ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದ ಕೆಲ ಗಂಟೆಗಳಲ್ಲೇ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ.
ರಾಜೀನಾಮೆ ನೀಡಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ನ್ಯಾ. ಗಂಗೋಪಾಧ್ಯಾಯ ಅವರು ಮಾರ್ಚ್ 7 ರಂದು ಔಪಚಾರಿಕವಾಗಿ ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದರು.
ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ವಿಚಾರ ಬಿಜೆಪಿ ಚುನಾವಣಾ ಸಮಿತಿಯ ನಿರ್ಧಾರಕ್ಕೆ ಬಿಟ್ಟದ್ದು ಎಂದು ಅವರು ಹೇಳಿದರು.
"ಚುನಾವಣೆಯಲ್ಲಿ ಸ್ಪರ್ಧಿಸಲಿ ಅಥವಾ ಇಲ್ಲದಿರಲಿ, ಬಿಜೆಪಿಯಲ್ಲಿಯೇ ಇರುತ್ತೇನೆ. ತೃಣಮೂಲ ಕಾಂಗ್ರೆಸ್ ರೀತಿಯ ಕ್ರಿಮಿನಲ್ ಪಕ್ಷದ ವಿರುದ್ಧ ಹೋರಾಡುತ್ತಿರುವ ಅಖಿಲ ಭಾರತ ಮಟ್ಟದ ಪಕ್ಷ ಇದು ಮಾತ್ರವೇ" ಎಂದು ಅವರು ಬಿಜೆಪಿ ಸೇರುವ ತಮ್ಮ ನಿರ್ಧಾರದ ಹಿಂದಿನ ಆಲೋಚನೆಯನ್ನು ಹೇಳಿದರು.
ತಾನು ರಾಜಕೀಯದತ್ತ ಹೊರಳಲು ತನ್ನ ವಿರುದ್ಧದ ರಾಜಕೀಯ ಆರೋಪಗಳೇ ಸ್ಫೂರ್ತಿ ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು, "ನನ್ನ ಪಿಂಚಣಿ ನಾನೀಗ ಪಡೆಯುತ್ತಿರುವುದಕ್ಕಿಂತ ತುಂಬಾ ಕಡಿಮೆ ಇರಲಿದೆ. ಟಿಎಂಸಿಯ ಹಗರಣಗಳನ್ನು ನ್ಯಾಯಾಲಯ ಬಹಿರಂಗಪಡಿಸುತ್ತಿದೆ ಎನ್ನುವ ಕಾರಣಕ್ಕಾಗಿ ನ್ಯಾಯಾಂಗದ ವಿರುದ್ಧ ಇಂತಹ ಪದಗಳನ್ನು ಬಳಸುವುದನ್ನು ನಾನು ಊಹಿಸಲೂ ಅಸಾಧ್ಯ" ಎಂದು ಅವರು ಟಿಎಂಸಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಗೆ ಸೇರಲು ತಮಗೆ ಆಹ್ವಾನವಿರುವ ಬಗ್ಗೆಯೂ ಇದೇ ವೇಳೆ ಅವರು ದೃಢಪಡಿಸಿದರು.
"ನಾನು ರಾಜಕೀಯಕ್ಕೆ ಕಾಲಿಡಲು ಸ್ಫೂರ್ತಿ ಪಡೆದಿರುವುದರಿಂದ ನಿವೃತ್ತಿಗೂ ಮುನ್ನ ರಾಜೀನಾಮೆ ನೀಡಿದ್ದೇನೆ. ನನ್ನನ್ನು ಬಿಜೆಪಿಗೆ ಸೇರಲು ಆಹ್ವಾನಿಸಲಾಗಿದೆ" ಎಂದು ಅವರು ತಿಳಿಸಿದರು.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ವಿರುದ್ಧ 'ರಾಜಕೀಯ ಸ್ವರೂಪದ ಆದೇಶ' ನೀಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು,
"ಅವರು ಇಂತಹ ಹೇಳಿಕೆಗಳನ್ನು ನೀಡುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಅವರು ಸುಸಂಸ್ಕೃತ ವ್ಯಕ್ತಿಯಲ್ಲ. ಅವರ ಹೆಗ್ಗುರುತು ಇದು. ಪ್ರಾಯಶಃ ಬೆಳವಣಿಗೆಯಲ್ಲಿ, ಅವರ ಮೂಲದಲ್ಲಿ ಮತ್ತು ಅವರ ಕುಟುಂಬದಲ್ಲಿ ಅವರಿಗೆ ಸಮಸ್ಯೆಗಳಿರಬಹುದು" ಎಂದರು.
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಬರುವ ಆಗಸ್ಟ್ ನಲ್ಲಿ ನಿವೃತ್ತರಾಗಬೇಕಿತ್ತು. ಆದರೆ, ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿರುವ ಅವರು ಮಂಗಳವಾರ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ.