ವಾವ್ (WOW) ಸ್ಕಿನ್ ಸೈನ್ಸ್ ಉತ್ಪನ್ನದ ರೀತಿಯಲ್ಲೇ ಪ್ಯಾಕೇಜ್ ಮಾಡಿ ಇಲ್ಲವೇ ವಿನ್ಯಾಸಗೊಳಿಸಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡದಂತೆ ತ್ವಚೆ ಉತ್ಪನ್ನ ತಯಾರಿಕಾ ಕಂಪೆನಿ ವಿಬಿಆರ್‌ಒ ಸ್ಕಿನ್ ಕೇರ್‌ಗೆ ದೆಹಲಿ ಹೈಕೋರ್ಟ್ ಈಚೆಗೆ ನಿರ್ಬಂಧ ವಿಧಿಸಿದೆ [ಬಾಡಿ ಕ್ಯುಪಿಡ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಬಿಆರ್‌ಒ ಸ್ಕಿನ್‌ಕೇರ್ ಪ್ರೈವೇಟ್ ಲಿಮಿಟೆಡ್ ಮತ್ತಿತರರ ನಡುವಣ ಪ್ರಕರಣ].
'ಡಬ್ಲ್ಯೂಕ್ಯೂವಿವಿ' ಗುರುತನ್ನು ಅಥವಾ ವಾಣಿಜ್ಯ ಚಿಹ್ನೆ ʼವಾವ್ʼ ಹೋಲುವ ಇಲ್ಲವೇ ವಂಚಿಸುವಂತಹ ಯಾವುದೇ ಗುರುತುಗಳನ್ನು ಬಳಸದಂತೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ಆದೇಶ ಹೊರಡಿಸಿತು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ʼಸೋ ಬ್ಯೂಟಿಫುಲ್, ಸೋ ಎಲೆಗೆಂಟ್ ಇಟ್ಸ್ ಜಸ್ಟ್ ಲುಕಿಂಗ್ ಲೈಕ್ ಎ ವಾವ್ʼ ಹಾಡಿನ ಸಾಲೊಂದನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಉಲ್ಲೇಖಿಸಿತು.
"ನೋಟಿಸ್ ಜಾರಿ ಮಾಡಿ. 'ಜಸ್ಟ್ ಲುಕಿಂಗ್ ಲೈಕ್ ಎ ವಾವ್!" (ಯಥಾವತ್ ವಾವ್‌ನಂತೆಯೇ ಕಾಣುತ್ತಿದೆ) ಈ ಅಭಿವ್ಯಕ್ತಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತು.
ಪ್ರತಿವಾದಿಯ ಉತ್ಪನ್ನಗಳು ವಾವ್‌ನಂತೆಯೇ ಕಾಣುತ್ತಿದ್ದು ಅವುಗಳು ಫಿರ್ಯಾದಿಯ ಉತ್ಪನ್ನಗಳಂತೆಯೇ ತಪ್ಪಾಗಿ ಭಾಸವಾಗುತ್ತವೆ ಎಂದು ನ್ಯಾಯಾಲಯ ನುಡಿಯಿತು.
ʼವಾವ್ʼ ಉತ್ಪನ್ನಗಳನ್ನು ಸ್ಪಷ್ಟವಾಗಿ ನಕಲು ಮಾಡುತ್ತಿರುವ ವಿಬಿಒಆರ್ 72 ಗಂಟೆಗಳ ಒಳಗೆ ಆನ್‌ಲೈನ್ ಮಾರಾಟ ವೇದಿಕೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ಹಾಗೂ ಸ್ನ್ಯಾಪ್‌ಡೀಲ್‌ನಲ್ಲಿರುವ ಉತ್ಪನ್ನದ ಪಟ್ಟಿ ತೆಗೆದುಹಾಕಬೇಕು ಎಂದು ನ್ಯಾ. ಪ್ರತಿಭಾ ಆದೇಶಿಸಿದ್ದಾರೆ.
ಆದರೆ ಆಶ್ಚರ್ಯ ಅಥವಾ ಉದ್ಗಾರವನ್ನು ಸೂಚಿಸಲು ವಾವ್ ಎಂಬ ಪದವನ್ನು ವಿವರಣಾತ್ಮಕ ಅರ್ಥದಲ್ಲಿ ಪ್ರತಿವಾದಿಗಳು ಬಳಸುವುದಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ನ್ಯಾ. ಸಿಂಗ್ ಸ್ಪಷ್ಟಪಡಿಸಿದರು.
ತನ್ನ ಉತ್ಪನ್ನದ ವಾಣಿಜ್ಯ ಪೋಷಾಕು, ಸೊಬಗು ಹಾಗೂ ಲೇಔಟ್ ಹಾಗೂ ವರ್ಣ ಸಂಯೋಜನೆ ಹಾಗೂ ಬರವಣಿಗೆ ಶೈಲಿಯನ್ನು ಪ್ರತಿವಾದಿ ವಿಬಿಆರ್‌ಒ ಸ್ಕಿನ್ ಕೇ ಪ್ರೈ ಲಿಮಿಟೆಡ್, 'ವಿಬಿಆರ್‌ಒ' ಮತ್ತು 'ಡಬ್ಲ್ಯೂಕ್ಯೂವಿವಿ' ಹೆಸರಿನಲ್ಲಿ ನಕಲುಗೊಳಿಸಿ ಮಾರಾಟ ಮಾಡುತ್ತಿದೆ ಎಂದು ವಾವ್ ಸ್ಕಿನ್ ಸೈನ್ಸ್ ಮಾಲೀಕತ್ವ ಹೊಂದಿರುವ ಬಾಡಿ ಕ್ಯುಪಿಡ್ ಪ್ರೈವೇಟ್ ಲಿಮಿಟೆಡ್ ನ್ಯಾಯಾಲಯದ ಮೆಟ್ಟಿಲೇರಿತ್ತು.
ಭೌತಿಕ ಉತ್ಪನ್ನಗಳನ್ನು ಪರಿಶೀಲಿಸಿದ ನ್ಯಾಯಾಲಯ ಎರಡೂ ಉತ್ಪನ್ನಗಳ ವಾಣಿಜ್ಯ ಪೋಷಾಕು, ರೀತಿ ಹಾಗೂ ವರ್ಣ ಸಂಯೋಜನೆ ವಿಚಾರದಲ್ಲಿ ಅನುಕರಣೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂದು ತೀರ್ಮಾನಿಸಿತು.
ಪ್ರತಿವಾದಿಗಳು ಮಾರಾಟ ಮಾಡಿದ ಪೊಟ್ಟಣ ಮತ್ತು ಉತ್ಪನ್ನಗಳು ಫಿರ್ಯಾದಿಯ ಉತ್ಪನ್ನಗಳ ಸಂಪೂರ್ಣ ಅನುಕರಣೆಯಾಗಿದೆ ಎಂದು ನ್ಯಾಯಾಲಯ ತನ್ನ ಮಧ್ಯಂತರ ಆದೇಶದಲ್ಲಿ ಹೇಳಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]