
“ನಿವೃತ್ತಿಯ ನಂತರ ಯಾವುದೇ ಕೆಲಸ ಒಪ್ಪಿಕೊಳ್ಳದಿರಲು ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನಾನು ನಿರ್ಧರಿಸಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಶುಕ್ರವಾರ ಹೇಳಿದರು.
ಅಧಿಕೃತವಾಗಿ ನಾಳೆ ಕರ್ತವ್ಯದಿಂದ ನಿವೃತ್ತಿ ಹೊಂದಲಿರುವ ನ್ಯಾಯಮೂರ್ತಿ ಓಕಾ ಅವರಿಗೆ ಇಂದು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ನಿವೃತ್ತಿಯ ನಂತರ ಯಾವುದೇ ಕೆಲಸಗಳನ್ನು ಒಪ್ಪಿಕೊಳ್ಳಬಾರದು ಎಂದು ನಾನು ಮತ್ತು ನ್ಯಾ. ಓಕಾ ನಿರ್ಧರಿಸಿರುವುದರಿಂದ ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಯೋಚಿಸಬಹುದು” ಎಂದರು.
“ನ್ಯಾಯಾಲಯದ ಕೊಠಡಿಯ ಒಳಗೆ ನ್ಯಾ. ಓಕಾ ಅವರು ಕಾನೂನು ಮತ್ತು ನೈತಿಕತೆಯ ಪ್ರಾಚಾರ್ಯರಾಗಿದ್ದರು. ವಕೀಲರು ನ್ಯಾಯಾಲಯದ ಮೊದಲ ಅಧಿಕಾರಿಗಳು ಎಂದು ಯಾವಾಗಲೂ ನೆನಪಿಸಿದ್ದಾರೆ. ಅವರ ದೃಢತೆಯ ಹಿಂದೆ ಶಿಕ್ಷಕರ ಸಮರ್ಪಣಾಭಾವ ಇದೆ. ಅವರ ಕೊಠಡಿಯಲ್ಲಿ ನೈತಿಕ ವಕೀಲಿಕೆಗೆ ಆದ್ಯತೆ ದೊರೆತಿದೆ. ಇಷ್ಟು ವರ್ಷಗಳ ಕಾಲ ಅವರು ಅತ್ಯುತ್ಸಾಹದಿಂದ ಕೆಲಸ ಮಾಡಿರುವುದು ಶ್ಲಾಘನೀಯ. ನ್ಯಾಯಮೂರ್ತಿಯಾದಾಗ ಅವರು ಅಧಿಕೃತ ವಾಸದ ಮನೆಯನ್ನು ತೆಗೆದುಕೊಳ್ಳಲಿಲ್ಲ” ಎಂದರು.
ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಓಕಾ ಅವರ ಅನುಪಸ್ಥಿತಿ ಕಾಡಲಿದೆ ಎಂದ ಸಿಜೆಐ ಗವಾಯಿ ಅವರು ಔರಂಗಾಬಾದ್‌ನಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಆರಂಭವಾಗುವ ನಿಟ್ಟಿನಲ್ಲಿ ನ್ಯಾ. ಓಕಾ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದರು ಎಂದರು.
ನ್ಯಾ. ಎ ಜಿ ಮಸೀಹ್ ಅವರು ಮಾತನಾಡಿ “ಓಕಾ ಅವರು ಕಲಾಪ ನಡೆಸುವ ರೀತಿ, ವಕೀಲರ ಜೊತೆ ನಡೆದುಕೊಳ್ಳುವ ರೀತಿಯು ಸೇರಿ ಹಲವು ವಿಚಾರಗಳನ್ನು ನ್ಯಾ. ಓಕಾ ಅವರಿಂದ ಕಲಿತಿದ್ದೇನೆ” ಎಂದರು. “ಎಲ್ಲರೂ ಕೋರಿರುವಂತೆ ನಿಮಗೆ ಮತ್ತು ಕುಟುಂಬಕ್ಕೆ ಸ್ವಲ್ಪ ಸಮಯ ನೀಡಿ. ಅತ್ಯಂತ ಕಠಿಣ ಪರಿಶ್ರಮಿಯಾದ ನ್ಯಾ. ಓಕಾ ಅವರು ನಿದ್ರಿಸುವುದೇ ಕಡಿಮೆ. ಅವರಿಗೆ ಎಲ್ಲವೂ ಒಳಿತಾಗಲಿ” ಎಂದರು.