ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ. ಎಲ್ ನಾರಾಯಣಸ್ವಾಮಿ ನೇಮಕ

ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್ ಕೆ ವಂಟಿಗೋಡಿ ಅವರನ್ನು ಆಯೋಗದ ನ್ಯಾಯಾಂಗ ಸದಸ್ಯರನ್ನಾಗಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಟಿ ಶ್ಯಾಮ್‌ ಭಟ್ ಅವರನ್ನು ಆಡಳಿತಾತ್ಮಕ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
Justice L Narayana Swamy, Chairman, KSHRC
Justice L Narayana Swamy, Chairman, KSHRC

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ಹಿಮಾಚಲ ಪ್ರದೇಶ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್ ಕೆ ವಂಟಿಗೋಡಿ ಅವರನ್ನು ಆಯೋಗದ ನ್ಯಾಯಾಂಗ ಸದಸ್ಯರನ್ನಾಗಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಟಿ ಶ್ಯಾಮ್‌ ಭಟ್ ಅವರನ್ನು ಆಡಳಿತಾತ್ಮಕ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಶ್ಯಾಮ್‌ ಭಟ್‌ ಅವರು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ನೂತನ ಅಧ್ಯಕ್ಷರು ಹಾಗೂ ಸದಸ್ಯರು ಐದು ವರ್ಷ ಅಥವಾ 70 ವರ್ಷ ವಯಸ್ಸಾಗುವವರೆಗೆ ಈ ಎರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರವಧಿ ಹೊಂದಿರಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ 10 ತಿಂಗಳಿಂದ ಆಯೋಗದ ಅಧ್ಯಕ್ಷರ ಹುದ್ದೆ ಖಾಲಿ ಇತ್ತು. ಫೆಬ್ರವರಿಯಲ್ಲಿ ಸದಸ್ಯರಾಗಿದ್ದ ಕೆ ಬಿ ಚಂಗಪ್ಪ, ಆರ್ ಕೆ ದತ್ತಾ ನಿವೃತ್ತರಾಗಿದ್ದರು. ಮಾರ್ಚ್‌ನಲ್ಲಿ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಡಿ ಎಚ್ ವಘೇಲಾ ಅವರ ಅವಧಿ ಮುಗಿದಿತ್ತು.

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆಯೋಗಕ್ಕೆ ಹೊಸ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ನಂತರ ಪ್ರತಿಪಕ್ಷ ನಾಯಕನ ಆಯ್ಕೆ ಆಗದ ಹಿನ್ನೆಲೆಯಲ್ಲಿ ನೇಮಕಾತಿ ವಿಳಂಬವಾಗಿತ್ತು. ಇದೀಗ ಪೂರ್ಣ ಪ್ರಮಾಣದ ಆಯೋಗ ರಚನೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನ್ಯಾಯಮೂರ್ತಿ ಲಿಂಗಪ್ಪ ನಾರಾಯಣಸ್ವಾಮಿ 1987ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. 2009ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಸುದೀರ್ಘ 10 ವರ್ಷಗಳ ಕಾಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಅವರು 2019ರ ಜನವರಿ 17ರಿಂದ ಮೇ 9ರವರೆಗೆ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಬಳಿಕ 2019ರ ಅಕ್ಟೋಬರ್‌ 6ರಂದು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡು, 2021ರ ಜೂನ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು.

Related Stories

No stories found.
Kannada Bar & Bench
kannada.barandbench.com