ನ್ಯಾಯಾಂಗವು ಪ್ರಜಾಪ್ರಭುತ್ವದ ಆಧಾರ ಸ್ತಂಭ; ವಕೀಲರು ನ್ಯಾಯಾಂಗದ ಆಧಾರ ಸ್ತಂಭ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಪ್ರಧಾನ ಪೀಠದ ವಕೀಲರ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ರಕ್ಷಣಾ ಸಚಿವರು ಭಾಗವಹಿಸಿ ಮಾತನಾಡಿದರು.
Defence Minister Rajnath Singh
Defence Minister Rajnath SinghFacebook

ನ್ಯಾಯದಾನದ ಪ್ರಕ್ರಿಯೆಯಲ್ಲಿ ವಕೀಲ ಸಮುದಾಯ ಹೊಂದಿರುವ ಪ್ರಾಮುಖ್ಯತೆಯ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಶನಿವಾರ ಮಾತನಾಡಿದರು. ನ್ಯಾಯಾಂಗದಲ್ಲಿ ಜನತೆ ವಿಶ್ವಾಸವನ್ನಿರಿಸಲು ವಕೀಲ ಸಮುದಾಯ ಬಹುಮುಖ್ಯ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಪ್ರಧಾನ ಪೀಠದ ವಕೀಲರ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ರಕ್ಷಣಾ ಸಚಿವರು ಭಾಗವಹಿಸಿ, "ಅತ್ಮಾವಲೋಕನ: ಸೇನಾ ಪಡೆಗಳ ನ್ಯಾಯಮಂಡಳಿ" ಎನ್ನುವ ವಿಚಾರವಾಗಿ ಮಾತನಾಡಿದರು.

ನ್ಯಾಯಾಂಗವು ಪ್ರಜಾಪ್ರಭುತ್ವದ ಪ್ರಮುಖ ಸ್ತಂಭಗಳಲ್ಲೊಂದಾಗಿದ್ದು, ವಕೀಲ ಸಮುದಾಯವು ನ್ಯಾಯಾಂಗದ ಆಧಾರ ಸ್ತಂಭವಾಗಿದೆ ಎಂದು ಸಚಿವ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟರು. ವಕೀಲ ಸಮುದಾಯವು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿತು. ಅಷ್ಟು ಮಾತ್ರವೇ ಅಲ್ಲದೆ, ಸ್ವಾತಂತ್ರ್ಯಾನಂತರವೂ ಸಹ ದೇಶದ ಪ್ರಗತಿಗೆ ಉನ್ನತ ಕೊಡುಗೆಗಳನ್ನು ನೀಡಿತು ಎಂದು ಅವರು ಸ್ಮರಿಸಿದರು.

ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ (ಎಎಫ್‌ಟಿ) ಅವಶ್ಯಕತೆಯ ಬಗ್ಗೆ ಒತ್ತು ನೀಡಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಹೆಚ್ಚಿರುವ ದಾವೆಗಳ ಸಂಖ್ಯೆಯಿಂದಾಗಿ ಪ್ರಕರಣಗಳು ಇತ್ಯರ್ಥವಾಗುವುದು ವಿಳಂಬವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ನಿರ್ದಿಷ್ಟ ಕಾರ್ಯವ್ಯಾಪ್ತಿಯನ್ನು ಉದ್ದೇಶಿಸುವ ನ್ಯಾಯಮಂಡಳಿಗಳು ಹೆಚ್ಚು ಪ್ರಸ್ತುತ ಎಂದು ಅವರು ಅಭಿಪ್ರಾಯಪಟ್ಟರು.

ಎಎಫ್‌ಟಿಯಲ್ಲಿರುವ ಖಾಲಿ ಹುದ್ದೆಗಳ ಭರ್ತಿಯ ವಿಷಯವಾಗಿ ಪ್ರಸ್ತಾಪಿಸಿದ ಅವರು ಸಾಂವಿಧಾನಿಕ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ ಖಾಲಿ ಹುದ್ದೆಗಳ ಭರ್ತಿಯನ್ನು ಶೀಘ್ರ ತುಂಬುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು, ನ್ಯಾಯ ಪಡೆಯಲು ಪ್ರತಿಯೊಬ್ಬ ನಾಗರಿಕರು ಅರ್ಹರಾಗಿದ್ದು ಅದನ್ನು ಒದಗಿಸಲು ಸರ್ಕಾರವು ಕರ್ತವ್ಯಬದ್ಧವಾಗಿದೆ. ಸೇನಾ ಪಡೆಗಳಲ್ಲಿರುವವರಿಗೆ ನ್ಯಾಯದಾನ ದೊರೆಯಲು ವಿಳಂಬವಾದರೆ ಅದು ಹೆಚ್ಚಿನ ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಂದುವರೆದು, ತ್ವರಿತ ನ್ಯಾಯದಾನಕ್ಕಾಗಿ ಎಲ್ಲ ಪ್ರಾದೇಶಿಕ ಪೀಠಗಳು ಸಹ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಬೇಕು ಎಂದು ಆಶಿಸಿದರು. ಇದರಿಂದ ದಾವೆದಾರರು ದೆಹಲಿಯನ್ನು ಪದೇಪದೇ ಎಡತಾಕುವುದು ತಪ್ಪುತ್ತದೆ ಎಂದರು.

ಪ್ರಕರಣಗಳು ಬಾಕಿ ಉಳಿಯುತ್ತಿರುವ ಸಮಸ್ಯೆಯ ಬಗ್ಗೆ ಕಾನೂನು ಸಚಿವರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಬೇಕಾದ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು. ನ್ಯಾಯದಾನ ತ್ವರಿತಗೊಳ್ಳಲು ಸರ್ಕಾರವು ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಇದೇ ವೇಳೆ ಭರವಸೆ ನೀಡಿದರು.

ಎಎಫ್‌ಟಿಯ ಅಧ್ಯಕ್ಷರಾದ ನ್ಯಾ. ರಾಜೇಂದ್ರ ಮೆನನ್‌, ಹಿರಿಯ ವಕೀಲ ಕರ್ನಲ್‌ ಆರ್‌ ಬಾಲಸುಬ್ರಮಣಿಯನ್‌, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ವಿಕ್ರಮ್‌ಜಿತ್‌ ಬ್ಯಾನರ್ಜಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com