[ಚಲಿಸುವ ರೈಲಿನಿಂದ ಬಿದ್ದು ಸಾವು] ಮೃತನ ಜೇಬಿನಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಪರಿಹಾರ ನಿರಾಕರಿಸಲಾಗದು: ಹೈಕೋರ್ಟ್

ಹತ್ತು ವರ್ಷಗಳ ಹಿಂದೆ ಆಕಸ್ಮಿಕವಾಗಿ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದ ವಿಜಯಪುರದ ಅಮಿನಾಸಾಬ್ ಮುಲ್ಲಾ ಅವರ ಪತ್ನಿ ಹಾಗೂ ಮಕ್ಕಳಿಗೆ ಪರಿಹಾರ ನೀಡುವಂತೆ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರ ಏಕಸದಸ್ಯ ಪೀಠ ಆದೇಶ ಮಾಡಿದೆ.
Karnataka High Court
Karnataka High Court
Published on

ರೈಲ್ವೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ರೈಲ್ವೆ ಟಿಕೆಟ್‌ ದೊರಕಲಿಲ್ಲ ಎಂಬ ಕಾರಣಕ್ಕೆ ಆತನ ಸಂಬಂಧಿಗಳಿಗೆ ಪರಿಹಾರ ನೀಡುವಂತಿಲ್ಲ ಎಂಬ ವಾದವನ್ನು ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್, ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಪತ್ನಿ ಹಾಗೂ ಮಕ್ಕಳಿಗೆ 8 ಲಕ್ಷ ರೂಪಾಯಿ ಪರಿಹಾರಕ್ಕೆ ಆದೇಶಿಸಿದೆ.

ಹತ್ತು ವರ್ಷಗಳ ಹಿಂದೆ ಆಕಸ್ಮಿಕವಾಗಿ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದ ವಿಜಯಪುರದ ಅಮಿನಾಸಾಬ್ ಮುಲ್ಲಾ ಅವರ ಪತ್ನಿ ಹಾಗೂ ಮಕ್ಕಳಿಗೆ ಪರಿಹಾರ ನೀಡುವಂತೆ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರ ಏಕಸದಸ್ಯ ಪೀಠ ಆದೇಶ ಮಾಡಿದೆ.

ದಾಖಲೆಗಳನ್ನು ಹಾಗೂ ರೈಲ್ವೆ ಕ್ಲೇಮ್ ನ್ಯಾಯ ಮಂಡಳಿಯ ಆದೇಶವನ್ನು ಪರಿಶೀಲಿಸಿದ ಬಳಿಕ ಪೀಠವು 2015ರ ಏಪ್ರಿಲ್‌ 6ರಂದು ವಿಜಯಪುರ ಮತ್ತು ಮಿಂಚಿನಹಾಳ ರೈಲು ನಿಲ್ದಾಣಗಳ ಮಧ್ಯೆ ರೈಲು ಹಳಿಯಲ್ಲಿ ಪುರುಷರೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ರೈಲ್ವೆಯ ಲೋಕೋ ಪೈಲಟ್‌ ವಾಕಿಟಾಕಿಯ ಮೂಲಕ ಸಂದೇಶ ನೀಡಿದ್ದಾರೆ. ಆ ಸಂಬಂಧ ಎಫ್ಐಆರ್ ಕೂಡ ದಾಖಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

ಮೃತನ ಮರಣೋತ್ತರ ಪರೀಕ್ಷಾ ವರದಿಯಲ್ಲಿ, ಆಘಾತದಿಂದ ಉಂಟಾದ ಬಹುಅಂಗಾಂಗ ವೈಫಲ್ಯ, ರಕ್ತಸ್ರಾವದ ಪರಿಣಾಮವಾಗಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ. ಎಲ್ಲಾ ದಾಖಲೆಗಳು ಮೃತನು ರೈಲ್ವೆ ಅಪಘಾತದಲ್ಲಿಯೇ ಸಾವನ್ನಪ್ಪಿರುವುದಾಗಿ ಖಚಿತಪಡಿಸುತ್ತವೆ ಎಂದೂ ನ್ಯಾಯಾಲಯ ತಿಳಿಸಿದೆ.

ಘಟನೆ ನಡೆದ ತಕ್ಷಣ ವ್ಯಕ್ತಿ ಸಾವನ್ನಪ್ಪಿದ್ದಾನೆ. ತಕ್ಷಣವೇ ಆತನ ದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಹುಶಃ ಆ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಟಿಕೆಟ್ ಕಳೆದುಹೋಗಿರಬಹುದು. ಆದರೆ, ಟಿಕೆಟ್ ಜೇಬಿನಲ್ಲಿ ಇರಲ್ಲಿಲ್ಲ ಎಂಬ ಕಾರಣಕ್ಕೆ ನ್ಯಾಯ ಮಂಡಳಿ ಪರಿಹಾರಕ್ಕೆ ಅರ್ಹನಲ್ಲ ಎಂದು ಹೇಳುವಂತಿಲ್ಲ. ಸಹಜವಾಗಿ ಮೃತನ ಕುಟುಂಬದವರು, ಆಘಾತಕ್ಕೆ ಒಳಗಾಗಿದ್ದರಿಂದ ಆ ಸಂದರ್ಭದಲ್ಲಿ ಅವರು ಟಿಕೆಟ್ ಬಗ್ಗೆ ಆಲೋಚಿಸಿ ಅದನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ನಂತರ ಸಲ್ಲಿಸದೇ ಇರಬಹುದು. ಹಾಗೆಂದ ಮಾತ್ರ ಮೃತನ ಕುಟುಂಬ ಪರಿಹಾರಕ್ಕೆ ಅರ್ಹವಲ್ಲ ಎಂದು ಹೇಳಲಾಗದು ಎಂದು ಆದೇಶ ನೀಡಿರುವ ನ್ಯಾಯಾಲಯ, ಮೃತನ ಕುಟುಂಬದ ಮೇಲ್ಮನವಿ ಮಾನ್ಯ ಮಾಡಿ ಬಡ್ಡಿ ಸಹಿತ 8 ಲಕ್ಷ ರೂಪಾಯಿ ಪರಿಹಾರವನ್ನು ಕುಟುಂಬಕ್ಕೆ ಪಾವತಿಸುವಂತೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅಮಿನಾಸಾಬ್ ಮುಲ್ಲಾ 2015ರ ಏಪ್ರಿಲ್‌ 6ರಂದು ವಿಜಯಪುರ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಲಿಂಬಾಲಾಗೆ ತೆರಳಲು ಟಿಕೆಟ್ ಖರೀದಿಸಿ ಅಲ್ಲಿಯೇ ರೈಲನ್ನು ಏರಿದ್ದರು. ಆದರೆ, ಚಲಿಸುವ ರೈಲಿನಲ್ಲಿ ಅವರು ಆಕಸ್ಮಿಕವಾಗಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಆ ಘಟನೆ ಹಿನ್ನೆಲೆಯಲ್ಲಿ ಮೃತರ ಕುಟುಂಬ ಪರಿಹಾರ ನೀಡುವಂತೆ ರೈಲ್ವೆ ಕ್ಲೇಮ್‌ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು. ಆದರೆ ನ್ಯಾಯ ಮಂಡಳಿಯು ಅಪಘಾತದಲ್ಲಿ ಅಮಿನಸಾಬ್ ಸಾವನ್ನಪ್ಪಿರುವ ಬಗ್ಗೆ ಯಾವುದೇ ಮಾಹಿತಿಯನ್ನು ರೈಲ್ವೆಗೆ ನೀಡಿಲ್ಲ ಮತ್ತು ಸಾವನ್ನಪ್ಪಿರುವ ಪ್ರಯಾಣಿಕರ ಜೇಬಿನಲ್ಲಿ ಟಿಕೆಟ್ ದೊರೆತಿಲ್ಲ. ಹೀಗಾಗಿ, ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತ್ತು. ಆದ್ದರಿಂದ, ಮೃತನ ಪತ್ನಿ ಹಾಗೂ ಮಕ್ಕಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Attachment
PDF
Fhajalanabi Vs UoI
Preview
Kannada Bar & Bench
kannada.barandbench.com