ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ಮಹಿಳೆ ನಿಮಿಷಾ ಪ್ರಿಯಾ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಯತ್ನಿಸಲಿದ್ದಾರೆ.
ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹದಿ ಹತ್ಯೆಗೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಿಯಾ ಅವರನ್ನು ತಪ್ಪಿತಸ್ಥೆ ಎಂದು ಘೋಷಿಸಿತ್ತು. ಆಕೆಯ ಮನವಿಯನ್ನು ಯೆಮೆನ್‌ನ ಮೇಲ್ಮನವಿ ನ್ಯಾಯಾಲಯವೂ ತಿರಸ್ಕರಿಸಿತ್ತು.
ಮೃತರ ಕುಟುಂಬ ಅಪರಾಧಿಯನ್ನು ಕ್ಷಮಿಸಿದರೆ ಅವರ ಬಿಡುಗಡೆಗೆ ಯೆಮೆನ್ ಕಾನೂನಿನಲ್ಲಿ ಅವಕಾಶವಿದೆ. ಕ್ಷಮಾದಾನಕ್ಕೆ ಪ್ರತಿಯಾಗಿ ಅಪರಾಧಿ ಮೃತರ ಕುಟುಂಬಕ್ಕೆ ಪರಿಹಾರ ಧನ ಒದಗಿಸಬೇಕೆಂದು ಕೂಡ ಕಾನೂನು ತಿಳಿಸುತ್ತದೆ.
ಪ್ರಿಯಾ ಬಿಡುಗಡೆಗೆ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಕೆಲವು ಮಾಜಿ ರಾಜತಾಂತ್ರಿಕರು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ನ್ಯಾ. ಜೋಸೆಫ್ ಅವರೊಂದಿಗೆ ಸಹಕರಿಸಲಿವೆ.
ಮತ್ತೊಂದೆಡೆ ಪ್ರಿಯಾ ಅವರ ತಾಯಿ, ಅವರ ಮಗಳು ಯೆಮೆನ್‌ಗೆ ಭೇಟಿ ನೀಡಿ ಮೃತನ ಕುಟುಂಬವನ್ನು ಭೇಟಿಯಾಗಿ ಮಾತುಕತೆ ನಡೆಸಲು ಮತ್ತು ಕ್ಷಮೆಯಾಚಿಸಲು ಯತ್ನಿಸಲಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ಕೆ ಆರ್ ಸುಭಾಷ್ ಚಂದ್ರನ್, ಸಾಮಾಜಿಕ ಕಾರ್ಯಕರ್ತರಾದ ರಫೀಕ್ ರಾವುತರ್, ಬಾಬು ಜಾನ್ ಹಾಗೂ ವಕೀಲೆ ದೀಪಾ ಜೋಸೆಫ್ ಕೂಡ ಪ್ರಿಯಾ ಕುಟುಂಬದೊಂದಿಗೆ ಇರಲಿದ್ದಾರೆ.
ಈ ಹಿಂದೆ ಪ್ರಿಯಾ ಬಿಡುಗಡೆಗಾಗಿ ಮೃತ ಯೆಮೆನ್ ಪ್ರಜೆಯ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸೇವ್ ನಿಮಿಷಾ ಪ್ರಿಯಾ ಎಂಬ ಸಂಘಟನೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ತಾನು ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿತ್ತು. ಈ ಆದೇಶದ ವಿರುದ್ಧದ ಮನವಿಯನ್ನೂ ಹೈಕೋರ್ಟ್ ನಂತರ ತಿರಸ್ಕರಿಸಿತ್ತು.