ನ್ಯಾ. ಅರವಿಂದ ಅವರಿಗೆ ಎಎಬಿ ಸ್ವಾಗತ: ಗುಣಮಟ್ಟದ ಶಿಕ್ಷಣ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದ ಸಿಜೆ ವರಾಳೆ

ರಾಜ್ಯ ಹೈಕೋರ್ಟ್‌ಗೆ ನೂತನ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಕೆ ವಿ ಅರವಿಂದ ಅವರಿಗೆ ಬೆಂಗಳೂರು ವಕೀಲರ ಸಂಘದ ವತಿಯಿಂದ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
Justice Aravind facilitated by AAB
Justice Aravind facilitated by AAB

ಮೃದು ಭಾಷಿಯಾಗಿ, ಸಮರ್ಥ ವಕೀಲರೆನಿಸಿರುವ, ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಉತ್ತಮ‌ ಮನುಷ್ಯ ಕೆ ವಿ ಅರವಿಂದ ಅವರು ರಾಜ್ಯ ಹೈಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಮೂಲಕ ನಮ್ಮ ಕುಟುಂಬಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಸಂತಸ ವ್ಯಕ್ತಪಡಿಸಿದರು.

ರಾಜ್ಯ ಹೈಕೋರ್ಟ್‌ಗೆ ನೂತನ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಕೆ ವಿ ಅರವಿಂದ ಅವರಿಗೆ ಬೆಂಗಳೂರು ವಕೀಲರ ಸಂಘದ ವತಿಯಿಂದ ಗುರುವಾರ ನೀಡಲಾದ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಗುಣಮಟ್ಟದ ಶಿಕ್ಷಣ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಅವರು, ನ್ಯಾ. ಅರವಿಂದ ಅವರು ಭವಿಷ್ಯದಲ್ಲಿ ನ್ಯಾಯಾಂಗದ ಆಸ್ತಿಯಾಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಆದಾಯ ತೆರಿಗೆ ವ್ಯಾಜ್ಯಗಳಲ್ಲಿ ಪರಿಣತಿ ಹೊಂದಿದ್ದು, ಉತ್ತಮ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಅವರಿಂದ ಅನ್ಯಾಯಕ್ಕೊಳಗಾದ ಕಕ್ಷಿದಾರರಿಗೆ ಪರಿಹಾರ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ, ಅರ್ಜಿಗಳು ಬೇಗ ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕಿದೆ ಎಂದರು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ ಕಾಮತ್‌ ಅವರು ಅರವಿಂದ ಅವರು ತೆರಿಗೆ ವಿಭಾಗದ ವಕೀಲ ವೃಂದದಿಂದ ಬಂದವರು. ಕೇಂದ್ರದ ಮೌಲ್ಯಯುತ ಆದಾಯ ತೆರಿಗೆ ಮತ್ತು ನೇರ ತೆರಿಗೆ ರಕ್ಷಣೆ ವಿಷಯದಲ್ಲಿ ಅವರು ಹರಿತ ದೃಷ್ಟಿಕೋನ ಹೊಂದಿದ್ದಾರೆ. ಅವರಿಂದ ಹೈಕೋರ್ಟ್‌ ಉತ್ತಮ ತೀರ್ಪುಗಳನ್ನು ನಿರೀಕ್ಷಿಸುತ್ತದೆ ಎಂದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ಹೈಕೋರ್ಟ್‌ ಘಟಕದ ಉಪಾಧ್ಯಕ್ಷ ಎ ಎಸ್ ಹರೀಶ್‌, ಖಜಾಂಚಿ ಎಂ ಟಿ ಹರೀಶ್‌ ಇದ್ದರು.

Related Stories

No stories found.
Kannada Bar & Bench
kannada.barandbench.com