ಕಿರಿಯ ಸಿವಿಲ್ ಎಂಜಿನಿಯರ್‌ಗಳಿಗೆ ಬಡ್ತಿ: ರಾಜ್ಯ ಸರ್ಕಾರದ ಅಧಿಸೂಚನೆ ಅಸಾಂವಿಧಾನಿಕ ಎಂದ ಹೈಕೋರ್ಟ್‌

ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ (ಅಧಿಕಾರಿಗಳ ಮತ್ತು ಸಿಬ್ಬಂದಿ ಸಾಮಾನ್ಯ ನೇಮಕಾತಿ) ಅಧಿನಿಯಮ-2011ರ ಷೆಡ್ಯೂಲ್-3ಕ್ಕೆ ಮಾರ್ಪಾಡು ಮಾಡಿ ರಾಜ್ಯ ಸರ್ಕಾರವು 2011ರ ಏಪ್ರಿಲ್‌ 11ರಂದು ಅಧಿಸೂಚನೆ ಹೊರಡಿಸಿತ್ತು.
Karnataka HC
Karnataka HC
Published on

ಕಿರಿಯ ಸಿವಿಲ್ ಎಂಜಿನಿಯರ್‌ಗಳಿಗೆ ಬಡ್ತಿ ನೀಡುವ ಮೂಲಕ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗಳಲ್ಲಿ ಶೇ.25ರಷ್ಟು ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ರಾಜ್ಯ ಸರ್ಕಾರವು 2011ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ರಾಜ್ಯ ಸರ್ಕಾರದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಎಂ ಆರ್ ರಂಗರಾಮು ಸೇರಿದಂತೆ ರಾಜ್ಯದ ವಿವಿಧ ನಗರಸಭೆ ಮತ್ತು ನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಳು ಮಂದಿ ಸಹಾಯಕ ಸಿವಿಲ್ ಎಂಜಿನಿಯರ್‌ಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಇ ಎಸ್ ಇಂದಿರೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಕಿರಿಯ ಸಿವಿಲ್ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಯನ್ನು ಭರ್ತಿ ಮಾಡಲು ಅವಕಾಶವಾಗುವಂತೆ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ (ಅಧಿಕಾರಿಗಳ ಮತ್ತು ಸಿಬ್ಬಂದಿ ಸಾಮಾನ್ಯ ನೇಮಕಾತಿ) ಅಧಿನಿಯಮ-2011ರ ಷೆಡ್ಯೂಲ್-3ಕ್ಕೆ ಮಾರ್ಪಾಡು ಮಾಡಿ ರಾಜ್ಯ ಸರ್ಕಾರವು 2011ರ ಏಪ್ರಿಲ್‌ 11ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯು ಅಸಾಂವಿಧಾನಿಕ ಹಾಗೂ ಸಂವಿಧಾನದ 14 (ಸಮಾನತೆ) ಮತ್ತು 16ನೇ ವಿಧಿಯ (ಸಮಾನ ಅವಕಾಶ) ಸ್ಪಷ್ಟ ಉಲ್ಲಂಘನೆ” ಎಂದು ಹೈಕೋರ್ಟ್ ಹೇಳಿದೆ.

“ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಫೀಡರ್/ಕೆಳ ಶ್ರೇಣಿಯ ಅಧಿಕಾರಿಗಳು ಅಂದರೆ ಸಹಾಯಕ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿ ಹುದ್ದೆ ಭರ್ತಿ ಮಾಡಬೇಕು. ಈ ಪ್ರಕ್ರಿಯೆಯನ್ನು ಆದೇಶ ಪ್ರತಿ ದೊರೆತ ಎಂಟು ವಾರಗಳ ಒಳಗೆ ಪೂರ್ಣಗೊಳಿಸಬೇಕು ಎಂದು ರಾಹ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಒಂದು ವೇಳೆ 2011ರ ನಿಯಮಗಳನ್ನು ಜಾರಿಗೆ ತಂದು ಕಿರಿಯ ಎಂಜಿನಿಯರ್‌ಗಳನ್ನು ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗೆ ಬಡ್ತಿ ಮೂಲಕ ಭರ್ತಿ ಮಾಡಿದರೆ, ಬಡ್ತಿಗೆ ಮುಂಚೂಣಿಯಲ್ಲಿರುವ ಶೇ.25ರಷ್ಟು ಸಹಾಯಕ ಎಂಜಿನಿಯರ್‌ಗಳ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹಿರಿಯ ವಕೀಲರಾದ ಎಂ ಎಸ್ ಭಾಗವತ್, ಕೆ ಎನ್ ಫಣೀಂದ್ರ, ವಕೀಲರಾದ ಎಂ ಪಿ ಶ್ರೀಕಾಂತ್, ಅನೀಶ್ ಆಚಾರ್ಯ ಮತ್ತು ಕೆ ಸತೀಶ್ ಅವರು “ಸಹಾಯಕ ಎಂಜಿನಿಯರ್‌ಗಳನ್ನು ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಭರ್ತಿ ನೀಡಬೇಕಾಗುತ್ತದೆ. ಇದಕ್ಕಿಂತ ಕಡಿಮೆ ಶ್ರೇಣಿಯ ಕಿರಿಯ ಎಂಜಿನಿಯರ್ ಅವರಿಗೆ ಬಡ್ತಿಯ ಮೂಲಕ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಭರ್ತಿ ಮಾಡುವುದು ಅಸಾಂವಿಧಾನಿಕ ಕ್ರಮ” ಎಂದು ವಾದಿಸಿದ್ದರು. ಈ ವಾದವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

Attachment
PDF
Rangaramu M R and others Vs State of Karnataka
Preview
Kannada Bar & Bench
kannada.barandbench.com