ರಾಜ್ಯ ಪೊಲೀಸ್‌ ದೂರು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಹೈಕೋರ್ಟ್‌ ನಿವೃತ್ತ ನ್ಯಾ. ಸುಧೀಂದ್ರ ರಾವ್‌ ನೇಮಿಸಿದ ಸರ್ಕಾರ

ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದ ನ್ಯಾ. ರಾವ್.‌
Rtd Justice N K Sudhindra Rao
Rtd Justice N K Sudhindra Rao

ʼಭ್ರಷ್ಟಾಚಾರ ವಿರೋಧಿ ನ್ಯಾಯಮೂರ್ತಿʼ ಎಂದೇ ಪ್ರಸಿದ್ಧರಾಗಿದ್ದ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌ ಕೆ ಸುಧೀಂದ್ರ ರಾವ್‌ ಅವರನ್ನು ರಾಜ್ಯ ಪೊಲೀಸ್‌ ದೂರು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸೋಮವಾರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಪೊಲೀಸ್‌ ದೂರು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಸಿ ಆರ್‌ ಕುಮಾರಸ್ವಾಮಿ ಅವರ ಮೂರು ವರ್ಷಗಳ ಅವಧಿಯು 2022ರ ಜುಲೈ 18ರಂದು ಪೂರ್ಣಗೊಂಡಿದ್ದರಿಂದ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಈ ಸ್ಥಾನಕ್ಕೆ ನ್ಯಾ. ಸುಧೀಂದ್ರ ರಾವ್‌ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಪೊಲೀಸ್‌ ಕಾಯಿದೆ 1963ರ ಸೆಕ್ಷನ್‌ 20ಸಿ ಮತ್ತು 20ಡಿ ಅಡಿ ರಾಜ್ಯ ಸರ್ಕಾರವು ಪೊಲೀಸ್‌ ದೂರುಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್‌ ದೂರುಗಳ ಪ್ರಾಧಿಕಾರವನ್ನು ರಚಿಸಿದೆ.

ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಅಂದಿನ ಲೋಕಾಯುಕ್ತ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾಗಿದ್ದಾಗ ನಿವೃತ್ತ ನ್ಯಾ. ಸುಧೀಂದ್ರ ರಾವ್‌ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದರು.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಅಧಿಕಾರಿಗಳ ವಿರುದ್ಧ ದೂರು ಪರಿಶೀಲಿಸಿ, ಅಗತ್ಯ ಕ್ರಮ ಜರುಗಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚಿಸಲಾಗಿದೆ. ಆದರೆ, ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡುತ್ತಿಲ್ಲ. ಪ್ರಾಧಿಕಾರಕ್ಕೆ ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆಕ್ಷೇಪಿಸಿ ವಕೀಲೆ ಸುಧಾ ಕಟ್ವಾ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.

Kannada Bar & Bench
kannada.barandbench.com