
-
ನಿಯಮಿತ ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸಲ್ಲಿಸಿದ ದಿನದಿಂದ ಎರಡು ತಿಂಗಳೊಳಗೆ ತ್ವರಿತವಾಗಿ ಅವುಗಳನ್ನು ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಹೈಕೋರ್ಟ್ ಗಳು ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ [ಅಣ್ಣಾ ವಾಮನ್ ಭಲೇರಾವ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಆರೋಪಿಗಳು ಅನಿಶ್ಚಿತತೆಯಲ್ಲಿ ಸಿಲುಕಿರುವಾಗ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವರ್ಷಾನುಗಟ್ಟಲೆ ಬಾಕಿ ಇಡಲಾಗದು ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಅರ್ಹತೆ ಆಧಾರದ ಮೇಲೆ ತ್ವರಿತವಾಗಿ ನಿರ್ಧರಿಸಬೇಕು. ಕಕ್ಷಿದಾರರನ್ನು ಅನಿರ್ದಿಷ್ಟಾವಧಿ ಬಾಕಿ ಉಕಲಿಯುವ ಸ್ಥಿತಿಗೆ ದೂಡಬಾರದು ಎಂಬುದು ನ್ಯಾಯಾಲಯದ ಅನೇಕ ತೀರ್ಪುಗಳಿಂದ ಸ್ಪಷ್ಟವಾಗಿದೆ. ಅರ್ಜಿ ವಿಲೇವಾರಿಗೊಳಿಸದೆ ದೀರ್ಘಕಾಲ ವಿಳಂಬಗೊಳಿಸುವುದು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಉದ್ದೇಶವನ್ನು ನಿರಾಶೆಗೊಳಿಸುವುದಲ್ಲದೆ, ನ್ಯಾಯದ ನಿರಾಕರಣೆಗೆ ಸಮನಾಗಿದ್ದು ಸಂವಿಧಾನದ 14 ಮತ್ತು 21ನೇ ವಿಧಿಯಲ್ಲಿ ಹೇಳಲಾದ ನೀತಿಗೆ ವಿರುದ್ಧ ಎಂದು ನ್ಯಾಯಾಲಯ ಹೇಳಿದೆ.
ಅಂತೆಯೇ ನ್ಯಾಯಾಲಯ ಈ ಕೆಳಗಿನ ನಿರ್ದೇಶನ ನೀಡಿದೆ:
ಎ) ಕಕ್ಷಿದಾರರೇ ವಿಳಂಬ ಮಾಡದೆ ಇದ್ದಾಗ ಹೈಕೋರ್ಟ್ ಗಳು ಜಾಮೀನು ಮತ್ತು ಜಾಮೀನು ಅರ್ಜಿಗಳನ್ನು ಆದಷ್ಟೂ ಬೇಗನೆ ಎರಡು ತಿಂಗಳೊಳಗೆ ನಿರ್ಧರಿಸಬೇಕು.
ಬಿ) ಅನಿರ್ದಿಷ್ಟ ಮುಂದೂಡಿಕೆಗಳನ್ನು ತಪ್ಪಿಸುವುದಕ್ಕಾಗಿ ಅವು ಅಧೀನ ನ್ಯಾಯಾಲಯಗಳಿಗೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮೊದಲ ಆದ್ಯತೆಯ ಪ್ರಕರಣಗಳಾಗಿ ಇತ್ಯರ್ಥಗೊಳಿಸುವಂತೆ ಆಡಳಿತಾತ್ಮಕ ನಿರ್ದೇಶನ ನೀಡಬೇಕು.
ಸಿ) ಅನಗತ್ಯ ವಿಳಂಬವಾಗುತ್ತಿದೆ ಎಂಬ ಭಾವನೆ qqqqದೂರುದಾರರು ಅಥವಾ ಆರೋಪಿಗಳಲ್ಲಿ ಮೂಡದಂತೆ ತನಿಖಾ ಸಂಸ್ಥೆಗಳು ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ತನಿಖೆ ಮುಕ್ತಾಯಗೊಳಿಸಬೇಕು
ಡಿ ರಾಜ್ಯಗಳ ಅತ್ಯುನ್ನತ ಸಂವಿಧಾನಾತ್ಮಕ ಸಂಸ್ಥೆಯಾಗಿರುವ ಹೈಕೋರ್ಟ್ ಗಳು, ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳು ದೀರ್ಘಕಾಲ ಬಾಕಿ ಉಳಿಯದಂತೆ ಸೂಕ್ತ ವ್ಯವಸ್ಥೆ ಮತ್ತು ಪ್ರಕ್ರಿಯೆ ರೂಪಿಸಬೇಕು. ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಬಹುಕಾಲ ಇರಿಸಿಕೊಳ್ಳದೆ ಕೂಡಲೇ ನಿರ್ಧರಿಸಬೇಕು, ಏಕೆಂದರೆ ಈ ವಿಳಂಬ ನಾಗರಿಕರ ಮೂಲಭೂತ ಹಕ್ಕು – ಸ್ವಾತಂತ್ರ್ಯಕ್ಕೆ ಹಾನಿ ಉಂಟುಮಾಡುತ್ತದೆ.
ತನ್ನ ನಿರ್ದೇಶನಗಳನ್ನು ಕೂಡಲೇ ಪಾಲಿಸಿ ಆಡಳಿತಾತ್ಮಕ ಕ್ರಮ ಕೈಗೊಳ್ಳುವುದಕ್ಕಾಗಿ ಎಲ್ಲಾ ಹೈಕೋರ್ಟ್ ಗಳಿಗೆ ತೀರ್ಪಿನ ಪ್ರತಿ ಕಳಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಾಂಗ ವಿಭಾಗದ ರಿಜಿಸ್ಟ್ರಾರ್ ಅವರಿಗೆ ಪೀಠ ಆದೇಶಿಸಿತು.
ಸುಮಾರು ಆರು ವರ್ಷಗಳ ಕಾಲ 2019ರಿಂದ ಬಾಂಬೆ ಹೈಕೋರ್ಟಿನಲ್ಲಿ ಇಬ್ಬರು ನಿವೃತ್ತ ಕಂದಾಯ ಅಧಿಕಾರಿಗಳ ನಿರೀಕ್ಷಣಾ ಜಾಮೀನು ಅರ್ಜಿಗಳು ಬಾಕಿ ಉಳಿದಿದ್ದವು. ಜುಲೈ 2025 ರಲ್ಲಿ ಅವರ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ತ್ವರಿತ ವಿಚಾರಣೆಗೆ ನ್ಯಾಯಾಲಯ ಸೂಚಿಸಿತಾದರೂ ಪ್ರಸ್ತುತ ಪ್ರಕರಣದ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಅರ್ಜಿದಾರರಿಗೆ ಪರಿಹಾರ ನಿರಾಕರಿಸಿದ ಬಾಂಬೆ ಹೈಕೋರ್ಟ್ನ ತೀರ್ಪನ್ನು ಎತ್ತಿಹಿಡಿಯಿತು.