ಎರಡು ತಾಸು ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ವಿಚಾರಣೆ ನಡೆಸಿ ನಿವೃತ್ತರಾದ ನ್ಯಾ. ಅನಿಲ್‌ ಕಟ್ಟಿ

ಕರ್ನಾಟಕ ಹೈಕೋರ್ಟ್‌ನಲ್ಲಿ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಈತನಕ 50 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಅನಿಲ್ ಬಿ.ಕಟ್ಟಿ ಅವರ ನಿವೃತ್ತಿಯಿಂದಾಗಿ ಈ ಸಂಖ್ಯೆ ಈಗ 49ಕ್ಕೆ ಇಳಿದಿದೆ.
ಎರಡು ತಾಸು ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ವಿಚಾರಣೆ ನಡೆಸಿ ನಿವೃತ್ತರಾದ ನ್ಯಾ. ಅನಿಲ್‌ ಕಟ್ಟಿ

ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ಕೇವಲ ಎರಡು ತಾಸು ಕಾರ್ಯನಿರ್ವಹಿಸಿ ನಿವೃತ್ತರಾದ ಅಪರೂಪದ ಸಾಲಿಗೆ ನ್ಯಾ. ಅನಿಲ್‌ ಬಿ.ಕಟ್ಟಿ ಅವರು ಮಂಗಳವಾರ ಸೇರ್ಪಡೆಯಾದರು.

ನ್ಯಾ. ಅನಿಲ್‌ ಬಿ.ಕಟ್ಟಿ ಅವರಿಗೆ ಮಂಗಳವಾರ ಎಎಬಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು, “ನ್ಯಾಯಮೂರ್ತಿ ಅನಿಲ್ ಬಿ.ಕಟ್ಟಿ ಅಂತಹವರ ನಿಸ್ವಾರ್ಥ ಸೇವೆ ಮತ್ತು ಪ್ರಾಮಾಣಿಕತೆಯಿಂದ ನ್ಯಾಯಾಂಗದ ಘನತೆ ಜೀವಂತವಾಗಿದೆ. ಕಟ್ಟಿ ಅವರ ಸತ್ಯನಿಷ್ಠೆ, ಬದ್ಧತೆ ಮತ್ತು ಪ್ರಾಮಾಣಿಕತೆ ಶ್ಲಾಘನೀಯ” ಎಂದು ಹೇಳಿದರು.

ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ, ನ್ಯಾ. ಅನಿಲ್ ಬಿ.ಕಟ್ಟಿ, ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ ಕಾಮತ್‌ ಅವರು ನ್ಯಾ. ಕಟ್ಟಿ ಅವರ ಗುಣಗಾನ ಮಾಡಿದರು. ಇದಕ್ಕೂ ಮುನ್ನ, ರಾಜ್ಯ ವಕೀಲರ ಪರಿಷತ್‌ ವತಿಯಿಂದ ಹೈಕೋರ್ಟ್‌ನ ಕೋರ್ಟ್‌ ಹಾಲ್‌ 1ರಲ್ಲಿ ನ್ಯಾ. ಕಟ್ಟಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ಗ್ರಾಮೀಣ ಹಿನ್ನೆಲೆಯ ಕಟ್ಟಿ ಅವರು 1995ರಲ್ಲಿ ಮುನ್ಸೀಫ್‌ ಆಗಿ ನ್ಯಾಯಾಂಗ ಸೇವೆ ಆರಂಭಿಸಿದರು. ನಂತರ ವಿವಿಧೆಡೆ ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರು ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದ ಕೆಲವೇ ದಿನಗಳಲ್ಲಿ ಅಂದರೆ 2022ರ ಆಗಸ್ಟ್‌ 16ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದರು. ಮಂಗಳವಾರ (ಏಪ್ರಿಲ್‌ 16) ಬೆಳಗ್ಗೆಯಷ್ಟೇ ಕಾಯಂ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಈತನಕ ಹೆಚ್ಚುವರಿ ನ್ಯಾಯಮೂರ್ತಿಗಳಾಗಿದ್ದ ಸಿ.ಎಂ.ಪೂಣಚ್ಚ, ಚಂದ್ರಶೇಖರ್ ಮೃತ್ಯಂಜಯ ಜೋಶಿ, ಉಮೇಶ್ ಎಂ.ಅಡಿಗ ಮತ್ತು ಟಿ ಜಿ ಶಿವಶಂಕರೇ ಗೌಡ ಅವರ ನೇಮಕಾತಿ ಕಾಯಂಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು.  ನ್ಯಾಯಮೂರ್ತಿ ಜಿ ಬಸವರಾಜ ಅವರನ್ನು 2024ರ ಆಗಸ್ಟ್ 16ರಿಂದ ಅನ್ವಯವಾಗುವಂತೆ ಒಂದು ವರ್ಷ ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ. 

ಕರ್ನಾಟಕ ಹೈಕೋರ್ಟ್‌ನಲ್ಲಿ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಈತನಕ 50 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಅನಿಲ್ ಬಿ.ಕಟ್ಟಿ ಅವರ ನಿವೃತ್ತಿಯಿಂದಾಗಿ ಈ ಸಂಖ್ಯೆ ಈಗ 49ಕ್ಕೆ ಇಳಿದಿದೆ.

Kannada Bar & Bench
kannada.barandbench.com