ವಿಭಿನ್ನ ಕನಸುಗಳ ನಡುವೆಯೂ ಎಲ್ಲ ಭಾರತೀಯರನ್ನು ಒಟ್ಟಿಗೆ ಬಂಧಿಸಿರುವುದು ಭಾರತದ ಸಂವಿಧಾನ: ನ್ಯಾ. ನಾಗರತ್ನ

ಮಹಿಳಾ ವಕೀಲರು ಸಿಕ್ಕ ಅವಕಾಶಗಳನ್ನು ಬಾಚಿಕೊಳ್ಳಬೇಕು ಮತ್ತು ತಮ್ಮ ಮೇಲೆ ತಾವು ಅಗಾಧವಾದ ನಂಬಿಕೆ ಇಡಬೇಕು ಎಂದು ನ್ಯಾ. ನಾಗರತ್ನ ಅವರು ಸಲಹೆ ನೀಡಿದ್ದಾರೆ.
Justice BV Nagarathna
Justice BV Nagarathna

ಪ್ರತಿಯೊಬ್ಬರ ವಿಭಿನ್ನ ಕನಸುಗಳ ನಡುವೆಯೂ ಎಲ್ಲ ಭಾರತೀಯರನ್ನು ಒಟ್ಟಿಗೆ ಬಂಧಿಸಿರುವುದು ಭಾರತದ ಸಂವಿಧಾನ. ಹೀಗಾಗಿಯೇ ವಕೀಲರು ಹಾಗೂ ನ್ಯಾಯಮೂರ್ತಿಗಳಿಗೆ ಮಹತ್ವ ದೊರೆತಿದೆ ಎಂದು ನ್ಯಾಯಮೂರ್ತಿ ಬಿ ವಿ ನಾಗರತ್ನ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿರುವ ಹೈಕೋರ್ಟ್‌ ಪ್ರಧಾನ ಪೀಠದ ಸಭಾಂಗಣದಲ್ಲಿ ಕರ್ನಾಟಕ ಹೈಕೋರ್ಟ್‌ ಮತ್ತು ರಾಜ್ಯ ವಕೀಲರ ಪರಿಷತ್‌ ಸಹಯೋಗದಲ್ಲಿ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ಮತ್ತು ನ್ಯಾ. ಬಿ ವಿ ನಾಗರತ್ನ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

“ನಮ್ಮ ದೇಶ ಭಾರತವು ಇತಿಹಾಸದಲ್ಲಿ ಒಂದು ತುಣುಕಷ್ಟೇ ಅಲ್ಲ. ಇದು ಬಿಲಿಯನ್‌ ಜನರ, ಒಂದು ಬಿಲಿಯನ್‌ ಕನಸುಗಳನ್ನು ಹೊಂದಿರುವ ದೇಶ. ಅಪಾರ ವೈಧ್ಯತೆಯ ನಡುವೆಯೂ ನಮ್ಮೆಲ್ಲರನ್ನು ಬಂಧಿಸಿರುವುದು ಏನು ಎಂದು ನನಗೆ ಹಲವು ಭಾರಿ ಆಶ್ಚರ್ಯವಾಗಿದೆ. ನಮ್ಮೆಲ್ಲರನ್ನೂ ಒಗ್ಗೂಡಿಸಿರುವ ಸಂಗತಿಗಳಲ್ಲಿ ಒಂದೆಂದರೆ ಅದು ಸಂವಿಧಾನ, ನ್ಯಾಯಪಾಲನೆಯಲ್ಲಿ ನಂಬಿಕೆಯಿರಿಸಿರುವ ನ್ಯಾಯಿಕ ವ್ಯವಸ್ಥೆ ಮತ್ತು ಅತ್ಯುನ್ನತ ಸ್ಥಾನದಲ್ಲಿ ಸುಪ್ರೀಂ ಕೋರ್ಟ್‌ ಅನ್ನು ಹೊಂದಿರುವ ಶ್ರೇಣೀಕೃತ ನ್ಯಾಯಾಲಯ ವ್ಯವಸ್ಥೆ ಎನ್ನುವುದ ನನ್ನ ಅಚಲ ನಂಬಿಕೆ. ಈ ಹಿನ್ನೆಲೆಯಲ್ಲಿ ನ್ಯಾಯವಾದಿಗಳು ಮತ್ತು ನ್ಯಾಯಮೂರ್ತಿಗಳ ಪಾತ್ರಕ್ಕೆ ಮಹತ್ವವಿದೆ” ಎಂದು ಅವರು ಹೇಳಿದರು.

ನಮ್ಮೆಲ್ಲರನ್ನೂ ಒಗ್ಗೂಡಿಸಿರುವ ಸಂಗತಿಗಳಲ್ಲಿ ಒಂದೆಂದರೆ ಅದು ಸಂವಿಧಾನ, ನ್ಯಾಯಪಾಲನೆಯಲ್ಲಿ ನಂಬಿಕೆಯಿರಿಸಿರುವ ನ್ಯಾಯಿಕ ವ್ಯವಸ್ಥೆ ಮತ್ತು ಅತ್ಯುನ್ನತ ಸ್ಥಾನದಲ್ಲಿ ಸುಪ್ರೀಂ ಕೋರ್ಟ್‌ ಅನ್ನು ಹೊಂದಿರುವ ಶ್ರೇಣೀಕೃತ ನ್ಯಾಯಾಲಯ ವ್ಯವಸ್ಥೆ ಎನ್ನುವುದ ನನ್ನ ಅಚಲ ನಂಬಿಕೆ.
ನ್ಯಾ. ಬಿ ವಿ ನಾಗರತ್ನ

ಇದೇ ವೇಲೆ ಅವರು ಮಹಿಳಾ ವಕೀಲರನ್ನು ಉದ್ದೇಶಿಸಿ, ಅವಕಾಶಗಳು ಸಿಕ್ಕಾಗ ಅದನ್ನು ಬಾಚಿಕೊಳ್ಳಬೇಕು ಮತ್ತು ತಮ್ಮ ಮೇಲೆ ತಾವು ಅಗಾಧವಾದ ನಂಬಿಕೆ ಇಡಬೇಕು ಎಂದು ಮಹಿಳಾ ವಕೀಲರಿಗೆ ನ್ಯಾ. ನಾಗರತ್ನ ಅವರು ಸಲಹೆ ನೀಡಿದರು. “ಸರಿಯಾದ ಅವಕಾಶಕ್ಕೆ ಕಾಯಬೇಕು. ನಿಮ್ಮ ಮೇಲೆ ನೀವು ವಿಶ್ವಾಸವಿಟ್ಟು, ಸಮಾಜಕ್ಕೆ ಮರಳಿಸಬೇಕೆಂಬುದನ್ನು ಸಾಧಿಸಲು ಅದರ ಬೆನ್ನೇರಬೇಕು. ಇದಕ್ಕಾಗಿ ಪ್ರತಿಯೊಬ್ಬರು ಅವಕಾಶ ಪಡೆಯಬೇಕು ಎಂದು ನಾನು ಮಹಿಳಾ ವಕೀಲರಿಗೆ ಸಂದೇಶ ನೀಡುತ್ತೇನೆ” ಎಂದರು.

“ನನ್ನ ಇಡೀ ಕುಟುಂಬವು ನನ್ನ ವೃತ್ತಿಗೆ ಬೆಂಬಲವಾಗಿ ನಿಂತಿದೆ” ಎಂದಿರುವ ನ್ಯಾ. ನಾಗರತ್ನ ಅವರು “ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂದು ಹೇಳಲಾಗುತ್ತದೆ. ಆದರೆ, ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ ಕುಟುಂಬ ಇರುತ್ತದೆ” ಎಂದರು.

Also Read
ವಿಶ್ವದ ಅತ್ಯಂತ ಬಲಿಷ್ಠ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅವಕಾಶ ಪಡೆದಿರುವೆ: ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾ.ಓಕಾ ಅಭಿಮತ

“ನನ್ನ ವೃತ್ತಿ ಬದುಕಿನಲ್ಲಿ ನನ್ನ ಧ್ವನಿ ಏನಾದರೂ ಏರಿಸಿದ್ದರೆ ಅದು ಅನ್ಯಾಯದ ವಿರುದ್ಧವೇ ಹೊರತು, ಯಾವುದೇ ನಿರ್ದಿಷ್ಟ ವ್ಯಕ್ತಿಯ ವಿರುದ್ದವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಭಾಷಣದ ಅಂತ್ಯದಲ್ಲಿ ಗದ್ಗದಿತರಾದ ನ್ಯಾ. ನಾಗರತ್ನ ಅವರು “ಕಳೆದ 34 ವರ್ಷಗಳಲ್ಲಿ ವಕೀಲೆ ಮತ್ತು ನ್ಯಾಯಮೂರ್ತಿಯಾಗಿ ನನ್ನ ಕೆಲಸವನ್ನು ಆನಂದಿಸಿದ್ದೇನೆ. ನನ್ನ ಬದುಕು ಈ ಕಟ್ಟಡದೊಂದಿಗೆ (ಹೈಕೋರ್ಟ್‌) ಮತ್ತು ನಾನು ಕೆಲಸ ಮಾಡಿರುವವರು ಮತ್ತು ಮಾಡುತ್ತಿರುವವರೊಂದಿಗೆ ಮಿಳಿತವಾಗಿದೆ ಎಂದು ನನಗನ್ನಿಸುತ್ತದೆ” ಎಂದು ಹೇಳಿದರು.

Related Stories

No stories found.
Kannada Bar & Bench
kannada.barandbench.com