
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಅರುಣ್ ಪಲ್ಲಿ ಅವರನ್ನು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಶನಿವಾರ ಅನುಮೋದನೆ ನೀಡಿದೆ .
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಬೆಳವಣಿಗೆಯನ್ನು ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ 9 ರಂದು ಮುಖ್ಯ ನ್ಯಾಯಮೂರ್ತಿ ತಾಶಿ ರಬಿಸ್ತಾನ್ ಅವರು ನಿವೃತ್ತರಾಗಿದ್ದು ಅದಕ್ಕೂ ಕೆಲ ದಿನಗಳ ಮೊದಲು ಅಂದರೆ ಏಪ್ರಿಲ್ 4ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾ. ಪಲ್ಲಿ ಅವರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿಗೊಳಿಸಲು ಶಿಫಾರಸು ಮಾಡಿತ್ತು. ನ್ಯಾ. ಸಂಜೀವ್ ಕುಮಾರ್ ಏಪ್ರಿಲ್ 10 ರಿಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ .
ನ್ಯಾಯಮೂರ್ತಿ ಪಲ್ಲಿ ಸೆಪ್ಟೆಂಬರ್ 18, 1964 ರಂದು ಜನಿಸಿದರು. ಅವರ ತಂದೆ ಹಿರಿಯ ವಕೀಲರಾಗಿದ್ದು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಪೀಠದಲ್ಲಿ ಸೇವೆ ಸಲ್ಲಿಸಿದ್ದರು. ವಾಣಿಜ್ಯ ವಿಷಯದಲ್ಲಿ ಪದವಿ ಹಾಗೂ ಮತ್ತು 1988 ರಲ್ಲಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು ಅವರು.
ನಂತರ ಪಂಜಾಬ್‌ನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ ನ್ಯಾ. ಪಲ್ಲಿ ಹರಿಯಾಣ ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು. ಹಿರಿಯ ವಕೀಲರಾಗಿ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್, ಹಿಮಾಚಲ ಪ್ರದೇಶ ಹೈಕೋರ್ಟ್‌ಗಳಲ್ಲಿ ಹಲವು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.
ಅವರಿಗೆ ಡಿಸೆಂಬರ್ 28, 2013 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲಾಯಿತು. ಅವರು ಮೇ 31, 2023 ರಿಂದ ಹರಿಯಾಣ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರನ್ನು ಅಕ್ಟೋಬರ್ 31, 2023 ರಂದು ಎರಡು ವರ್ಷಗಳ ಅವಧಿಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ಆಡಳಿತ ಮಂಡಳಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿತ್ತು.