ನ್ಯಾಯಾಂಗ ತನ್ನ ಸಮಸ್ಯೆ ಮುಚ್ಚಿಡದೆ ಚರ್ಚಿಸಿದರೆ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ: ಸಿಜೆಐ ರಮಣ

ಜಿಲ್ಲಾ ನ್ಯಾಯಾಂಗದ ಪಾತ್ರವನ್ನು ಒತ್ತಿ ಹೇಳಿದ ನ್ಯಾ. ರಮಣ ಜಿಲ್ಲಾ ನ್ಯಾಯಾಂಗವನ್ನು ʼನ್ಯಾಯ ವಿತರಣಾ ವ್ಯವಸ್ಥೆಯ ಬೆನ್ನೆಲುಬುʼ ಎಂದು ಬಣ್ಣಿಸಿದರು.
CJI NV Ramana
CJI NV Ramana

ನ್ಯಾಯಾಂಗ ತನ್ನ ಕಾರ್ಯಚಟುವಟಿಕೆಗೆ ಅಡ್ಡಿಯಾಗುವ ಸಮಸ್ಯೆಗಳನ್ನು ಮರೆಮಾಚದೆ ಅಥವಾ ಬಚ್ಚಿಡದೆ, ಚರ್ಚಿಸಬೇಕು. ಇದರಿಂದ ಜನರಿಗೆ ಉತ್ತಮ ಸೇವೆ ಒದಗಿಸಬಹುದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರು ಶನಿವಾರ ಹೇಳಿದರು.

ನವದೆಹಲಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಯು ಯು ಲಲಿತ್ , ಡಿ ವೈ ಚಂದ್ರಚೂಡ್ ಹಾಗೂ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಕೂಡ ಉಪಸ್ಥಿತರಿದ್ದರು.

ನ್ಯಾಯಾಂಗದ ಮೇಲೆ ಪರಿಣಾಮ ಬೀರುವ ಇಂತಹ ಸಮಸ್ಯೆಗಳ ಬಗ್ಗೆ ನ್ಯಾಯಾಧೀಶರು ಚರ್ಚಿಸದಿದ್ದರೆ ಅದನ್ನು ಪರಿಹರಿಸದಿದ್ದರೆ, ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದು ಅವರು ಹೇಳಿದರು.

Also Read
ಮಾಧ್ಯಮ ವಿಚಾರಣೆಯಿಂದ ನ್ಯಾಯಾಧೀಶರ ಕೆಲಸ ಕಷ್ಟಕರವಾಗುತ್ತಿದೆ: ಸಿಜೆಐ ರಮಣ ಕಳವಳ

“ಜನರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶ ನಮಗಿದ್ದರೆ, ನಮ್ಮ ಕಾರ್ಯಚಟುವಟಿಕೆಗೆ ಅಡ್ಡಿಯಾಗುವ ಸಮಸ್ಯೆಗಳನ್ನು ನಾವು ಎತ್ತಿ ತೋರಿಸಬೇಕಿದೆ. ಸಮಸ್ಯೆಗಳನ್ನು ಮರೆಮಾಚುವುದರಲ್ಲಿ ಅಥವಾ ಬಚ್ಚಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಈ ಸಮಸ್ಯೆ ಚರ್ಚಿಸದಿದ್ದರೆ, ಬಿಕ್ಕಟ್ಟುಗಳನ್ನು ಪರಿಹರಿಸದಿದ್ದರೆ, ಆಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ನಮ್ಮ ಸಾಂವಿಧಾನಿಕ ಆದೇಶವಾದ ಸಾಮಾಜಿಕ ನ್ಯಾಯವನ್ನು ಪೂರೈಸಲು ಸಾಧ್ಯವಾಗದಿರಬಹುದು ಎಂದು ನನಗೆ ಭಯವಾಗುತ್ತಿದೆ. ಹಾಗಾಗಿ, ನಾನು ನಿಮ್ಮೆಲ್ಲರಿಗೂ ಚರ್ಚಿಸಿ, ಸಂವಾದಿಸಿ ಹಾಗೂ ನಿರ್ಧರಿಸಿ! ಎಂದು ಹೇಳುತ್ತೇನೆ. ಇದೇ ನಾನು ಅನುಸರಿಸುತ್ತಿರುವ ತತ್ವ” ಎಂದು ಅವರು ವಿವರಿಸಿದರು

.

ಜಿಲ್ಲಾ ನ್ಯಾಯಾಂಗದ ಪಾತ್ರವನ್ನು ಒತ್ತಿ ಹೇಳಿದ ನ್ಯಾಯಮೂರ್ತಿಗಳು ಜಿಲ್ಲಾ ನ್ಯಾಯಾಂಗವನ್ನು ʼನ್ಯಾಯ ವಿತರಣಾ ವ್ಯವಸ್ಥೆಯ ಬೆನ್ನೆಲುಬುʼ ಎಂದು ಬಣ್ಣಿಸಿದರು.

ದೇಶದ ಬಹುತೇಕ ಜನಸಂಖ್ಯೆಗೆ ಜಿಲ್ಲಾ ನ್ಯಾಯಾಂಗಾಧಿಕಾರಿಗಳು ಪ್ರಾಥಮಿ ಜನ ಸಂಪರ್ಕ ಬಿಂದುವಾಗಿದ್ದಾರೆ. ನ್ಯಾಯಾಂಗದೆಡೆಗಿನ ಸಾರ್ವಜನಿಕರ ಅಭಿಪ್ರಾಯವು ಜಿಲ್ಲಾ ನ್ಯಾಯಾಂಗದೊಂದಿಗಿನ ಅವರ ಅನುಭವಗಳ ಮೇಲೆ ಪ್ರಾಥಮಿಕವಾಗಿ ಅವಲಂಬಿತವಾಗಿರುತ್ತದೆ. ಇದು ನಮ್ಮ ಭುಜದ ಮೇಲೆ ಬಹು ದೊಡ್ಡ ಹೊಣೆ ಹೊರಿಸುತ್ತದೆ. ಜಿಲ್ಲಾ ನ್ಯಾಯಾಂಗಾಧಿಕಾರಿಗಳು ಬಹುಮುಖಿ ಕಾರ್ಯ ಮತ್ತು ಪಾತ್ರ ನಿರ್ವಹಿಸಬೇಕು. ಜನರ ಮತ್ತು ಸಾಮಾಜಿಕ ಸಮಸ್ಯೆ ಅರ್ಥ ಮಾಡಿಕೊಳ್ಳುವ ಉತ್ತಮ ಹುದ್ದೆಯಲ್ಲಿ ನೀವು (ಜಿಲ್ಲಾ ನ್ಯಾಯಾಧೀಶರು) ಇದ್ದೀರಿ. ಭಾರತದಲ್ಲಿ ಕಾನೂನು ನೆರವು ಆಂದೋಲನಕ್ಕೆ ಜಿಲ್ಲಾ ನ್ಯಾಯಾಂಗ ಪ್ರೇರಕ ಶಕ್ತಿಯಾಗಿದೆ. ಜಿಲ್ಲಾ ನ್ಯಾಯಾಂಗವನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ” ಎಂದು ಅವರು ಹೇಳಿದರು.

ವಿಚಾರಣಾಧೀನ ಕೈದಿಗಳ ದುಸ್ಥಿತಿಯನ್ನೂ ಸಿಜೆಐ ಈ ಸಂದರ್ಭದಲ್ಲಿ ವಿವರಿಸಿದರು. “ವಿಚಾರಣಾಧೀನ ಕೈದಿಗಳ ಸ್ಥಿತಿಗೆ ಸಂಬಂಧಿಸಿದಂತೆ ನಿಮ್ಮ ಸಕ್ರಿಯ ಪರಿಗಣನೆ ಮತ್ತು ಮಧ್ಯಸ್ಥಿಕೆ ಅತ್ಯಗತ್ಯ. ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳ ಸಮಾವೇಶದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಮತ್ತು ಅಟಾರ್ನಿ ಜನರಲ್‌ ಈ ವಿಚಾರವನ್ನು ಸೂಕ್ತ ರೀತಿಯಲ್ಲಿ ಎತ್ತಿತೋರಿಸಿದ್ದಾರೆ. ವಿಚಾರಣಾಧೀನ ಕೈದಿಗಳು ಹೆಚ್ಚು ಸೂಕ್ತವಾದ ಪರಿಹಾರ ಪಡೆಯಲು ನಾಲ್ಸಾ (NALSA) ಎಲ್ಲಾ ಪಾಲುದಾರರೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿದೆ ಎಂದು ತಿಳಿದು ಸಂತೋಷವಾಗಿದೆ” ಎಂದು ಅವರು ಹೇಳಿದರು.

ಪೂರ್ಣ ಭಾಷಣವನ್ನು ಇಲ್ಲಿ ಓದಿ:

Attachment
PDF
CJI_Ramana_full_speech.pdf
Preview

Related Stories

No stories found.
Kannada Bar & Bench
kannada.barandbench.com