ತಮ್ಮ ಏಳು ವರ್ಷಗಳ ಸೇವಾವಧಿಯ ಸ್ವಯಂ ಮೌಲ್ಯಮಾಪನ ವರದಿ ಬಿಡುಗಡೆ ಮಾಡಿದ ಮದ್ರಾಸ್‌ ಹೈಕೋರ್ಟ್‌ ನ್ಯಾ. ಸ್ವಾಮಿನಾಥನ್‌

ತಾವು ನ್ಯಾಯಾಧೀಶರಾಗಿ ಜೂನ್ 27ಕ್ಕೆ ಏಳು ವರ್ಷ ಸೇವಾವಧಿ ಪೂರೈಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಸ್ವಯಂಪ್ರೇರಿತರಾಗಿ ಕಾರ್ಯಕ್ಷಮತೆಯ ವರದಿ ಬಿಡುಗಡೆ ಮಾಡಿದ್ದಾರೆ.
Justice GR Swaminathan
Justice GR Swaminathan
Published on

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರು ಕಳೆದ ಏಳು ವರ್ಷಗಳ ತಮ್ಮ ಸೇವಾವಧಿಯಲ್ಲಿ ತಾವು ಮಾಡಿರುವ ಕೆಲಸದ ಸ್ವಯಂ ಮೌಲ್ಯಮಾಪನ ಕೈಗೊಂಡು 'ಕಾರ್ಯಕ್ಷಮತಾ ವರದಿ'ಯನ್ನು ಬಿಡುಗಡೆ ಮಾಡಿದ್ದಾರೆ.

ತಾವು ನ್ಯಾಯಾಧೀಶರಾಗಿ ಜೂನ್ 27ಕ್ಕೆ ಏಳು ವರ್ಷ ಸೇವಾವಧಿ ಪೂರೈಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಸ್ವಯಂಪ್ರೇರಿತರಾಗಿ ಈ ವರದಿ ಬಿಡುಗಡೆ ಮಾಡಿದ್ದಾರೆ. ನ್ಯಾಯಾಧೀಶರು ಸೇರಿದಂತೆ ಸಾರ್ವಜನಿಕ ಹುದ್ದೆಯಲ್ಲಿರುವ ಎಲ್ಲರನ್ನು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಗುರುತಿಸಬೇಕು ಎನ್ನುವುದು ಸ್ವಾಮಿನಾಥನ್‌ ಅವರ ನಂಬಿಕೆಯಾಗಿದೆ.

ನ್ಯಾ. ಸ್ವಾಮಿನಾಥನ್‌ ತಾವು ಈವರೆಗೆ 64,798 ಪ್ರಕರಣಗಳನ್ನು ವಿಲೇವಾರಿ ಮಾಡಿರುವುದಾಗಿ ತಮ್ಮ ಮೌಲ್ಯಮಾಪನ ವರದಿಯಲ್ಲಿ ಹೇಳಿಕೊಂಡಿದ್ದಾರೆ. ಅವರ ಕಾರ್ಯಕ್ಷಮತೆಯ ವರದಿಯ ಪ್ರಕಾರ, ಅವರು ವಿಲೇವಾರಿ ಮಾಡಿರುವ ಪ್ರಕರಣಗಳಲ್ಲಿ 820 ಪ್ರಕರಣಗಳು ಅವರು ಚೆನ್ನೈನ ಮದ್ರಾಸ್ ಹೈಕೋರ್ಟ್‌ನ ಪ್ರಧಾನ ಪೀಠದಲ್ಲಿದ್ದಾಗ ಇತ್ಯರ್ಥ ಪಡಿಸಿರುವುದಾಗಿದೆ. ಉಳಿದ 63,910 ಪ್ರಕರಣಗಳನ್ನು ಮಧುರೈ ಪೀಠದಲ್ಲಿನ ತಮ್ಮ ಕಾರ್ಯಾವಧಿಯಲ್ಲಿ ಅವರು ಇತ್ಯರ್ಥಪಡಿಸಿದ್ದಾರೆ.

ನ್ಯಾ. ಸ್ವಾಮಿನಾಥನ್ ಅವರು ತಮ್ಮ ಈವರೆಗಿನ ಸೇವಾವಧಿಯಲ್ಲಿ ಬಹುತೇಕವಾಗಿ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಾನು ವಿಲೇವಾರಿ ಮಾಡಿದ ಮಿಸಲೇನಿಯಸ್‌ ಪ್ರಕರಣಗಳನ್ನು ಸೇರಿಸಿದರೆ, ಈವರೆಗೆ ಇತ್ಯರ್ಥ ಪಡಿಸಿರುವ ಪ್ರಕರಣಗಳ ಸಂಖ್ಯೆ 1,03,685 ಕ್ಕೆ ಏರುತ್ತದೆ. ಆದರೆ, ಪ್ರಕರಣಗಳ ವಿಲೇವಾರಿಯ ಸಂಖ್ಯೆಯನ್ನು ನೀಡುವಾಗ ಮಿಸಲೇನಿಯಸ್‌ ಪ್ರಕರಣಗಳನ್ನು ಒಟ್ಟು ವಿಲೇವಾರಿಯ ಸಂಖ್ಯೆಗೆ ಸೇರಿಸಬಾರದು ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ನ್ಯಾಯಮೂರ್ತಿ ಚಂದ್ರು (ನ್ಯಾಯಮೂರ್ತಿ ಕೆ ಚಂದ್ರು, ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು; ಅವರು ತಮ್ಮ ಅವಧಿಯಲ್ಲಿ 95,607 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರು ಎಂದು ಸ್ವಾಮಿನಾಥನ್‌ ಹೇಳಿದ್ದಾರೆ) ಅವರಂತೆ ನಾನು ಸಹ ಮಿಸಲೇನಿಯಸ್‌ ವಿಲೇವಾರಿಗಳನ್ನು ಲೆಕ್ಕಕ್ಕೆ ಪರಿಗಣಿಸಿದರೆ ಆಗ ಇತ್ಯರ್ಥ ಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ1,03,685 ಆಗುತ್ತದೆ. ಆದರೆ, ಈ ರೀತಿ ಲೆಕ್ಕ ಹಾಕುವಾಗ ಮುಖ್ಯ ಪ್ರಕರಣಗಳ ವಿಲೇವಾರಿ ಮಾತ್ರ ಪರಿಗಣಿಸಬೇಕು. ಇಲ್ಲದೆ ಹೋದರೆ ಸಾಮಾನ್ಯ ಜನರಿಗೆ ತಪ್ಪು ಚಿತ್ರಣ ನೀಡಿದಂತಾಗುತ್ತದೆ ಎಂದು ಸ್ವಾಮಿನಾಥನ್‌ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಆರು ವರ್ಷಗಳವರೆಗೆ ತಮ್ಮ ಸೇವಾವಧಿ ಇರಲಿದ್ದು ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆದೇಶಗಳನ್ನು ಮಾಡಿ ಪ್ರಕರಣಗಳನ್ನು ವಿಲೇವಾರಿ ಮಾಡಲು ತಾವು ಬಯಸುವುದಾಗಿ ನ್ಯಾ. ಸ್ವಾಮಿನಾಥನ್‌ ಹೇಳಿದ್ದಾರೆ. ತಮ್ಮ ಈ ಗುರಿ ಈಡೇರಿಕೆಗೆ ವಕೀಲ ಸಮುದಾಯವು ತಪ್ಪುಗಳಿಗೆ ಅಸ್ಪದವಿಲ್ಲದ ರೀತಿಯಲ್ಲಿ ವಾದ ಮಂಡನೆ ಮಾಡುವ ಮೂಲಕ ನೆರವು ನೀಡಬೇಕು ಎಂದು ಅವರು ಕೋರಿದ್ದಾರೆ.

Kannada Bar & Bench
kannada.barandbench.com