ಸರ್ಕಾರದ ನೀತಿಯ ಬಗ್ಗೆ ತನಗೆ ಸಹಮತವಿಲ್ಲ ಎನ್ನುವ ಕಾರಣಕ್ಕೆ ನ್ಯಾಯಾಂಗ ಮಧ್ಯಪ್ರವೇಶಿಸುವ ಅಗತ್ಯವಿಲ್ಲ: ನ್ಯಾ. ಕೌಲ್

ಇಸ್ರೇಲ್‌ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಕೆಲ ಅಂಶಗಳಿಗೂ ಭಾರತದಲ್ಲಿ ಕೈಗೊಳ್ಳಲಾಗುತ್ತಿರುವ ಕೆಲವೊಂದು ಕ್ರಮಗಳಿಗೂ ಹೋಲಿಕೆಯಿದೆ ಎಂದು ಅವಲೋಕಿಸದ ನ್ಯಾ. ರೋಹಿಂಟನ್‌ ನಾರಿಮನ್‌.
Justice Sanjay Kishan Kaul
Justice Sanjay Kishan Kaul

ಎಲ್ಲಾ ಅನಿಷ್ಟಗಳಿಗೆ ಭಾರತೀಯ ನ್ಯಾಯಾಂಗ ರಾಮಬಾಣ ಎಂದು ಚಿತ್ರಿತವಾಗುತ್ತಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರ ʼಕಾನ್‌ಸ್ಟಿಟ್ಯೂಷನಲಿಸಮ್‌ ಅಂಡ್‌ ದ ರೂಲ್‌ ಆಫ್‌ ಲಾ ಇನ್‌ ಎ ಥಿಯೇಟರ್‌ ಆಫ್‌ ಡೆಮಾಕ್ರಸಿʼ (ಪ್ರಜಾಪ್ರಭುತ್ವದ ಆಡುಂಬೊಲದಲ್ಲಿ ಸಾಂವಿಧಾನಿಕತೆ ಮತ್ತು ಕಾನೂನಾತ್ಮಕ ಆಡಳಿತ) ಕೃತಿಯನ್ನು ಈಚೆಗೆ ಬಿಡುಗಡೆ ಮಾಡಿ ನ್ಯಾ. ಕೌಲ್‌ ಅವರು ಮಾತನಾಡಿದರು.

ಸರ್ಕಾರದ ಆಡಳಿತದ ಬಗ್ಗೆ, ನೀತಿ ನಿರೂಪಣೆಯ ಬಗ್ಗೆ ತನಗೆ ಸಹಮತವಿಲ್ಲ ಎಂದ ಮಾತ್ರಕ್ಕೆ ನ್ಯಾಯಾಂಗವು ಮಧ್ಯಪ್ರವೇಶಿಸಬಾರದು. ಅದರೂ ಇದಕ್ಕೆ ಅನೇಕ ಅಪವಾದಗಳನ್ನು ಪ್ರಸಕ್ತ ಭಾರತದಲ್ಲಿ ಕಾಣುತ್ತೇವೆ ಎಂದು ಅವರು ಹೇಳಿದರು.

 ಪ್ರತಿಯೊಂದು ನೈತಿಕ ಮತ್ತು ರಾಜಕೀಯ ವಿವಾದಗಳ ಇತ್ಯರ್ಥಕ್ಕೆ ನ್ಯಾಯಾಲಯವನ್ನು ಅವಲಂಬಿಸುವುದರಿಂದ ನ್ಯಾಯಾಲಯಗಳು ರಾಜಕೀಯ ನಿರ್ಧಾರಗಳನ್ನು ಮಾಡುವ ತಾಣಗಳಾಗಿ ಹೊಮ್ಮುವ ಅಪಾಯವಿದೆ. ಇದು ಅನೇಕ ಹಂತಗಳಲ್ಲಿ ಗಂಭೀರ ಸವಾಲುಗಳನ್ನು ಒಡ್ಡುತ್ತದೆ ಎಂದು ಅವರು ವಿವರಿಸಿದರು.

ಸರ್ಕಾರದ ನೀತಿಗಳನ್ನು ಬದಲಿಸುವಂತೆ ನಿರ್ದೇಶಿಸಬೇಕು ಎಂದು ಸದಾ ನ್ಯಾಯಾಲಯಗಳನ್ನು ಎಡತಾಕಿದರೆ ಆಗ ಅದು ಪ್ರಜಾಸತ್ತಾತ್ಮಕ ರಾಜಕೀಯದ ಮೂಲಕ ನೀತಿಗಳನ್ನು ರೂಪಿಸಲು ಅಡ್ಡಗಾಲಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

Also Read
ಎಲ್ಲಾ ವಲಸೆ ಕಾರ್ಮಿಕರಿಗೂ 'ಬಾಂಗ್ಲಾದೇಶಿʼ ಎಂದು ಹಣೆಪಟ್ಟಿ ಹಚ್ಚುವುದು ಅಪಾಯಕಾರಿ: ನ್ಯಾ. ಎಸ್ ಮುರಳೀಧರ್

ನ್ಯಾಯಾಲಯಗಳು ಗರ್ಭಪಾತ ನಿಷೇಧ ರದ್ದುಗೊಳಿಸಲು ಸಾಧ್ಯವಾಗದಿದ್ದಾಗ ಗರ್ಭಪಾತವನ್ನು ಕಾನೂನುಬದ್ಧಗೊಳಿಸಲು 2018ರಲ್ಲಿ ಕ್ಯಾಥೋಲಿಕ್-ಬಹುಸಂಖ್ಯಾತ ಐರ್ಲೆಂಡ್ ದೇಶವು ಜನಾಭಿಪ್ರಾಯ ಸಂಗ್ರಹ ಮಾಡಿತು. ನ್ಯಾಯಾಲಯಗಳನ್ನು ಸಂಪರ್ಕಿಸುವ ಬದಲಿಗೆ ಆ ರೀತಿ ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಮೀ ಟೂ ಚಳವಳಿ ಕೂಡ ಅಂಥದ್ದೇ ಭಿನ್ನ ವಿಧಾನ ಎಂದು ಅವರು ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ಸಮಾರಂಭದಲ್ಲಿ ಮಾತನಾಡಿ, ನ್ಯಾ. ಸಿಕ್ರಿ ಅವರ ಕೃತಿ ಸಾಂವಿಧಾನಿಕ ಮೌಲ್ಯಗಳನ್ನು ಹಾಳುಗಡೆವದಂತೆ ಜಗತ್ತಿನೆಲ್ಲೆಡೆ ಇರುವ ಪ್ರಜಾಪ್ರಭುತ್ವ ಸರ್ಕಾರಗಳಿಗೆ ಸಮಯೋಚಿತ ಎಚ್ಚರಿಕೆ ನೀಡುತ್ತದೆ ಎಂದು ಶ್ಲಾಘಿಸಿದರು. ಇಸ್ರೇಲ್‌ನಲ್ಲಿ ಇಂದು ನ್ಯಾಯಮೂರ್ತಿಗಳನ್ನು ನೇಮಿಸುವ ಪ್ರಕ್ರಿಯೆಯು ಬಲಪಂಥೀಯ ಸರ್ಕಾರದ ಕೈಲಿದೆ. ಅದು ತನ್ನ ನೀತಿಗಳಿಗೆ ಅನುಗುಣವಾಗಿ ಇರುವ ನ್ಯಾಯಮೂರ್ತಿಗಳನ್ನು ಮಾತ್ರವೇ ನೇಮಿಸಲಿದೆ ಎಂದು ಅವರು ನ್ಯಾಯಾಂಗದಲ್ಲಿನ ಜಾಗತಿಕ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದರು.

ಮುಂದುವರೆದು, ಇಸ್ರೇಲ್‌ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಕೆಲ ಅಂಶಗಳಿಗೂ ಭಾರತದಲ್ಲಿ ಕೈಗೊಳ್ಳಲಾಗುತ್ತಿರುವ ಕೆಲವೊಂದು ಕ್ರಮಗಳಿಗೂ ಹೋಲಿಕೆಯಿದೆ ಎಂದು ಅವಲೋಕಿಸಿದರು.

ನ್ಯಾ. ಸಿಕ್ರಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆಯ ನಂತರ ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಉಪಕುಲಪತಿ ಪ್ರೊ ಸಿ ರಾಜ್ ಕುಮಾರ್ ಅವರು ಸಂವಾದ ನಡೆಸಿಕೊಟ್ಟರು. ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಮಾಧವಿ ಗೊರಾಡಿಯಾ ದಿವಾನ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Kannada Bar & Bench
kannada.barandbench.com