ನ್ಯಾಯಾಂಗದ ಭಾರತೀಕರಣದ ಬಗ್ಗೆ ಪ್ರತಿಪಾದಿಸುವ ಸುಪ್ರೀಂ ಕೋರ್ಟ್‌ ನ್ಯಾ. ಅಬ್ದುಲ್ ನಜೀರ್‌ ಅವರ ದಕ್ಷಿಣ ಕನ್ನಡ ಪ್ರವಾಸ

ದಕ್ಷಿಣ ಕನ್ನಡಕ್ಕೆ ಪ್ರವಾಸಕ್ಕೂ ಮುನ್ನ ನ್ಯಾಯಮೂರ್ತಿಗಳು ಹೈದರಾಬಾದ್‌ನಲ್ಲಿ ಅಖಿಲ ಭಾರತೀಯ ಅಧಿವಕ್ತ ಪರಿಷತ್ತಿನ ಹದಿನಾರನೇ ರಾಷ್ಟ್ರೀಯ ಸಭೆಯ ಸಮಾರಂಭದಲ್ಲಿ ಭಾಗವಹಿಸಿ ನ್ಯಾಯಾಂಗದ ಭಾರತೀಕರಣ, ನಿರ್ವಸಾಹತೀಕರಣದ ಕುರಿತು ಉಪನ್ಯಾಸ ನೀಡಿದ್ದರು.
Justice Abdul Nazeer visited Puttur, Dakshina Kannada District

Justice Abdul Nazeer visited Puttur, Dakshina Kannada District

DIPR,Mangaluru

ಮೂಡುಬಿದಿರೆಯವರಾದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಸ್. ಅಬ್ದುಲ್‌ ನಜೀರ್‌ ಕುಟುಂಬ ಸಮೇತರಾಗಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಆಶ್ಲೇಷ ಬಲಿ ನೆರವೇರಿಸಿದರು.

ಭಾನುವಾರದಂದು ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸಿದ್ದ ನ್ಯಾ. ನಜೀರ್‌ ಅವರು ಸೋಮವಾರ ಬಲಿ ಸೇವೆ ಅರ್ಪಿಸಿ, ಮಹಾಪೂಜೆಯಲ್ಲಿ ಪಾಲ್ಗೊಂಡರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸುತ್ತಮುತ್ತ ಬಿಗಿಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಬಳಿಕ ಅವರು ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನಕ್ಕೆ ಭೇಟಿ ನೀಡಿದರು. ಅರಣ್ಯ ಇಲಾಖೆಯ ಸಿಬ್ಬಂದಿಯ ಕಾರ್ಯವನ್ನು ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಶ್ಲಾಘಿಸಿದರು.

ಒಂದು ವಾರ ಕಾಲ ದಕ್ಷಿಣ ಕನ್ನಡದಲ್ಲಿರುವ ನ್ಯಾಯಮೂರ್ತಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇಂದು ಅವರು ಲೋಕೋಪಯೋಗಿ ಇಲಾಖೆ ಹಾಗೂ ಪುತ್ತೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಆನೆಮಜಲಿನಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಸಸಿಯೊಂದನ್ನು ನೆಟ್ಟರು. ಮಧ್ಯಾಹ್ನ 2.30ಕ್ಕೆ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಸಂಜೆ ಬೆಳ್ತಂಗಡಿಯ ವಕೀಲರ ಸಂಘದ ಕಟ್ಟಡ ಉದ್ಘಾಟಿಸಲಿದ್ದಾರೆ.

ಡಿ.29ರಂದು ಬುಧವಾರ ಬೆಳಿಗ್ಗೆ ಮಂಗಳೂರು ಹಾಗೂ ಬಂಟ್ವಾಳದ ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿ ಗೃಹ ಉದ್ಘಾಟಿಸಲಿದ್ದಾರೆ. ಡಿ.30ರ ಗುರುವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಕಾನೂನು ಸೇವಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸುವರು.

Also Read
[ಚಾರ್ ಧಾಮ್] ಮೂರು ಹೆದ್ದಾರಿಗಳ ಅಗಲೀಕರಣಕ್ಕೆ ಸುಪ್ರೀಂಕೋರ್ಟ್‌ ಹಸಿರು ನಿಶಾನೆ: ಮೇಲ್ವಿಚಾರಣೆಗೆ ಎ ಕೆ ಸಿಕ್ರಿ ಸಮಿತಿ

ದಕ್ಷಿಣ ಕನ್ನಡಕ್ಕೆ ಭೇಟಿ ನೀಡುವ ಮುನ್ನ ಭಾನುವಾರ ಹೈದರಾಬಾದ್‌ನಲ್ಲಿ ಅಖಿಲ ಭಾರತೀಯ ಅಧಿವಕ್ತ ಪರಿಷತ್‌ನ ಹದಿನಾರನೇ ರಾಷ್ಟ್ರೀಯ ಪರಿಷತ್‌ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಬ್ರಿಟಿಷರು ಬಿಟ್ಟುಹೋದ ವಸಾಹತುಶಾಹಿ ಕಾನೂನು ವ್ಯವಸ್ಥೆ ಭಾರತೀಯರಿಗೆ ಸೂಕ್ತವಾಗಿಲ್ಲ. ಅದನ್ನು ಭಾರತೀಕರಣಗೊಳಿಸುವುದು ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದರು.

“ರಾಷ್ಟ್ರದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಪಾರಂಪರಿಕ ಅಂಶಗಳೊಂದಿಗೆ ಭಾರತೀಯ ಕಾನೂನು ವ್ಯವಸ್ಥೆಯನ್ನು ಜೋಡಿಸಬೇಕಿದೆʼ ಎಂದಿದ್ದರು. ಅಲ್ಲದೆ ʼಪ್ರಾಚೀನ ಭಾರತೀಯ ನ್ಯಾಯಶಾಸ್ತ್ರದಲ್ಲಿ ಪ್ರಾಂಗ್‌ ನ್ಯಾಯದಂತಹ ಸಿದ್ಧಾಂತಗಳಿದ್ದವು ಎಂದು ಅಭಿಪ್ರಾಯಪಟ್ಟಿದ್ದ ಅವರು ಅದೇ ಕಾರ್ಯಕ್ರಮದಲ್ಲಿ “ವಿಶ್ವದ ಅತಿ ಹಳೆಯ ನ್ಯಾಯಾಂಗ ವ್ಯವಸ್ಥೆ ಭಾರತದಲ್ಲಿದ್ದು ಇಷ್ಟು ಪ್ರಾಚೀನ ಅಥವಾ ಶ್ರೇಷ್ಠ ಹಿನ್ನೆಲೆ ಉಳಿದ ಕಾನೂನು ವ್ಯವಸ್ಥೆಗಳಿಗೆ ಇಲ್ಲ” ಎಂದಿದ್ದರು.

ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅತ್ಯುತ್ತಮ ಪಾಶ್ಚಾತ್ಯ ಚಿಂತನೆ ಮತ್ತು ವಿಜ್ಞಾನವನ್ನು ಕಲಿಸುತ್ತಿರುವಾಗ, ಭಾರತೀಯ ನ್ಯಾಯಶಾಸ್ತ್ರದ ಅಧ್ಯಯನ, ಕಾನೂನು ಶಿಕ್ಷಣದ ಅಡಿಪಾಯವಾಗಿರಬೇಕು. ಪ್ರತಿ ಭಾರತೀಯ ವಿವಿ ಕೂಡ ಕಾನೂನು ಪದವಿಯಲ್ಲಿ ಅದನ್ನೊಂದು ಕಡ್ಡಾಯ ವಿಷಯವಾಗಿ ಸೇರಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದರು.

Related Stories

No stories found.
Kannada Bar & Bench
kannada.barandbench.com