ನ್ಯಾಯದಾನದ ವಿಳಂಬವು, ನ್ಯಾಯ ನಿರಾಕರಣೆ ಮಾತ್ರವೇ ಅಲ್ಲ, ಅದರ ನಾಶವೂ ಕೂಡ: ಸಿಜೆಐ ಸೂರ್ಯಕಾಂತ್‌

ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ಹೈಕೋರ್ಟ್‌ಗಳು ನಿರ್ಣಾಯಕ ಸ್ಥಾನ ಹೊಂದಿವೆ. ಅಕ್ರಮ ಬಂಧನ, ಆಡಳಿತಾತ್ಮಕ ಅತಿಕ್ರಮಣ ಮತ್ತು ಘನತೆಯ ಉಲ್ಲಂಘನೆಯ ವಿರುದ್ಧ ನಾಗರಿಕರಿಗೆ ದೊರೆಯುವ ಮೊದಲ ಮತ್ತು ಅತ್ಯಂತ ಪ್ರಮುಖ ರಕ್ಷಣೆಯಾಗಿವೆ ಎಂದ ಸಿಜೆಐ.
CJI Surya Kant
CJI Surya Kant
Published on

ನ್ಯಾಯಾಂಗದ ಮಧ್ಯಪ್ರವೇಶದಲ್ಲಿನ ವಿಳಂಬವು ನ್ಯಾಯ ನಿರಾಕರಣೆ ಮಾತ್ರವೇ ಅಲ್ಲದೆ ನ್ಯಾಯದ ನಾಶವಾಗಿಯೂ ಪರಿಣಮಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಅಗತ್ಯವಿದ್ದ ಸಮಯದಲ್ಲಿ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ವಿಫಲವಾದಾಗ ನಾಗರಿಕರು ತಮ್ಮ ನೈಜ ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

ಬಾಂಬೆ ಬಾರ್ ಅಸೋಸಿಯೇಷನ್ ​​ಆಯೋಜಿಸಿದ್ದ ಖ್ಯಾತ ನ್ಯಾಯವಾದಿ ಫಾಲಿ ನಾರಿಮನ್ ಸ್ಮಾರಕ ಉಪನ್ಯಾಸದಲ್ಲಿ ಸಿಜೆಐ ಸೂರ್ಯಕಾಂತ್ ಅವರು ಶನಿವಾರ ಮಾತನಾಡಿದರು.

ನಾಗರಿಕರಿಗೆ, ವಿಶೇಷವಾಗಿ ಕಾರ್ಯಾಂಗದಿಂದ ಕ್ರಮವನ್ನು ಎದುರಿಸುತ್ತಿರುವವರಿಗೆ, ಮೊದಲ ವಿಚಾರಣೆಯಲ್ಲಿಯೇ ಹೈಕೋರ್ಟ್‌ನ ಮಧ್ಯಪ್ರವೇಶಿಸುವ ಸಾಮರ್ಥ್ಯವು ಅವರು ನ್ಯಾಯದಾನದ ಅನುಭವವನ್ನು ಪಡೆದರೇ ಇಲ್ಲವೇ ಎನ್ನುವುದನ್ನು ನಿರ್ಧರಿಸುತ್ತದೆ ಎಂದು ಸಿಜೆಐ ಈ ವೇಳೆ ಹೇಳಿದರು.

“ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿರುವ ಸಣ್ಣ ರೈತನಿಗೆ ಅಥವಾ ತಪ್ಪಾಗಿ ಪ್ರವೇಶ ನಿರಾಕರಿಸಲ್ಪಟ್ಟ ವಿದ್ಯಾರ್ಥಿಗೆ ನ್ಯಾಯ ದೊರೆಯುವಲ್ಲಿನ ವಿಳಂಬವು ನ್ಯಾಯದ ನಿರಾಕರಣೆ ಮಾತ್ರವೇ ಆಗದೆ, ನ್ಯಾಯವನ್ನೇ ನಾಶಪಡಿಸುತ್ತದೆ. ಆದ್ದರಿಂದ, ಮೊದಲ ವಿಚಾರಣೆಯಲ್ಲಿಯೇ ಕಾರ್ಯಾಂಗದ ಕ್ರಮವನ್ನು ತಡೆಯುವ ಹೈಕೋರ್ಟ್‌ನ ಸಾಮರ್ಥ್ಯವು ನಾಗರಿಕರಲ್ಲಿ ಸದಾಕಾಲ ಉಳಿಯುವ ನ್ಯಾಯದ ಅನುಭವವಾಗಿರುತ್ತದೆ” ಎಂದು ಅವರು ವಿವರಿಸಿದರು.

ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ಹೈಕೋರ್ಟ್‌ಗಳು ವಿಶಿಷ್ಟ ಮತ್ತು ನಿರ್ಣಾಯಕ ಸ್ಥಾನವನ್ನು ಹೊಂದಿವೆ, ಅಕ್ರಮ ಬಂಧನ, ಆಡಳಿತಾತ್ಮಕ ಅತಿಕ್ರಮಣ ಮತ್ತು ಘನತೆಯ ಉಲ್ಲಂಘನೆಯ ವಿರುದ್ಧ ನಾಗರಿಕರಿಗೆ ದೊರೆಯುವ ಮೊದಲ ಮತ್ತು ಅತ್ಯಂತ ಪ್ರಮುಖ ರಕ್ಷಣೆಯಾಗಿ ಅವು ಕಾರ್ಯನಿರ್ವಹಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ಹೈಕೋರ್ಟ್‌ಗಳು ಇರಿಸುವ ನಿಗಾವಣೆ, ಅವುಗಳ ಸ್ಪಂದನಶೀಲತೆ ಹಾಗೂ ಸಾಮಾನ್ಯ ನಾಗರಿಕರಿಗೆ ಅವು ಹೊಂದಿರುವ ಲಭ್ಯತೆಯಿಂದಾಗಿ ಭಾರತದಲ್ಲಿ ಸ್ವಾತಂತ್ರ್ಯವೆನ್ನುವುದು ಇನ್ನೆಂದಿಗೂ ನಿರಂಕುಶ ಅಧಿಕಾರದ ಮರ್ಜಿಯಲ್ಲಿ ಇರುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು

"226 ನೇ ವಿಧಿಯ ಅಡಿಯಲ್ಲಿ ಮಧ್ಯಂತರ ಪರಿಹಾರವನ್ನು ನೀಡುವ ಹೈಕೋರ್ಟ್‌ನ ಅಧಿಕಾರವು ನ್ಯಾಯಾಲಯದ ರಕ್ಷಣಾತ್ಮಕ ನ್ಯಾಯವ್ಯಾಪ್ತಿಯ ಲಕ್ಷಣವಾಗಿದೆ. ಇದು ಆರಂಭದಲ್ಲಿಯೇ ನ್ಯಾಯಾಲಯವು ಮಧ್ಯಪ್ರವೇಶಿಸುವ ಮೂಲಕ ಆಡಳಿತಾತ್ಮಕ ಆತುರದ ಕಾರಣದಿಂದಾಗಿ ಉಂಟಾಗಬಹುದಾದ ವಿಪರೀತಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸನ್ನಿವೇಶ ಉದ್ಭವಿಸದಂತೆ, ನ್ಯಾಯವು ಸೋಲದಂತೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸುತ್ತದೆ" ಎಂದು ತಿಳಿಸಿದರು.

ಹೈಕೋರ್ಟ್‌ಗಳನ್ನು ಎಂದಿಗೂ ಕೇವಲ ಮೇಲ್ಮನವಿ ಅಥವಾ ಪರಿಷ್ಕರಣಾ ನ್ಯಾಯಾಲಯಗಳಾಗಿ ಅಥವಾ ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲುಗಳಾಗಿ ಕಾರ್ಯನಿರ್ವಹಿಸಬೇಕೆಂದು ಉದ್ದೇಶಿಸಿಲ್ಲ. ಬದಲಿಗೆ, ನಾಗರಿಕರು ತಕ್ಷಣದ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಪಡೆಯಬಹುದಾದ ಸ್ಪಂದನಶೀಲ ಸಾಂವಿಧಾನಿಕ ನ್ಯಾಯಾಲಯಗಳಾಗಿ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿವರಿಸಿದರು.

ಹೈಕೋರ್ಟ್‌ಗಳ ಈ ಪಾತ್ರವನ್ನು ಭಾರತದ ವಸಾಹತುಶಾಹಿ ಭೂತಕಾಲದ ಅನುಭವಗಳೊಂದಿಗೆ ಸಿಜೆಐ ಸೂರ್ಯಕಾಂತ್‌ ಗುರುತಿಸಿದರು, ವಸಾಹತುಶಾಹಿ ಆಳ್ವಿಕೆಯಲ್ಲಿ, ಕಾನೂನುಗಳು ನಿಯಂತ್ರಣದ ಸಾಧನಗಳಾಗಿದ್ದವು. ನಾಗರಿಕ ಸ್ವಾತಂತ್ರ್ಯವನ್ನು ಉದ್ದೇಶಪೂರ್ವಕವಾಗಿ ದಮನಿಸಲಾಗುತ್ತಿತ್ತು. ಇದನ್ನು ಮನಗಂಡಿದ್ದ ನಮ್ಮ ಸಂವಿಧಾನದ ನಿರ್ಮಾತೃಗಳು ಮತ್ತೆಂದೂ ದೇಶದ ನಾಗರಿಕರು ಆಳುವ ಪ್ರಭುತ್ವದ ವಿರುದ್ಧ ರಕ್ಷಣೆಯಿಲ್ಲದೆ ಅಸಹಾಯಕರಾಗಿ ಉಳಿಯದಂತೆ ನೋಡಿಕೊಳ್ಳಲು ಈ ಬಗೆಯ ವಿನ್ಯಾಸವನ್ನು ರೂಪಿಸಿದರು ಎಂದು ತಿಳಿಸಿದರು. ಹೈಕೋರ್ಟ್‌ಗಳು ನಿಜ ಅರ್ಥದಲ್ಲಿ "ಪ್ರಥಮ ಸಾಂವಿಧಾನಾತ್ಮಕ ನ್ಯಾಯಾಲಯಗಳು" ಎಂದು ಹೇಳಿದರು.

ಇದೇ ವೇಳೆ ಅವರು, ಆಧುನಿಕ ಯುಗದಲ್ಲಿ ನ್ಯಾಯಿಕ ಸಮಾನತೆಯನ್ನು ತರುವ ಸಲುವಾಗಿ ನ್ಯಾಯಾಲಯಗಳು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಲ್ಲದೆ, ಹೈಕೋರ್ಟ್‌ಗಳು ತಮ್ಮ ಪಾತ್ರವನ್ನು ಅತಿ ವಿಸ್ತರಿಸದೆ ಬದಲಿಗೆ ಬಲಗೊಳಿಸಿಕೊಳ್ಳಬೇಕಾದ ಅಗತ್ಯವನ್ನು ತಿಳಿಸಿದರು. ಈ ನಿಟ್ಟಿನಲ್ಲಿ ಶಿಸ್ತುಬದ್ಧ ವಕೀಲ ಸಮುದಾಯ ಹಾಗೂ ಬದ್ಧತೆಯುಳ್ಳ ನ್ಯಾಯಪೀಠದ ಅಗತ್ಯವನ್ನು ಅವರು ಒತ್ತಿ ಹೇಳಿದರು.

Kannada Bar & Bench
kannada.barandbench.com