ಅಯೋಧ್ಯಾ ತೀರ್ಪಿನಲ್ಲಿ ವಿವಾದಾಸ್ಪದ ಭೂಮಿಯೇ ಶ್ರೀರಾಮ ಜನ್ಮಸ್ಥಳ ಎನ್ನುವ ಅನುಬಂಧ ಬರೆದಿದ್ದು ನ್ಯಾ.ಅಶೋಕ್‌ ಭೂಷಣ್‌

ಅಯೋಧ್ಯಾ ತೀರ್ಪು ಬಂದಾಗಿನಿಂದಲೂ ತೀರ್ಪಿನಲ್ಲಿ ರಾಮ ಜನ್ಮಸ್ಥಳ ಕುರಿತಾದ ಅನುಬಂಧವನ್ನು ಬರೆದವರು ಯಾರು ಎನ್ನುವ ಚರ್ಚೆ ಕಾನೂನು ವಲಯದಲ್ಲಿತ್ತು. ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್ತಿನ ಅಧ್ಯಕ್ಷ ವಿಕಾಸ್ ಸಿಂಗ್ ಅದಕ್ಕೆ ತೆರೆ ಎಳೆದಿದ್ದಾರೆ.
Justice Ashok Bhushan, Ayodhya judgment
Justice Ashok Bhushan, Ayodhya judgment

ಇತ್ತೀಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾ. ಅಶೋಕ್‌ ಭೂಷಣ್‌ ಅವರಿಗೆ ಕೆಲದಿನದ ಹಿಂದೆ ಏರ್ಪಡಿಸಲಾದ ಆನ್‌ಲೈನ್‌ ವಿದಾಯ ಸಮಾರಂಭದ ವೇಳೆ ಅಯೋಧ್ಯಾ ತೀರ್ಪಿನಲ್ಲಿ ವಿವಾದಾಸ್ಪದ ಭೂಮಿಯೇ ಶ್ರೀರಾಮ ಜನ್ಮಸ್ಥಳ ಎನ್ನುವ ಬಗ್ಗೆ 116 ಪುಟಗಳ ಅನುಬಂಧವನ್ನು ಬರೆದವರು ನ್ಯಾ. ಅಶೋಕ್‌ ಭೂಷಣ್‌ ಎನ್ನುವ ಸಂಗತಿ ಬಹಿರಂಗಗೊಂಡಿದೆ.

ಈ ಬಗ್ಗೆ ಈವರೆಗೆ ಕಾನೂನು ವಲಯದಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಚರ್ಚೆಗೆ ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್ತಿನ ಅಧ್ಯಕ್ಷ ಹಿರಿಯ ವಕೀಲ ವಿಕಾಸ್‌ ಸಿಂಗ್‌ ವಿರಾಮ ಹಾಕಿದ್ದಾರೆ.

ಸಮಾರಂಭದ ವೇಳೆ ವಿಕಾಸ್ ಸಿಂಗ್ ಅವರು ಮಾತನಾಡುತ್ತಾ, “ಇಬ್ಬರು ನ್ಯಾಯಮೂರ್ತಿಗಳು ಅಯೋಧ್ಯಾ ಪ್ರಕರಣವನ್ನು ಆಲಿಸುವುದರಿಂದ ಹಿಂದೆ ಸರಿದರು. ಆಗ ಪ್ರವೇಶಿಸಿದವರೇ ನ್ಯಾ. ಅಶೋಕ್‌ ಭೂಷಣ್‌. ಅಯೋಧ್ಯಾ ತೀರ್ಪಿನಲ್ಲಿ ಲೇಖಕರ ಹೆಸರನ್ನು ಉಲ್ಲೇಖಿಸದೆ ಇರುವ ಆ ಭಾಗವನ್ನು ಬರೆದಿರುವವರು ನ್ಯಾ. ಅಶೋಕ್‌ ಭೂಷಣ್‌. ನ್ಯಾ. ಅಶೋಕ್ ಭೂಷಣ್‌ ಅವರು ಹಿಂದೂ ಧರ್ಮದ ಬಗ್ಗೆ ಬರೆದಿದ್ದಾರೆ. ಇತರೆ ಧರ್ಮಗಳ ಸೀಮಿತ ವ್ಯಾಖ್ಯಾನಕ್ಕೆ ಹಿಂದೂ ಧರ್ಮವು ಒಳಪಡಲಿಲ್ಲ, ಇದು ಒಂದು ಜೀವನ ಶೈಲಿಯಾಯಿತು ಎಂದು ಹೇಳಲಾಗಿದೆ” ಎಂದಿದ್ದರು.

ನ್ಯಾ. ಅಶೋಕ್‌ ಭೂಷಣ್‌ ಅವರು “ಅಧ್ಯಾತ್ಮಿಕ” ವ್ಯಕ್ತಿ ಎನ್ನುವ ಬಗ್ಗೆ ಹಾಗೂ ಅವರ ಪ್ರವಾಸಗಳು ಹೆಚ್ಚಾಗಿ “ಧಾರ್ಮಿಕ ಕ್ಷೇತ್ರಗಳಿಗೆ” ಸೀಮಿತಗೊಂಡಿರುತ್ತವೆ ಎನ್ನುವ ಬಗ್ಗೆಯೂ ಸಿಂಗ್‌ ತಿಳಿಸಿದ್ದರು.

ವಿವಾದಾಸ್ಪದ ಜಾಗವನ್ನು ಒಂದು ಪೂರ್ಣ ಜಾಗವಾಗಿ ಪರಿಗಣಿಸಿದ್ದ ಮುಖ್ಯ ತೀರ್ಪಿನಲ್ಲಿ ರಾಮಲಲ್ಲಾನ ಜನನವು ಬಾಬ್ರಿ ಮಸೀದಿ ಇದ್ದ ಸ್ಥಳದ ಒಳಗೆ ಆಯಿತೇ, ಹೊರಗೆ ಆಯಿತೇ ಎನ್ನುವ ಬಗ್ಗೆ ಹಿಂದೂ ನಂಬಿಕೆಗಳು ಏನು ಹೇಳುತ್ತವೆ ಎನ್ನುವುದನ್ನು ನಿರ್ದಿಷ್ಟಪಡಿಸುವುದು ಮುಖ್ಯವೆಂದು ಭಾವಿಸಲಿಲ್ಲ.

ಅದರೆ, ಅನುಬಂಧವು ಈ ಕುರಿತು ಅಲಾಹಾಬಾದ್‌ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಲಾಗಿದ್ದ ಮೌಖಿಕ ಮತ್ತು ದಾಖಲೆಗಳ ಮೂಲದ ಸಾಕ್ಷ್ಯಗಳನ್ನು ಪರಿಗಣಿಸಿ ಹೀಗೆ ಹೇಳಿದೆ:

“ಸಲ್ಲಿಕೆಯಾಗಿರುವ ದಾಖಲೆಗಳ ಪ್ರಕಾರ ಹಿಂದೂಗಳ ನಂಬಿಕೆ ಮತ್ತು ಶ್ರದ್ಧೆಗಳು ರಾಮನ ಜನ್ಮಸ್ಥಳದಲ್ಲಿಯೇ ಮಸೀದಿಯನ್ನು ನಿರ್ಮಿಸಲಾಗಿದೆ ಹಾಗೂ ಮೂರು ಗುಮ್ಮಟಗಳಿದ್ದ ಕಟ್ಟಡದ ಸ್ಥಳವೇ ಭಗವಾನ್‌ ಶ್ರೀರಾಮನ ಜನ್ಮಸ್ಥಳವಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತವೆ.”

ಅನುಬಂಧವನ್ನು ಬರೆದ ನ್ಯಾ. ಅಶೋಕ್‌ ಭೂಷಣ್‌ ಅವರು, ಬ್ರಿಟಿಷ್‌ ಆಡಳಿತಾವಧಿಯ ಹಳೆಯ ಗೆಜೆಟ್‌ಗಳು ‘ಜನ್ಮಸ್ಥಾನ ಮಂದಿರ’ದ ಸ್ಥಳದಲ್ಲಿಯೇ ಮಸೀದಿಯನ್ನು ಕಟ್ಟಲಾಗಿದೆ ಎಂದಿರುವುದನ್ನು ಹಾಗೂ ಮಸೀದಿಯ ಅಧಿಕಾರಿಗಳು ಆಳುವವರಿಗೆ ನೀಡಿದ ದೂರಿನಲ್ಲಿ ಭಗವಾನ್‌ ಶ್ರೀರಾಮನನ್ನು ಆರಾಧಿಸುವ ಸಲುವಾಗಿ ಮಸೀದಿಯೊಳಗೆ ಹಿಂದೂಗಳು ಪ್ರಾರ್ಥನೆ ಮಾಡುವುದರ ಬಗ್ಗೆ ಹಾಗೂ ಮೂರ್ತಿಗಳನ್ನು ಇಟ್ಟಿರುವುದರ ಬಗ್ಗೆ ತಿಳಿಸಿರುವುದನ್ನು ಪ್ರಸ್ತಾಪಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com