
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮಂಗಳವಾರಕ್ಕೆ (ನವೆಂಬರ್ 26) ಐದು ವರ್ಷ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಅವರು ಈತನಕ ದಾಖಲೆಯ ಅಂದರೆ, 16 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
“ಹೈಕೋರ್ಟ್‌ನಲ್ಲಿ ಇತರೆ ನ್ಯಾಯಮೂರ್ತಿಗಳ ವಿಲೇವಾರಿ ಪ್ರಮಾಣ ವರ್ಷವೊಂದಕ್ಕೆ ಸರಾಸರಿ 750 ಅರ್ಜಿಗಳಷ್ಟಿದೆʼ ಎಂಬ ಅಂದಾಜಿದ್ದು, ಹಲವು ಮಹತ್ವದ ತೀರ್ಪುಗಳನ್ನು ನೀಡಿರುವ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ವಿಚಾರಣೆ ನಡೆಸಿ ಈತನಕ ಒಟ್ಟು 16,500 ಪ್ರಕರಣಗಳ ವಿಲೇವಾರಿ ಮಾಡಿದ್ದಾರೆ. ಇವುಗಳಲ್ಲಿ ವಿಭಾಗೀಯ ಪೀಠದಲ್ಲಿ ಭಾಗಿಯಾಗಿ ವಿಲೇವಾರಿ ಮಾಡಿದ ಪ್ರಕರಣಗಳನ್ನು ಹೊರತುಪಡಿಸಲಾಗಿದೆ ಎಂದು ಹೈಕೋರ್ಟ್ ಮೂಲಗಳು ತಿಳಿಸಿವೆ.
ನಾಗಪ್ರಸನ್ನ ಅವರು 1971ರ ಮಾರ್ಚ್ 23ರಂದು ಜನಿಸಿದ್ದು, 2019ರ ನವೆಂಬರ್ 26ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2021ರ ಸೆಪ್ಟಂಬರ್ 8ರಂದು ಕಾಯಂಗೊಂಡಿದ್ದಾರೆ.