ನ್ಯಾಯಮೂರ್ತಿ ನಾಗಪ್ರಸನ್ನ ಮತ್ತೊಂದು ಮೈಲಿಗಲ್ಲು; ವಕೀಲರ ಶ್ಲಾಘನೆ

ಬೆಳಗಿನ ಕಲಾಪದಲ್ಲಿ ಎಂದಿನಂತೆ ನಿಗದಿಯಾಗಿದ್ದ 318 ಅರ್ಜಿಗಳ ವಿಚಾರಣೆ ಪೂರೈಸಿದರು. ಭೋಜನ ಸಮಯದ ನಂತರ 2.30ಕ್ಕೆ ಆರಂಭಿಸಿದ ಕಲಾಪವನ್ನು ರಾತ್ರಿ 8.07ಕ್ಕೆ ಮುಕ್ತಾಯ ಗೊಳಿಸಿದರು.
Justice M Nagaprasanna and Karnataka HC
Justice M Nagaprasanna and Karnataka HC
Published on

ತುರ್ತು ವಿಚಾರಣೆಗೆ ಕೋರಿದ್ದ 250ಕ್ಕೂ ಹೆಚ್ಚು ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸುವ ಮೂಲಕ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಇದೇ ಮೊದಲ ಬಾರಿಗೆ ಹೈಕೋರ್ಟ್‌ ಕಲಾಪಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದರು.

ಬೆಳಿಗ್ಗೆ ಎಂದಿನ ಕಲಾಪದಲ್ಲಿ ತುರ್ತು ವಿಚಾರಣೆಗೆ ಕೋರಲಾದ 250ಕ್ಕೂ ಹೆಚ್ಚು ಮೆಮೊ ಸ್ವೀಕರಿಸಿ ಅವುಗಳನ್ನು ಮಧ್ಯಾಹ್ನದ ಕಲಾಪ ಪಟ್ಟಿಗೆ ಅಣಿಗೊಳಿಸುವಂತೆ ಆದೇಶಿಸಿದರು.

ಬೆಳಗಿನ ಕಲಾಪದಲ್ಲಿ ಎಂದಿನಂತೆ ನಿಗದಿಯಾಗಿದ್ದ 318 ಅರ್ಜಿಗಳ ವಿಚಾರಣೆ ಪೂರೈಸಿದರು. ಭೋಜನ ಸಮಯದ ನಂತರ 2.30ಕ್ಕೆ ಆರಂಭಿಸಿದ ಕಲಾಪವನ್ನು ರಾತ್ರಿ 8.07ಕ್ಕೆ ಮುಕ್ತಾಯ ಗೊಳಿಸಿದರು.

ಒಂದು ದಿನದ ಕಲಾಪದ ಅವಧಿಯಲ್ಲಿ ಒಟ್ಟು 534 ರಿಟ್‌ ಮತ್ತು ಕ್ರಿಮಿನಲ್‌ ಅರ್ಜಿಗಳ ವಿಚಾರಣೆ ಪೂರೈಸಿ ಅವುಗಳಲ್ಲಿ ಒಟ್ಟು 85 ಅರ್ಜಿಗಳನ್ನು ವಿಲೇವಾರಿ ಮಾಡಿದರು.

ವಿಚಾರಣೆಯಲ್ಲಿ ಕಿಕ್ಕಿರಿದ್ದ ಹಿರಿ-ಕಿರಿಯ ವಕೀಲರು "ನ್ಯಾಯಮೂರ್ತಿಗಳು ದಿನವೊಂದರಲ್ಲಿ 10 ಗಂಟೆಗಳ ನಿರಂತರ ಕಲಾಪ ನಡೆಸಿದ ಹೆಗ್ಗಳಿಕೆ ಹೊಂದುವ ಮೂಲಕ ದೇಶದ ಹೈಕೋರ್ಟ್ ಗಳ ಇತಿಹಾಸದಲ್ಲಿ ಹೊಸ ಹೆಜ್ಜೆ ಮೂಡಿಸಿದ್ದೀರಿ" ಎಂದು ನ್ಯಾ.ನಾಗಪ್ರಸನ್ನ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ನ್ಯಾ.ನಾಗಪ್ರಸನ್ನ ಅವರು ವಕೀಲ ವೃಂದದಿಂದ ನೇರವಾಗಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ 2019ರ ನವೆಂಬರ್‌ನಲ್ಲಿ ನೇಮಕಗೊಂಡ ನಂತರ ಪ್ರಕರಣಗಳ ವಿಲೇವಾರಿಯಲ್ಲಿ ವಿನೂತನ ದಾಖಲೆಗಳನ್ನು ನಿರ್ಮಿಸುತ್ತಿರುವುದು ಗಮನಾರ್ಹವಾಗಿದೆ.

Kannada Bar & Bench
kannada.barandbench.com