ಜಮ್ಮು ನ್ಯಾಯಾಲಯದಲ್ಲಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಶಿಕ್ಷೆಗೊಳಗಾಗಿರುವ ಪ್ರತ್ಯೇಕತಾವಾದಿ ಯಾಸೀನ್ ಮಲಿಕ್‌ನನ್ನು ಭೌತಿಕವಾಗಿ ವಿಚಾರಣೆಗೆ ಹಾಜರುಪಡಿಸಲು ಕೋರಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು ಶುಕ್ರವಾರ ವಿಚಾರಣೆಯಿಂದ ಹಿಂದೆ ಸರಿದರು [ಕೇಂದ್ರೀಯ ತನಿಖಾ ದಳ ವರ್ಸಸ್ ಮೊಹಮ್ಮದ್ ಯಾಸೀನ್ ಮಲಿಕ್].
ವಿಚಾರಣೆಗೆ ಮಲಿಕ್‌ನನ್ನು ಭೌತಿಕವಾಗಿ ಹಾಜರುಪಡಿಸಲು ಜಮ್ಮುವಿನ ವಿಶೇಷ ನ್ಯಾಯಾಲಯ ಆದೇಶ ಮಾಡಿದ್ದನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ ಸಲ್ಲಿಸಿದ್ದ ಮೇಲ್ಮನವಿಯು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ದೀಪಂಕರ್ ದತ್ತಾ ಅವರ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು.
ವಿಚಾರಣೆಯಲ್ಲಿ ಭೌತಿಕವಾಗಿ ಭಾಗವಹಿಸಲು ಇಚ್ಛಿಸಿರುವುದಾಗಿ ಮಲಿಕ್ ಜೈಲಿನ ಅಧಿಕಾರಿಗಳಿಗೆ ತಿಳಿಸಿ, ಅದರಂತೆ ಸುಪ್ರೀಂ ಕೋರ್ಟ್‌ನಲ್ಲಿ ಹಾಜರಾಗಿದ್ದರು.
ಸಾಲಿಸಿಟರ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮಲಿಕ್ ಉಪಸ್ಥಿತಿಯ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಹಾಜರಿಗಳಿಗೆ ನ್ಯಾಯಾಲಯದ ರಿಜಿಸ್ಟ್ರಾರ್ ಅವರು ಒಪ್ಪಿಗೆ ಪಡೆಯಬೇಕು ಎಂಬ ನಿಯಮವಿದೆ ಎಂದರು.
ನ್ಯಾಯಾಲಯದಲ್ಲಿ ಮಲಿಕ್ ಜೊತೆ ಹಾಜರಿದ್ದ ಜೈಲಿನ ಅಧಿಕಾರಿಗಳ ನಡೆಗೆ ಕಿಡಿಕಾರಿದ ಮೆಹ್ತಾ ಅವರು ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 268 ಮಲಿಕ್‌ಗೆ ಅನ್ವಯಿಸುವುದರಿಂದ ಆತನನ್ನು ಜೈಲಿನಿಂದ ಹೊರ ಕರೆತರುವಂತಿಲ್ಲ ಎಂದರು.
ಈ ನಿಬಂಧನೆಯಡಿ ಗಂಭೀರ ಅಪರಾಧಗಳಲ್ಲಿ ದೋಷಿ ಎಂದು ಘೋಷಿತವಾದ ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಹೊರಹೋಗುವುದಕ್ಕೆ ನಿರಾಕರಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಜೈಲಿನಿಂದ ಹೊರಗೆ ಕಾಲಿಡದಂತೆ ಮಾಡಲು ಕೇಂದ್ರ ಸರ್ಕಾರವು ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ಎಸ್‌ಜಿ ಹೇಳಿದರು. ಅಂತಿಮವಾಗಿ ಪೀಠವು ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿದೆ.
ನಾಲ್ವರು ಭಾರತೀಯ ವಾಯು ಸೇನಾ ಸಿಬ್ಬಂದಿಯ ಕೊಲೆ ಮತ್ತು 1989ರಲ್ಲಿ ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯಾ ಸಯೀದ್ ಅವರ ಅಪಹರಣ ಪ್ರಕರಣಗಳಲ್ಲಿ ಮಲಿಕ್‌ನನ್ನು ಪಾಟೀ ಸವಾಲಿಗೆ ಗುರಿಪಡಿಸಲು ಆತನನ್ನು ಭೌತಿಕವಾಗಿ ಹಾಜರುಪಡಿಸಲು ಜಮ್ಮು ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಏಪ್ರಿಲ್‌ನಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ, ನೋಟಿಸ್ ಜಾರಿ ಮಾಡಿತ್ತು.