ತಾಯಿ ವಿಧಿವಶರಾದ ಮಾರನೇ ದಿನವೇ ಕರ್ತವ್ಯಕ್ಕೆ ಹಾಜರು; ವೃತ್ತಿಯ ಕೊನೆಯ ದಿನ 11 ತೀರ್ಪು ಪ್ರಕಟಿಸಿದ ನ್ಯಾ. ಓಕಾ

ತಾಯಿ ನಿಧನರಾದ ಹಿನ್ನೆಲೆಯಲ್ಲಿ ಗುರುವಾರ ಅವರ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಲು ಮುಂಬೈಗೆ ತೆರಳಿದ್ದ ನ್ಯಾಯಮೂರ್ತಿ ಓಕಾ ಅವರು ಇಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನಿವೃತ್ತಿಯಾಗುತ್ತಿರುವುದರಿಂದ ದೆಹಲಿಗೆ ಮರಳಿದ್ದಾರೆ.
Justice Abhay S Oka
Justice Abhay S Oka
Published on

ತಾಯಿ ಕೊನೆಯುಸಿರೆಳೆದ ಕೆಲವೇ ಗಂಟೆಗಳ ಬಳಿಕ ಕರ್ತವ್ಯಕ್ಕೆ ಹಾಜರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರು ತಮ್ಮ ವೃತ್ತಿ ಬದುಕಿನ ಕೊನೆಯ ದಿನವಾದ ಇಂದು 11 ತೀರ್ಪುಗಳನ್ನು ಪ್ರಕಟಿಸಿದರು.

ತಾಯಿ ನಿಧನರಾದ ಹಿನ್ನೆಲೆಯಲ್ಲಿ ಗುರುವಾರ ಅವರ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಲು ಮುಂಬೈಗೆ ತೆರಳಿದ್ದ ನ್ಯಾಯಮೂರ್ತಿ ಓಕಾ ಅವರು ಇಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನಿವೃತ್ತಿಯಾಗುತ್ತಿರುವುದರಿಂದ ದೆಹಲಿಗೆ ಮರಳಿದ್ದಾರೆ. ಮೇ 24ರಂದು ನ್ಯಾ. ಓಕಾ ಅವರು ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ ಸಂಪ್ರದಾಯದಲ್ಲಿ ಸಣ್ಣ ಬದಲಾವಣೆಯಾಗಿದ್ದು, ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಧ್ಯುಕ್ತ ಪೀಠದಲ್ಲಿ ಕೂರುವುದಕ್ಕೂ ಮುನ್ನ ನ್ಯಾಯಮೂರ್ತಿ ಓಕಾ ಅವರು ತಮ್ಮ ಪೀಠದಲ್ಲಿ ಕುಳಿತು 11 ತೀರ್ಪುಗಳನ್ನು ಪ್ರಕಟಿಸಿದರು.

ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಅಸೋಶಿಯೇಷನ್ಸ್‌ ವತಿಯಿಂದ ನಡೆದ ಸಮಾರಂಭದಲ್ಲಿ ನ್ಯಾ. ಓಕಾ ಅವರು ನಿವೃತ್ತಿ ಹೊಂದುವ ನ್ಯಾಯಮೂರ್ತಿಗಳು ಕೊನೆಯ ದಿನ ತಮ್ಮ ಪೀಠದಲ್ಲಿ ಕುಳಿತು ಕಲಾಪ ನಡೆಸದಿರುವ ಸಂಪ್ರದಾಯದ ಬಗ್ಗೆ ತಮಗೆ ಸಮ್ಮತಿಯಿಲ್ಲ ಎಂದಿದ್ದರು.

“ನಿವೃತ್ತಿ ಹೊಂದುವ ನ್ಯಾಯಮೂರ್ತಿಗೆ ನಿವೃತ್ತಿಯ ಕೊನೆಯ ದಿನ ಮಧ್ಯಾಹ್ನ 1:30ಕ್ಕೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಮಾಡದೆ ಅದನ್ನು ತಡವಾಗಿ ಮಾಡಬೇಕು. ಅಂದು ಮಧ್ಯಾಹ್ನ ಭೋಜನವಾದ ತಕ್ಷಣ ನಿವೃತ್ತರಾಗಲಿರುವ ನ್ಯಾಯಮೂರ್ತಿಯವರನ್ನು ಮನೆಗೆ ಹೋಗುವಂತೆ ಏಕೆ ಹೇಳಬೇಕು. ಕೊನೆಯ ದಿನ ನ್ಯಾಯಮೂರ್ತಿಗಳು ಸಂಜೆ ನಾಲ್ಕು ಗಂಟೆವರೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಅವರು ಆತ್ಮತೃಪ್ತಿ ಹೊಂದಲು ಅವಕಾಶ ಮಾಡಿಕೊಡಬೇಕು” ಎಂದಿದ್ದರು.

ನಿವೃತ್ತಿ ಎಂಬ ಪದವನ್ನು ತಾನು ದ್ವೇಷಿಸುತ್ತೇನೆ ಎಂದಿದ್ದ ನ್ಯಾ. ಓಕಾ ಅವರು ಕಳೆದ ಜನವರಿಯಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳ ವಿಚಾರಣೆ ನಡೆಸಲು ನಿರ್ಧರಿಸಿದ್ದಾಗಿ ತಿಳಿಸಿದರು.

1960ರ ಮೇ 25ರಂದು ಜನಿಸಿದ ನ್ಯಾ. ಓಕಾ ಅವರು ಬಾಂಬೆ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು. 1983ರಲ್ಲಿ ವಕೀಲರಾಗಿ ನೋಂದಾಯಿಸಿದ್ದ ಅವರು ತಂದೆ ಶ್ರೀನಿವಾಸ್‌ ಓಕಾ ಅವರ ಕಚೇರಿಯಲ್ಲಿ ಥಾಣೆ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಆರಂಭಿಸಿದ್ದರು.

1985-86ರಲ್ಲಿ ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ವಿ ಪಿ ಟಿಪ್ನೀಸ್‌ ಚೇಂಬರ್‌ನಲ್ಲಿ ಪ್ರಾಕ್ಟೀಸ್‌ ಆರಂಭಿಸಿದ್ದ ನ್ಯಾ. ಓಕಾ ಅವರು 2003ರ ಆಗಸ್ಟ್‌ 29ರಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2005ರ ನವೆಂಬರ್‌ 12ರಂದು ಕಾಯಂಗೊಂಡಿದ್ದರು. 2019ರ ಮೇ 10ರಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಓಕಾ ಅವರು 2021ರ ಆಗಸ್ಟ್‌ 31ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದರು.

Kannada Bar & Bench
kannada.barandbench.com