ಶಾಲಾ ನೇಮಕಾತಿ ಹಗರಣದ ತನಿಖೆಗೆ ಆದೇಶಿಸಿದ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ತಮ್ಮ ವಿರುದ್ಧ ಪಕ್ಷಪಾತ ಧೋರಣೆ ಅನಸುರಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಶುಕ್ರವಾರ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಆರೋಪಿಸಿದರು.
ಹಗರಣದಲ್ಲಿ ತನ್ನ ಪಾತ್ರದ ಕುರಿತು ತನಿಖೆ ನಡೆಸುವಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ನ್ಯಾ. ಅಭಿಜಿತ್ ಅವರು ಏಪ್ರಿಲ್ 13ರಂದು ನೀಡಿದ್ದ ಆದೇಶ ಹಿಂಪಡೆಯುವಂತೆ ಕೋರಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಅಮೃತ ಸಿನ್ಹಾ ಅವರು ವಿಚಾರಣೆ ನಡೆಸಿದರು. ಈ ವೇಳೆ ಅಭಿಷೇಕ್ ಪರ ವಕೀಲರು ಮೇಲಿನ ಆರೋಪಗಳನ್ನು ಮಾಡಿದರು.
ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ಯಾವುದೇ ಮನವಿ ಸಲ್ಲಿಸಿಲ್ಲ ಎಂದು ಬ್ಯಾನರ್ಜಿ ನ್ಯಾಯಾಲಯಕ್ಕೆ ತಿಳಿಸಿದರು. "ನನ್ನ ಕಕ್ಷಿದಾರನ ಭಾಷಣಕ್ಕೂ ಆರೋಪಿ ಕುಂತಲ್ ಘೋಷ್ ನೀಡಿದ್ದ ದೂರಿಗೂ ಸಂಬಂಧವಿದೆ ಎಂದು ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಈ ತೀರ್ಮಾನಗಳನ್ನು ಯಾವ ಆಧಾರದ ಮೇಲೆ ಕೈಗೊಳ್ಳಲಾಗಿದೆ ಎಂಬುದನ್ನು ಪ್ರಶ್ನಿಸಬೇಕಿದೆ. ಅವರು ಮಾಡಿರುವ ಕೆಲ ಅವಲೋಕನಗಳಿಗೆ ಆಧಾರ ಯಾವುದು? ಇದೊಂದು ಏಕಪಕ್ಷೀಯ ಆದೇಶ" ಬ್ಯಾನರ್ಜಿ ಪರ ವಕೀಲರು ವಾದಿಸಿದರು.
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ವಿಚಾರಣೆ ನಡೆಸಿದ ಇ ಡಿ ಸಲ್ಲಿಸಿದ ಅರ್ಜಿಯಲ್ಲಿ ಬ್ಯಾನರ್ಜಿ ಅವರ ವಿರುದ್ಧ ತನಿಖೆ ನಡೆಸುವಂತೆ ಕೋರಿರಲಿಲ್ಲ, ಬದಲಿಗೆ ಘೋಷ್ ಅವರು ಆರೋಪ ಮಾಡಿದ್ದ ಕೆಲ ತನಿಖಾಧಿಕಾರಿಗಳ ವಿರುದ್ಧ ಅದರಲ್ಲಿ ಮಾಹಿತಿ ಇತ್ತು ಎಂದು ಅವರು ಹೇಳಿದರು.
"ನ್ಯಾ. ಅಭಿಜಿತ್ ಅವರು ಒಂದು ವಿಚಾರದಿಂದ ಮತ್ತೊಂದು ವಿಚಾರಕ್ಕೆ ವಿಷಯಾಂತರ ಮಾಡಿದರು. ಹೀಗಾಗಿ, ನಾನು ಆ ನ್ಯಾಯಮೂರ್ತಿಗಳು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಅವರು ನಡೆಸುತ್ತಿದ್ದ ವಿಚಾರಣೆಯನ್ನು ವರ್ಗಾಯಿಸಿತು" ಎಂದು ವಕೀಲರು ವಾದಿಸಿದರು.
ಈ ಮಧ್ಯೆ ಸಿಬಿಐ ಮತ್ತು ಇ ಡಿಗಳನ್ನು ಪ್ರತಿನಿಧಿಸುವ ವಕೀಲರು ಸೂಕ್ತ ಸೂಚನೆಗಳ ಅಗತ್ಯವಿರುವುದರಿಂದ ಪ್ರಕರಣವನ್ನು ಮುಂದೂಡುವಂತೆ ಕೋರಿದರು. ಆಗ ಅಭಿಷೇಕ್ ಬ್ಯಾನರ್ಜಿ ಪರ ವಕೀಲರು ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಕೇಂದ್ರೀಯ ಸಂಸ್ಥೆಗಳಿಗೆ ಸೂಚಿಸಿ ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಒತ್ತಾಯಪೂರ್ವಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ, ನ್ಯಾ. ಸಿನ್ಹಾ ಅವರು ನೋಟಿಸ್ ಅನ್ನು ಸ್ಥಗಿತಗೊಳಿಸಿದ ನಂತರ ಸಂಸ್ಥೆ ಯಾವುದೇ ಕ್ರಮ ಅಥವಾ ಕ್ರಮವನ್ನು ತೆಗೆದುಕೊಂಡಿದೆಯೇ ಎಂದು ಕೇಳಿದರು. ಇದಕ್ಕೆ ವಕೀಲರು ಋಣಾತ್ಮಕವಾಗಿ ಪ್ರತಿಕ್ರಿಯಿಸಿದರು. ಅಂತಿಮವಾಗಿ ಆದೇಶದ ವೇಳೆ ನ್ಯಾಯಾಧೀಶರು, "ಭಯಪಡುವ ಅಗತ್ಯವಿಲ್ಲ. ಯಾವುದೇ ಮಧ್ಯಂತರ ಆದೇಶದ ಅಗತ್ಯವಿಲ್ಲ. ಹಾಗೇನಾದರೂ (ಒತ್ತಾಯಪೂರ್ವಕ) ಕ್ರಮ ಕೈಗೊಂಡರೆ ನಾನಿಲ್ಲಿ ಇರುತ್ತೇನೆ. ನ್ಯಾಯಾಲಯ ಸದಾ ಕಾರ್ಯ ನಿರ್ವಹಿಸುತ್ತಿರುತ್ತದೆ. ನೀವು ಯಾವಾಗ ಬೇಕಾದರೂ ನ್ಯಾಯಾಲಯವನ್ನು ಸಂಪರ್ಕಿಸಬಹುದು" ಎಂದರು. ಪ್ರಕರಣದ ಮುಂದಿನ ವಿಚಾರಣೆ ಮೇ 15 ಸೋಮವಾರ ನಡೆಯಲಿದೆ.
ಸರ್ಕಾರದ ಅರ್ಜಿ ತಿರಸ್ಕಾರ : ಈ ಮಧ್ಯೆ ಶಾಲಾ ನೇಮಕಾತಿ ಹಗರಣದ ತನಿಖೆಯನ್ನು ಸಿಬಿಐ ಮತ್ತು ಇಡಿಗೆ ವರ್ಗಾಯಿಸಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.