ಜೂಹಿಯ 5ಜಿ ಪ್ರಹಸನ: ಪೀಠಕ್ಕೆ ಹಾಡುಗಳ ಮೂಲಕ ಕಾಟ ಕೊಟ್ಟ ನಟಿಯ ಅಭಿಮಾನಿ!

ಒಬ್ಬರು ಜೂಹಿ ಮೇಡಂ ಎಲ್ಲಿ ಎಂದು ಕೇಳಿದರೆ ಮತ್ತೊಬ್ಬರು ಜೂಹಿಯವರದ್ದೇ ಸಿನಿಮಾ ಹಾಡು ಗುನುಗಿದರು. ಅಂದಹಾಗೆ ಖುದ್ದು ನಟಿಯೇ ಈ ಅಪಾಯವನ್ನು ಆಹ್ವಾನಿಸಿಕೊಂಡಿದ್ದರು ! ಹೇಗೆ ಎಂಬ ಕುತೂಹಲಕ್ಕೆ ಸುದ್ದಿ ಓದಿ…
Juhi Chawla, Delhi HC
Juhi Chawla, Delhi HC

ನ್ಯಾಯಾಲಯದಲ್ಲಿ ಗಂಭೀರವಾದ ವಿಚಾರಣೆ ನಡೆಯುತ್ತಿದ್ದ ವೇಳೆ ಎಲ್ಲಿಂದಲೋ ಸಿನಿಮಾ ಸಂಗೀತ ಪದೇ ಪದೇ ಕೇಳಿ ಬಂದರೆ ಹೇಗಿರುತ್ತದೆ? ಅಭಿಮಾನಿಗಳಾರೋ ನಟಿಯ ತಲಾಶ್‌ನಲ್ಲಿ ತೊಡಗಿದರೆ ಏನಾಗಬಹುದು? ಏನು ಆಗಬಾರದಿತ್ತೋ ಅದೆಲ್ಲವೂ ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ನಡೆದು ಹೋಯಿತು!

5 ಜಿ ತರಂಗಾಂತರ ಬಳಕೆಯ ವಿರುದ್ಧ ಬಾಲಿವುಡ್ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ವರ್ಚುವಲ್‌ ವಿಧಾನದ ಮೂಲಕ ನಡೆಯುತ್ತಿತ್ತು. ಆಗ ವರ್ಚುವಲ್‌ ಲಿಂಕ್‌ ಮೂಲಕ ಪ್ರವೇಶಿಸಿದ ಅಪರಿಚಿತ ಸಂದರ್ಶಕರು ತಮ್ಮ ನೆಚ್ಚಿನ ನಟಿ ಜೂಹಿ ಅವರ ಸಿನಿಮಾ ಹಾಡನ್ನು ಹಾಡಿದರು. ಸಹಜವಾಗಿಯೇ ವಿಚಾರಣೆಗೆ ಭಂಗ ಉಂಟಾಯಿತು. ಈ ಹಂತದಲ್ಲಿ ನ್ಯಾಯಮೂರ್ತಿ ಜೆ ಆರ್‌ ಮಿಧಾ ಘಟನೆಗೆ ಕಾರಣವಾದವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಸೂಚಿಸಿದರು.

ಗೂಂಗಟ್‌ ಕೀ ಆಡ್‌ ಸೇ ದಿಲ್‌ ಬರಕಾ... 

ವಿಚಾರಣೆ ಆರಂಭವಾದ ಹೊತ್ತಿನಿಂದಲೂ ಅಡೆತಡೆ ಉಂಟಾಗುತ್ತಲೇ ಇತ್ತು. ವರ್ಚುವಲ್‌ ವಿಚಾರಣೆಗೆ ನೀಡಲಾಗುವ ಲಿಂಕ್‌ ಮೂಲಕ ಪ್ರವೇಶಿಸಿದ ಕೆಲವು ಸಂದರ್ಶಕರು ಆರಂಭದಲ್ಲಿ ʼಜೂಹಿ ಮೇಡಂ ಎಲ್ಲಿ ಅವರು ಕಾಣುತ್ತಿಲ್ಲʼ ಎಂದರು. ಆ ನಂತರ ಯಾರೋ ಒಬ್ಬಾತ, "ಗೂಂಗಟ್‌ ಕೀ ಆಡ್‌ ಸೇ ದಿಲ್‌ ಬರ್‌ಕಾ..." ಎಂದು ಜೂಹಿ ಅಭಿನಯದ ಹಾಡನ್ನು ಗುನುಗತೊಡಗಿದ. ಗಲಿಬಿಲಿಗೊಂಡ ನ್ಯಾಯಮೂರ್ತಿಗಳು ಸಂದರ್ಶಕರ ಧ್ವನಿಯನ್ನು ಮ್ಯೂಟ್‌ ಮಾಡುವಂತೆ ಕೋರ್ಟ್‌ ಮಾಸ್ಟರ್‌ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು. ಈ ವೇಳೆ ಜೂಹಿ ಪರ ವಕೀಲ ದೀಪಕ್‌ ಖೋಸ್ಲಾ ಅವರು “ಇದು ಪ್ರತಿವಾದಗಿಳ ದಾರಿ ತಪ್ಪಿಸುವ ಪ್ರಯತ್ನವಲ್ಲ ಎಂದು ನಾನು ಭಾವಿಸುತ್ತೇನೆ” ಎಂದರು.

ಲಾಲ್‌ ಲಾಲ್‌ ಹೋಟೋಂಪೆ...

ಆ ಬಳಿಕ ಕೆಲ ಹೊತ್ತು ವಿಚಾರಣೆ ಸುಸೂತ್ರವಾಗಿ ನಡೆಯಿತಾದರೂ ಮತ್ತೆ ಲಿಂಕ್‌ ಮೂಲಕ ಪ್ರವೇಶಿಸಿದ ಆ ವ್ಯಕ್ತಿ ಈ ಬಾರಿ, "ಲಾಲ್ ಲಾಲ್‌ ಹೋಟೋಂಪೆ ಗೋರಿ ತೇರಾ ನಾಮ್ ಹೈ" ಎಂದು ನಟಿಯ ಮತ್ತೊಂದು ಹಾಡನ್ನು ಗುನುಗತೊಡಗಿದ. ಪೀಠಕ್ಕೆ ಅಭಿಮಾನಿಯ ಕಾಟ ತಾಳದಾಯಿತು. ಮತ್ತೆ ಸಿಬ್ಬಂದಿಗಳು ಸಂದರ್ಶಕರ ಧ್ವನಿ ಮ್ಯೂಟ್‌ ಮಾಡಿದರು. ಆದರೆ, ಅಷ್ಟಕ್ಕೇ ಮುಗಿಯಲಿಲ್ಲ ಈ ಪ್ರಹಸನ. ಅತ್ತ ಪೀಠ ಸಿಡಿಮಿಡಿಗೊಳ್ಳುತ್ತಿದ್ದರೆ ಮತ್ತೆ ಹೇಗೋ ಲಿಂಕ್‌ ಮೂಲಕ ನುಸುಳಿದ ನಟೀಮಣಿಯ ಅಭಿಮಾನಿ ಭೂಪ ಈ ಬಾರಿ ಮತ್ತಷ್ಟು ಜೋಷ್‌ನೊಂದಿಗೆ ಪ್ರವೇಶಿಸಿ, "ಮೇರಿ ಬನ್ನೋಕಿ ಆಯೇಗಿ ಬರಾತ್‌," ಎಂದು ಹಾಡಿದ. ಅಭಿಮಾನಿಯ ಈ ಆಟಾಟೋಪ ಪೀಠಕ್ಕೆ ಭಾರಿ ಕಿರಿಕಿರಿ ಉಂಟು ಮಾಡಿತು.

ಕುತೂಹಲದ ಸಂಗತಿ ಎಂದರೆ, ಹೀಗೆಲ್ಲಾ ಕೋರ್ಟ್‌ನ ವರ್ಚುವಲ್‌ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಜೂಹಿ ಅಭಿಮಾನಿಗಳಿಗೆ ಹೇಗೆ ಲಿಂಕ್‌ ಸಿಕ್ಕಿತು ಎನ್ನುವುದು. ಇದು ಹೇಗಾಯಿತು ಎಂದು ತನಿಖೆಯ ನಂತರವಷ್ಟೇ ಗೊತ್ತಾಗಬೇಕಿದ್ದರೂ ಅಭಿಮಾನಿಗಳು ವರ್ಚುವಲ್‌ ಲಿಂಕ್‌ ಮೂಲಕ ಪ್ರಕರಣವನ್ನು ಅಲಿಸಲು, ಬೆಂಬಲಿಸಲು ಖುದ್ದು ಜೂಹಿಯೇ ಟ್ವೀಟ್‌ ಮಾಡಿದ್ದರು! ಅಷ್ಟೇ ಅಲ್ಲ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲೂ ವಿಚಾರಣೆಯ ವೆಬ್‌ಲಿಂಕ್‌ ಹಂಚಿಕೊಂಡಿದ್ದರು!!

ಸಂಗತಿ ಅಷ್ಟಕ್ಕೇ ಮುಗಿಯಲಿಲ್ಲ. ಜೂಹಿ ಸಲ್ಲಿಸಿದ್ದ ಅರ್ಜಿ ದೋಷಯುಕ್ತವಾಗಿದೆ ಮತ್ತು ಮಾಧ್ಯಮ ಪ್ರಚಾರಕ್ಕಾಗಿ ಇದನ್ನು ಮಾಡಲಾಗಿದೆ ಎಂದು ನ್ಯಾಯಾಲಯ ಕಟುವಾಗಿ ಟೀಕಿಸಿತು.

ಜೂಹಿ ಮತ್ತಿತರರ ಫಿರ್ಯಾದಿಗಳು ತಮಗೆ ಆರೋಪದ ಬಗ್ಗೆ ಯಾವುದೇ ಜ್ಞಾನ ಇಲ್ಲ ಎಂದು ಒಪ್ಪಿಕೊಂಡಿರುವಾಗ ಪರಿಶೀಲನೆ ಇಲ್ಲದೆ ಹೇಗೆ ದಾವೆ ಹೂಡಲಾಯಿತು ಎಂದು ನ್ಯಾಯಾಲಯ ನೇರವಾಗಿ ವಕೀಲ ಖೋಸ್ಲಾ ಅವರನ್ನೇ ಪ್ರಶ್ನಿಸಿತು. “ಒಬ್ಬ ವ್ಯಕ್ತಿ ಈ ಬಗ್ಗೆ ನನಗೇನೂ ಗೊತ್ತಿಲ್ಲ, ಆದರೂ ವಿಚಾರಣೆ ನಡೆಸಿ ಎಂದು ಹೇಳುವ ಮೊಕದ್ದಮೆಯನ್ನು ನಾನು ನೋಡಿಯೇ ಇಲ್ಲ” ಎಂದು ನ್ಯಾಯಮೂರ್ತಿಗಳು ಸಿಡಿಮಿಡಿಗೊಂಡರು.

ಪ್ರಕರಣದಲ್ಲಿ ಮನಬಂದಂತೆ ಪ್ರತಿವಾದಿಗಳನ್ನು ಹೆಸರಿಸಿರುವುದಕ್ಕೂ ಪೀಠ ಆಕ್ಷೇಪ ವ್ಯಕ್ತಪಡಿಸಿತು. ಖಾಸಗಿ ವಿಶ್ವವಿದ್ಯಾಲಯಗಳು, ವಿಶ್ವ ಆರೋಗ್ಯ ಸಂಸ್ಥೆಯನ್ನು ಕೂಡ ಪ್ರತಿವಾದಿಗಳನ್ನು ಮಾಡಿರುವ ಬಗ್ಗೆ ನ್ಯಾಯಾಲಯ ಅಸಮಾಧಾನ ಸೂಚಿಸಿತು. ಅನೇಕ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಫಿರ್ಯಾದಿ ಸೂಚಿಸುವುದು ಒಳ್ಳೆಯ ಲಕ್ಷಣವಲ್ಲ ಎಂದು ನ್ಯಾಯಾಲಯ ಹೇಳಿತು. ಅಂದಹಾಗೆ, ಸುಮಾರು 33 ಪ್ರತಿವಾದಿಗಳನ್ನು ಹೆಸರಿಸಲಾಗಿತ್ತು!

ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಈ ಮೊಕದ್ದಮೆ ಕ್ಷುಲ್ಲಕ ಎಂದು ವಾದಿಸಿದರು. ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ಅಮಿತ್ ಮಹಾಜನ್ ಕೂಡ ಈ ಮೊಕದ್ದಮೆ ಸಮರ್ಥನೀಯವಲ್ಲ ಎಂದರು. ಇತ್ತ ಕೆಲ ಖಾಸಗಿ ಟೆಲಿಕಾಂ ಕಂಪೆನಿಗಳ ಪರ ಹಾಜರಾದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಅವರು “5ಜಿ ಸರ್ಕಾರದ ನೀತಿಯಾಗಿದ್ದು ರಿಟ್ ಅರ್ಜಿಯ ಮೂಲಕ ಮಾತ್ರ ಅದನ್ನು ಪ್ರಶ್ನಿಸಬಹುದು ಎಂದು ವಾದಿಸಿದರು. “ಸಾರ್ವಜನಿಕ ನ್ಯೂಸೆನ್ಸ್‌ ಎಂದರೆ ಏನು? ಅದನ್ನು ಮೊದಲು ಸಾಬೀತುಪಡಿಸಬೇಕು. ನೀವು ಆರೋಪ ಹೊರಿಸಿ ಸುಮ್ಮನೆ ಕೂರಲು ಸಾಧ್ಯವಿಲ್ಲ” ಎಂದರು. ವಾದಗಳನ್ನು ಆಲಿಸಿದ ನ್ಯಾಯಾಲಯ ನ್ಯಾಯಾಲಯ ಶುಲ್ಕ ಮತ್ತು ದಾವೆಯ ರೂಪಿಸುವಿಕೆ ಕುರಿತು ತನ್ನ ಆದೇಶ ಕಾಯ್ದಿರಿಸಿತು.

Kannada Bar & Bench
kannada.barandbench.com