ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಗುಜರಾತ್ ಹೈಕೋರ್ಟ್‌ಗೆ ಹೆಚ್ಚುವರಿ ಸಾಕ್ಷ್ಯಗಳನ್ನು ಸಲ್ಲಿಸುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನಿರಾಕರಿಸಿದೆ.
ಸಾಕ್ಷಿಗಳ ಸಲ್ಲಿಕೆ ಕುರಿತು ಸುಪ್ರೀಂ ಕೋರ್ಟ್ ಮಾಡುವ ಯಾವುದೇ ಅವಲೋಕನಗಳು ಅಂತಿಮವಾಗಿ ಎರಡೂ ಕಡೆಯ ಪಕ್ಷಕಾರರ ಹಕ್ಕುಗಳ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ ಭಟ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಲು ಸುಪ್ರೀಂ ಕೋರ್ಟ್ ನ್ಯಾ. ಶಾ ನಿರಾಕರಿಸಿದ್ದಾರೆ.
ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್‌ಗೆ ಹೆಚ್ಚುವರಿ ಸಾಕ್ಷ್ಯಗಳನ್ನು ಸಲ್ಲಿಸಲು ಅನುಮತಿ ಕೋರಿ ಭಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಶಾ ಅವರು ವಿಚಾರಣೆ ನಡೆಸಬಾರದೆಂದು ಮನವಿ ಮಾಡಲಾಗಿತ್ತು. ಆದರೆ ಈ ಮನವಿಯನ್ನೂ ಪೀಠ ತಿರಸ್ಕರಿಸಿದೆ.
“ನಾವು ಪ್ರಕರಣದ ವಿಚಾರಣೆ ನಡೆಸುತ್ತಿರುವುದಕ್ಕೆ ಕಾರಣವೇನು ಎಂಬ ಅಂಶವನ್ನು ಒಳಗೊಂಡ ಆದೇಶ (ಸ್ಪೀಕಿಂಗ್ ಆರ್ಡರ್) ನೀಡಿದ್ದೇವೆ. ಮನವಿಯನ್ನು ನಿರಾಕರಿಸುತ್ತಿದ್ದೇವೆ” ಎಂದು ನ್ಯಾಯಾಲಯ ವಿವರಿಸಿದೆ.
ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ನ್ಯಾಯಮೂರ್ತಿ ಶಾ ಫೆಬ್ರವರಿಯಲ್ಲಿ ಹೇಳಿದ್ದರು. ಎರಡೂ ಕಡೆಯ ವಕೀಲರು ಪ್ರತಿ-ಅಫಿಡವಿಟ್‌ಗಳನ್ನು ಸಲ್ಲಿಸಲು ಸಮಯ ಕೋರಿದ್ದರಿಂದ ಪ್ರಕರಣವನ್ನು ಹಲವು ಬಾರಿ ಮುಂದೂಡಲಾಗಿತ್ತು.
ಆದರೆ, ನಿನ್ನೆಯ ವಿಚಾರಣೆ ವೇಳೆ ಈ ಕುರಿತು ಯಾವುದೇ ಔಪಚಾರಿಕ ಆದೇಶ ಹೊರಡಿಸಿಲ್ಲ ಎಂದು ತಿಳಿಸಿದ ಹಿರಿಯ ವಕೀಲ ದೇವದತ್ ಕಾಮತ್ “ನನಗೆ ಈ ನ್ಯಾಯಾಲಯದ ಬಗ್ಗೆ ಅತ್ಯಂತ ಗೌರವವಿದೆ. ನ್ಯಾಯದಾನ ಮಾಡಿದರಷ್ಟೇ ಸಾಲದು, ನ್ಯಾಯದಾನ ಮಾಡಿರುವುದು ಗೋಚರವಾಗುವಂತಿರಬೇಕು," ಎಂದಿದ್ದರು.
ಆದರೆ ನ್ಯಾ, ಶಾ ಅವರು “ನಾವು ಮನವಿಯನ್ನು ಈಗಾಗಲೇ ತಿರಸ್ಕರಿಸಿದ್ದೇವೆ, ಉಪನ್ಯಾಸ ನೀಡಬೇಡಿʼ ಎಂದು ಪ್ರತಿಕ್ರಿಯಿಸಿದ್ದರು.
ಇದೇ ಪ್ರಕರಣದ ಎಫ್‌ಐಆಆರ್‌ನಿಂದ ಉದ್ಭವಿಸಿದ ಇನ್ನೊಂದು ಪ್ರಕರಣದ ವಿಚಾರಣೆ ವೇಳೆ ನ್ಯಾ. ಶಾ ಅವರನ್ನೊಳಗೊಂಡ ಹೈಕೋರ್ಟ್ ಪೀಠ ಸಂಜೀವ್ ಭಟ್ ಅವರ ವಿರುದ್ಧ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಹೀಗಾಗಿ ಪ್ರಕರಣದಲ್ಲಿ ಪಕ್ಷಪಾತದ ಧೋರಣೆ ತಳೆಯಬಹುದು ಎಂಬ ಆತಂಕ ವ್ಯಕ್ತವಾಗಿದೆ ಎಂದರು.
ಗುಜರಾತ್ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್, ಮರುವಿಚಾರಣೆ ಅರ್ಜಿಯನ್ನು ವಿರೋಧಿಸಿದರು. ಭಟ್ ಅವರ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದೇ ಪೀಠ ವಿಚಾರಣೆ ನಡೆಸಿದೆ ಎಂದು ಅವರು ಸೂಚಿಸಿದರು. ಮೂಲ ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಆತ್ಮರಾಮ್ ನಾಡಕರ್ಣಿ, ಪಕ್ಷಪಾತದ ಪ್ರಶ್ನೆಯೇ ಇಲ್ಲ ಎಂದರು.
ಗುಜರಾತ್‌ನ ಜಾಮ್‌ನಗರ ಸೆಷನ್ಸ್ ನ್ಯಾಯಾಲಯ 1990 ರ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಯಾಗಿದ್ದ ಭಟ್ ಅವರನ್ನು 2019ರಲ್ಲಿ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 2011ರಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಲು ಅಂದಿನ ಹೈಕೋರ್ಟ್ ನ್ಯಾಯಮೂರ್ತಿ ಶಾ ನಿರಾಕರಿಸಿದ್ದರು.
ಈಗ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದು ತಾನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವಿಶೇಷ ಅನುಮತಿಯನ್ನು ಅದೇ ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದರೆ ನ್ಯಾಯ ದೊರೆಯುವುದಿಲ್ಲ ಎಂಬುದು ಭಟ್ ಅವರ ಆತಂಕವಾಗಿತ್ತು.
ಶಾ ಅವರು ಇದೇ ಪ್ರಕರಣದಲ್ಲಿ ನ್ಯಾಯಮೂರ್ತಿಯಾಗಿ ವಿಚಾರಣೆ ನಡೆಸಿದರೆ ಪಕ್ಷಪಾತ ಎಸಗಿದಂತಾಗುತ್ತದೆ ಎಂದು ಭಟ್ ಪರವಾಗಿ ಹಾಜರಾದ ಹಿರಿಯ ವಕೀಲ ದೇವದತ್ ಕಾಮತ್ ಅವರು ಜನವರಿಯಲ್ಲಿ, ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಭಟ್ ಅವರು ನರೇಂದ್ರ ಮೋದಿ ಸರ್ಕಾರದ ಕಟು ಟೀಕಾಕಾರರಾಗಿದ್ದರು. ಗುಜರಾತ್ ಗಲಭೆಯಲ್ಲಿ ಮೋದಿ ನೇತೃತ್ವದ ರಾಜ್ಯ ಸರ್ಕಾರ ಶಾಮೀಲಾಗಿತ್ತು ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲಾಗಿತ್ತು. ಸೇವೆಗೆ ಅನಧಿಕೃತವಾಗಿ ಗೈರುಹಾಜರಾದ ಕಾರಣಕ್ಕಾಗಿ 2015ರಲ್ಲಿ ಗೃಹ ಸಚಿವಾಲಯ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. 22 ವರ್ಷ ಹಳೆಯದಾದ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸದಂತೆಯೂ ಭಟ್ ಬಂಧನದಲ್ಲಿದ್ದಾರೆ.