ಯಾಯಾಂಗವು ಸರ್ಕಾರದ ಭಾಗ ಎಂಬ ಹೇಳಿಕೆಯು ಸಂಪೂರ್ಣ ದೋಷಪೂರಿತ. ಸಂವಿಧಾನ ಓದಿ, ಮೊದಲ 12 ವಿಧಿಗಳೇ ನ್ಯಾಯಾಂಗ ಏನು ಎಂದು ಹೇಳುತ್ತವೆ” ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ ತಾನು ರೂಪಿಸಿರುವ ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದ ಅರ್ಜಿದಾರರೊಬ್ಬರಿಗೆ ಬರೋಬ್ಬರಿ ₹1 ಲಕ್ಷ ದಂಡ ವಿಧಿಸಿದೆ.

ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆ-2025 ಜಾರಿಗೆ ತರುವ ಬಗ್ಗೆ ಚರ್ಚಿಸಲು ಎಲ್ಲಾ 34 ಸಚಿವಾಲಯಗಳು, 44 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕು. ಮಸೂದೆಯ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವಂತೆ ಸಿಎಂ ಅವರ ಪ್ರಧಾನ ಕಾರ್ಯದರ್ಶಿಗೆ ಸೂಚಿಸಬೇಕು ಹಾಗೂ ಈ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸಲು ತಮ್ಮ ಪಕ್ಷದ ಶಾಸಕರು ಮತ್ತು ಸಂಸದರಿಗೆ ಸೂಚಿಸಲು ಕೆಪಿಸಿಸಿ ಅಧ್ಯಕ್ಷರಿಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಮುರಳಿಕೃಷ್ಣ ಬೃಹ್ಮಾನಂದಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್‌ ಅವರ ವಿಭಾಗೀಯ ಪೀಠ ವಜಾಗೊಳಿಸಿತು.

ರಾಜ್ಯ ಸರ್ಕಾರದ 34 ಸಚಿವಾಲಯಗಳ 44 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು/ವಿಶೇಷ ಕಾರ್ಯದರ್ಶಿಗಳಿಗೆ ಅರ್ಜಿದಾರರು ರೂಪಿಸಿರುವ ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆ ಬಗ್ಗೆ ಚರ್ಚಿಸಿ, ಪ್ರಸ್ತಾಪಿಸಲು ಆದೇಶಿಸಬೇಕು. ಗ್ರೇಟರ್‌ ಕರ್ನಾಟಕ ಪ್ರಾಧಿಕಾರವನ್ನು ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳು ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಿ, ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಕೋರಿರುವ ಅರ್ಜಿಯು ತಪ್ಪು ಗ್ರಹಿಕೆಯಿಂದ ಕೂಡಿದ್ದಾಗಿದೆ. ಈ ಅರ್ಜಿಯು ಯಾವುದೇ ಮೂಲಭೂತ/ಶಾಸನಬದ್ಧ ಹಕ್ಕಿನ ಉಲ್ಲಂಘನೆಗೆ ಸಂಬಂಧಿಸಿದ್ದಲ್ಲ. ದಾವೆದಾರರು ಎಷ್ಟೇ ಚಾಣಾಕ್ಷರಾದರೂ ತಮ್ಮ ಐಡಿಯಾಗಳನ್ನು ನೀಡುವ ವೇದಿಕೆ ಪಿಐಎಲ್‌ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ₹1 ಲಕ್ಷ ದಂಡ ವಿಧಿಸಿ ಅರ್ಜಿ ವಜಾಗೊಳಿಸಲಾಗಿದೆ” ಎಂದು ಆದೇಶಿಸಿತು.

ಆಗ ಮುರಳಿಕೃಷ್ಣ ಅವರು “ದಯಮಾಡಿ ದಂಡ ವಿಧಿಸಬಾರದು” ಎಂದು ಮನವಿ ಮಾಡಿದರು. ಇದಕ್ಕೆ ಪೀಠವು “ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತತ್ವವಾಗಿದೆ. ಪ್ರಕರಣಕ್ಕೆ ಮೌಲ್ಯ ತರದಿದ್ದರೆ ಅದು ಸಾರ್ವಜನಿಕ ಹಿತಾಸಕ್ತಿಯಾಗುವುದಿಲ್ಲ. ಇಂಥ ಅರ್ಜಿಗಳಿಗೆ ಸಮಯ ವ್ಯರ್ಥವಾಗಿರುವುದರಿಂದ ಬೇರೆ ದಾವೆದಾರರು ಕಾಯುವಂತಾಗಿದೆ. ನ್ಯಾಯಾಂಗವು ಸರ್ಕಾರದ ಭಾಗ ಎಂಬ ನಿಮ್ಮ ಮಾತು ಮೂಲಭೂತವಾಗಿ ದೋಷಪೂರಿತವಾಗಿದೆ. ದಯಮಾಡಿ ಸಂವಿಧಾನ ಓದಿ, ಮೊದಲ 12 ವಿಧಿಗಳು ಅದು ಏನೆಂದು ಹೇಳುತ್ತವೆ” ಎಂದಿತು.

ಇದಕ್ಕೂ ಮುನ್ನ, ಅರ್ಜಿದಾರ ಮುರಳಿಕೃಷ್ಣ ಅವರು “ಕರ್ನಾಟಕ ಹೈಕೋರ್ಟ್‌ಗೆ ನಾನು ಸಲ್ಲಿಸುತ್ತಿರುವ ಮೊದಲ ಮತ್ತು ಕೊನೆಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆಯನ್ನು ನಾನು ರೂಪಿಸಿದ್ದೇನೆ. ಅಧಿವೇಶನದಲ್ಲಿ ಈ ಮಸೂದೆಯನ್ನು ಚರ್ಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರುತ್ತಿದ್ದೇನೆ. ಏಕೆಂದರೆ ನ್ಯಾಯಾಂಗವು ಸರ್ಕಾರದ ಭಾಗವಲ್ಲವೇ?” ಎಂದು ಹೇಳಿದ್ದರು.

ಇದನ್ನು ಆಲಿಸಿದ ಪೀಠವು “ನಿಮ್ಮ ಕೋರಿಕೆಯು ಪಿಐಎಲ್‌ ವ್ಯಾಪ್ತಿಗೆ ಬರಲ್ಲ. ಮಸೂದೆ ಜಾರಿಗೊಳಿಸಬೇಕು ಎಂದು ಕೇಳುತ್ತಿದ್ದೀರಾ? ನ್ಯಾಯಾಂಗವು ಸರ್ಕಾರದ ಭಾಗವಲ್ಲ. ಸಂವಿಧಾನದಲ್ಲಿ ನ್ಯಾಯಾಂಗವು ರಾಜ್ಯ ಪ್ರಭುತ್ವದ (ಸ್ಟೇಟ್‌) ಭಾಗವಲ್ಲ. ಹೀಗಾಗಿ, ನಿಮ್ಮ ಅರ್ಜಿಯು ತಪ್ಪು ಗ್ರಹಿಕೆಯಿಂದ ಕೂಡಿದೆ. ನ್ಯಾಯಾಂಗವು ಸರ್ಕಾರದ ಭಾಗವಲ್ಲ. ಇದಕ್ಕಾಗಿಯೇ ಹೇಳುತ್ತಿರುವುದು ನಿಮ್ಮ ಅರ್ಜಿಯು ತಪ್ಪು ಗ್ರಹಿಕೆಯಿಂದ ಕೂಡಿದೆ. ಅದಕ್ಕಾಗಿ ದಂಡ ವಿಧಿಸುತ್ತಿದ್ದೇವೆ” ಎಂದಿತು.

Kannada Bar & Bench
kannada.barandbench.com