ನ್ಯಾ. ಚಂದಾ ಬಿಜೆಪಿ ಸಕ್ರಿಯ ಸದಸ್ಯರಾಗಿದ್ದರು: ಚುನಾವಣಾ ಅರ್ಜಿ ಮರುನಿಯೋಜನೆಗಾಗಿ ಕಲ್ಕತ್ತಾ ಹೈಕೋರ್ಟ್‌ಗೆ ಮಮತಾ ಪತ್ರ

ನ್ಯಾ. ಚಂದಾ ಅವರನ್ನು ಕಲ್ಕತ್ತಾ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ಪರಿಗಣಿಸಿರುವುದಕ್ಕೆ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನ್ಯಾ. ಚಂದಾ ಬಿಜೆಪಿ ಸಕ್ರಿಯ ಸದಸ್ಯರಾಗಿದ್ದರು: ಚುನಾವಣಾ ಅರ್ಜಿ ಮರುನಿಯೋಜನೆಗಾಗಿ ಕಲ್ಕತ್ತಾ ಹೈಕೋರ್ಟ್‌ಗೆ ಮಮತಾ ಪತ್ರ

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ನಂದಿಗ್ರಾಮದಿಂದ ಚುನಾಯಿತರಾಗಿರುವುದನ್ನು ಪ್ರಶ್ನಿಸಿ ತಾವು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೌಶಿಕ್‌ ಚಂದಾ ಅವರಿರುವ ಪೀಠದಿಂದ ಮರುನಿಯೋಜಿಸುವಂತೆ ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಲ್ಕತ್ತಾ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿಗೆ ಪತ್ರ ಬರೆದಿದ್ದಾರೆ.

ಮಮತಾ ಪರ ವಕೀಲ ಸಂಜಯ್ ಬಸು ಅವರ ಮೂಲಕ ಬರೆಯಲಾದ ಪತ್ರದಲ್ಲಿ, ನ್ಯಾ.ಚಂದಾ ಅವರು ನ್ಯಾಯಾಧೀಶರಾಗುವ ಮೊದಲು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದು ಇದು ಪಕ್ಷಪಾತಕ್ಕೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.

"ಭಾರತೀಯ ಜನತಾ ಪಕ್ಷದ ಸದಸ್ಯರಾದ ಸುವೇಂದು ಅಧಿಕಾರಿಯವರ ಚುನಾವಣಾ ಗೆಲುವನ್ನು ಪ್ರಶ್ನಿಸಿ ನನ್ನ ಕಕ್ಷೀದಾರರು ಚುನಾವಣಾ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ನ್ಯಾಯ ನಿರ್ಣಯದಲ್ಲಿ ರಾಜಕೀಯ ಸಂಕೀರ್ಣ ಪರಿಣಾಮಗಳೂ ಇರಲಿವೆ. ನ್ಯಾ. ಚಂದಾ ಅವರು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದರು ಎಂದು ನನ್ನ ಕಕ್ಷೀದಾರರ ಅರಿವಿಗೆ ಬಂದಿದೆ. ಆದ್ದರಿಂದ, ಗೌರವಾನ್ವಿತ ನ್ಯಾಯಮೂರ್ತಿಗಳು ಚುನಾವಣಾ ಅರ್ಜಿಯನ್ನು ಕೈಗೆತ್ತಿಕೊಂಡರೆ, ಪ್ರತಿವಾದಿಯ ಪರವಾಗಿ ಮತ್ತು ಅಥವಾ ನನ್ನ ಕಕ್ಷೀದಾರರ ವಿರುದ್ಧ ಅವರ ಕಡೆಯಿಂದ ಪಕ್ಷಪಾತ ಉಂಟಾಗಬಹುದು ಎಂಬ ಬಗ್ಗೆ ನನ್ನ ಕಕ್ಷೀದಾರರ ಮನಸ್ಸಿನಲ್ಲಿ ಸಕಾರಣವಾದ ಆತಂಕವಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನ್ಯಾ. ಚಂದಾ ಅವರನ್ನು ಕಲ್ಕತ್ತಾ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ಪರಿಗಣಿಸಿರುವುದಕ್ಕೆ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಯಾವುದೇ ಸಂದರ್ಭದಲ್ಲಿ, ನ್ಯಾಯಮೂರ್ತಿಗಳು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದು ಚುನಾವಣಾ ಅರ್ಜಿಯಲ್ಲಿ ಪ್ರತಿವಾದಿಯು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ನ್ಯಾಯಮೂರ್ತಿಗಳು ನೀಡುವ ತೀರ್ಪು ಅವರ ಸ್ವಂತ ಕಾರಣದಿಂದ ಹೊರಬಂದಿದೆ ಎನ್ನಬಹುದು ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ನ್ಯಾಯಾಂಗದಲ್ಲಿ ಜನತೆ ಇರಿಸಿದ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಚುನಾವಣಾ ಅರ್ಜಿಯನ್ನು ಮರುನಿಯೋಜಿಸುವಂತೆ ಕೋರಲಾಗಿದೆ.

Also Read
[ನಾರದ ಪ್ರಕರಣ] ದಾಖಲೆಯಲ್ಲಿ ಅಫಿಡವಿಟ್‌ ಸ್ವೀಕರಿಸಲು ಕಲ್ಕತ್ತಾ ಹೈಕೋರ್ಟ್‌ ನಕಾರ: ಸುಪ್ರೀಂ ಕದ ತಟ್ಟಿದ ಮಮತಾ ಸರ್ಕಾರ

2020ರಲ್ಲಿ ಬಿಜೆಪಿಗೆ ಸೇರುವ ಮೊದಲು ಮಮತಾ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ, ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸಿ ಮಮತಾರನ್ನು 1,956 ಮತಗಳ ಅಂತರದಿಂದ ಸೋಲಿಸಿದ್ದರು. ಫಲಿತಾಂಶದಲ್ಲಿ ಮೋಸ ನಡೆದಿದೆ ಎಂದು ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿ ಸುವೇಂದು ಅವರ ಗೆಲುವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾ. ಕೌಶಿಕ್‌ ಚಂದಾ ಅವರಿರುವ ಪೀಠ ವಿಚಾರಣೆ ನಡೆಸಬೇಕೆಂದು ಶುಕ್ರವಾರ ಪ್ರಕರಣವನ್ನು ಪಟ್ಟಿ ಮಾಡಲಾಗಿತ್ತು.

ಪಟ್ಟಿ ಮಾಡಿದ ಒಂದು ವಾರಕ್ಕೆ ಪ್ರಕರಣವನ್ನು ಆದೇಶಗಳಿಗಾಗಿ ಪರಿಗಣಿಸಬೇಕೆಂದು ಮಮತಾ ಪರ ವಕೀಲ ಸೌಮೇಂದ್ರ ನಾಥ್‌ ಮುಖರ್ಜಿ ಕೋರಿದ್ದರು. ನ್ಯಾಯಮೂರ್ತಿ ಚಂದಾ ಈ ಮನವಿಗೆ ಸಮ್ಮತಿ ಸೂಚಿಸಿದ್ದರು. "ಮುಂದಿನ ಗುರುವಾರಕ್ಕೆ ಪ್ರಕರಣವನ್ನು ಪಟ್ಟಿ ಮಾಡೋಣ. ಈ ಮಧ್ಯೆ, ಜನಪ್ರತಿನಿಧಿ ಕಾಯಿದೆಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಲಾಗಿದೆಯೇ ಎಂದು ರಿಜಿಸ್ಟ್ರಾರ್ ಈ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು" ಎಂದು ಅವರು ನಿರ್ದೇಶನ ನೀಡಿದ್ದರು.

Related Stories

No stories found.
Kannada Bar & Bench
kannada.barandbench.com