ನ್ಯಾಯಮೂರ್ತಿ ಅರವಿಂದ್ ಕುಮಾರ್
ನ್ಯಾಯಮೂರ್ತಿ ಅರವಿಂದ್ ಕುಮಾರ್

ಕಾವೇರಿ ನದಿ ನೀರು ಹಂಚಿಕೆ ವಿವಾದ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಅರವಿಂದ್ ಕುಮಾರ್

ನ್ಯಾ. ಅರವಿಂದ್ ಕುಮಾರ್ ಕರ್ನಾಟಕದವರಾಗಿದ್ದು, ಪ್ರಕರಣದಲ್ಲಿ ಕರ್ನಾಟಕ ಸರ್ಕಾರವು ಪಕ್ಷಕಾರನಾಗಿದೆ.
Published on

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವ್ಯಾಜ್ಯದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹಿಂದೆ ಸರಿದಿದ್ದಾರೆ.

ವಿಶೇಷವೆಂದರೆ, ನ್ಯಾಯಮೂರ್ತಿ ಕುಮಾರ್ ಕರ್ನಾಟಕದವರು. ಅವರು ಇಂದು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೂ ಒಳಗೊಂಡ ನ್ಯಾಯಪೀಠ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳೆದುರು ಪ್ರಸ್ತಾಪಿಸುವಂತೆ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್, ಕರ್ನಾಟಕ ಹಾಗೂ ತಮಿಳುನಾಡು
ಸುಪ್ರೀಂ ಕೋರ್ಟ್, ಕರ್ನಾಟಕ ಹಾಗೂ ತಮಿಳುನಾಡು

ಕರ್ನಾಟಕ ಸರ್ಕಾರವನ್ನು ವಕೀಲ ವಿ ಎನ್ ರಘುಪತಿ ಪ್ರತಿನಿಧಿಸಿದ್ದರು.

ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ 1892 ಮತ್ತು 1924ರಲ್ಲಿ ನಡೆದ ಎರಡು ಒಪ್ಪಂದಗಳಿಂದ ಕಾವೇರಿ ನದಿ ನೀರಿನ ಬಗ್ಗೆ ಕರ್ನಾಟಕ ತಮಿಳುನಾಡಿನ ವ್ಯಾಜ್ಯ ಟಿಸಿಲೊಡೆದಿದೆ.

ಹಲವಾರು ಸುತ್ತಿನ ವಿಫಲ ಮಾತುಕತೆಗಳ ನಂತರ, ಸುಪ್ರೀಂ ಕೋರ್ಟ್ ಕಾವೇರಿ ಜಲ ವಿವಾದ ನ್ಯಾಯಮಂಡಳಿ ರಚನೆಗೆ ನಿರ್ದೇಶನ ನೀಡಿತ್ತು. ನ್ಯಾಯಮಂಡಳಿ 2007ರಲ್ಲಿ ಅಂತಿಮ ತೀರ್ಪು ನೀಡಿ, ತಮಿಳುನಾಡು ಕರ್ನಾಟಕದಿಂದ ಪ್ರತಿದಿನ ನಿಗದಿತ ಪ್ರಮಾಣದ ನೀರು ಪಡೆಯಲು ಅವಕಾಶ ನೀಡಿತು.

ಆದರೆ ಈ ತೀರ್ಪು ಪರಿಶೀಲಿಸುವಂತೆ ಎರಡೂ ರಾಜ್ಯಗಳು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿವಾದ ಇನ್ನೂ ಹಸಿರಾಗಿದೆ.

ತಮಿಳುನಾಡಿಗೆ ಹಂಚುವಷ್ಟು ನೀರು ತನ್ನ ಜಲಾಶಯದಲ್ಲಿ ಇಲ್ಲ ಎಂದು 2016ರಲ್ಲಿ ಕರ್ನಾಟಕ ಸರ್ಕಾರ ವಾದಿಸಿತ್ತು. ಈ ಹಿನ್ನೆಲೆಯಲ್ಲಿ ಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. 2016 ರಲ್ಲಿ, ಕರ್ನಾಟಕವು ತನ್ನ ಜಲಾಶಯದಿಂದ ಹಂಚಿಕೊಳ್ಳಲು ಹೆಚ್ಚಿನ ನೀರು ಇಲ್ಲ ಎಂದಿದ್ದರಿಂದ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಆಗ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಜಲಮೂಲಗಳು ರಾಷ್ಟ್ರೀಯ ಸ್ವತ್ತಾಗಿದ್ದು ಯಾವುದೇ ರಾಜ್ಯ ಅವುಗಳ ಮೇಲೆ ವಿಶೇಷ ಹಕ್ಕು ಸಾಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಫೆಬ್ರವರಿ 2018ರಲ್ಲಿ ತಿಳಿಸಿತು.

ಕಾವೇರಿ ನೀರಿನ ಈಗಿನ ಪಾಲನ್ನು ದಿನಕ್ಕೆ 5,000ದ ಬದಲಿಗೆ 7,200 ಕ್ಯೂಸೆಕ್‌ಗೆ (ಒಂದು ಸೆಕೆಂಡಿಗೆ ನಿರ್ದಿಷ್ಟ ಬಿಂದುವಿನಲ್ಲಿ ಹರಿಯುವ ಘನ ಅಡಿ ನೀರಿನ ಪ್ರಮಾಣ) ಹೆಚ್ಚಿಸುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ಬಗ್ಗೆ ತೀರ್ಪು ನೀಡಲು ಕಳೆದ ವರ್ಷ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ರಚಿಸಲಾಗಿತ್ತು.

ಕರ್ನಾಟಕ ತನ್ನ ನಿಲುವು ಬದಲಿಸಿ ಈ ಹಿಂದೆ ಒಪ್ಪಿಕೊಂಡಿದ್ದ 15,000 ಕ್ಯೂಸೆಕ್ ಬದಲಿಗೆ 8,000 ಕ್ಯೂಸೆಕ್‌ನಷ್ಟು ಕಡಿಮೆ ನೀರು ಬಿಡುಗಡೆ ಮಾಡಿದೆ ಎಂದು ತಮಿಳುನಾಡು ದೂರಿತ್ತು.

ಮುಂಗಾರು ವೈಫಲ್ಯದಿಂದಾಗಿ ಸಂಕಷ್ಟದ ಪರಿಸ್ಥಿತಿ ಇರುವುದರಿಂದ ತಮಿಳುನಾಡು ಸರ್ಕಾರದ ಮನವಿ ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರತಿ ಅಫಿಡವಿಟ್‌ ಸಲ್ಲಿಸಿತ್ತು. ಇದಲ್ಲದೆ, ತಮಿಳುನಾಡು 69.777 ಟಿಎಂಸಿ (ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ) ನೀರನ್ನು ಅತಿಯಾಗಿ ತೆಗೆದುಕೊಳ್ಳುವ ಮೂಲಕ ನೀರಿನ ಸಂಗ್ರಹವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅದು ಹೇಳಿತ್ತು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ಅಂತಿಮವಾಗಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿಪಿ ಎಸ್ ನರಸಿಂಹ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿತು.

ಇದಕ್ಕೂ ಮೊದಲು, ನಿಯೋಜಿತ ತಜ್ಞರ ಸಮಿತಿಯ ವರದಿಯನ್ನು ಪರಿಶೀಲಿಸದೆಯೇ, ಕರ್ನಾಟಕದಿಂದ ತಮಿಳುನಾಡಿಗೆ ಎಷ್ಟು ನೀರನ್ನು ಬಿಡುಗಡೆ ಮಾಡಬೇಕು ಎಂದು ನಿರ್ಧರಿಸುವುದಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು.

ಈ ಮಧ್ಯೆ ಪೆನ್ನಾರ್‌ (ದಕ್ಷಿಣ ಪಿನಾಕಿನಿ) ನದಿಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ನಡುವಣ ಮತ್ತೊಂದು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಮೂಲ ದಾವೆ ಹೂಡಿದೆ.

Kannada Bar & Bench
kannada.barandbench.com