ಬ್ಯಾಸ್ಕೆಟ್‌ಬಾಲ್‌ ಒಕ್ಕೂಟದ ಆಡಳಿತಾಧಿಕಾರಿ ಆಗದಂತೆ ಬೌನ್ಸರ್‌ಗಳು ತಡೆ: ದೆಹಲಿ ಹೈಕೋರ್ಟ್‌ಗೆ ನ್ಯಾ. ಕೃಷ್ಣಭಟ್ ದೂರು

ಮೇ 2 ರಂದು ಆದೇಶ ಹೊರಡಿಸಿದ್ದ ಹೈಕೋರ್ಟ್, ನ್ಯಾ. ಭಟ್ ಅವರನ್ನು ಬಿಎಫ್ಐ ಆಡಳಿತಗಾರರನ್ನಾಗಿ ನೇಮಿಸಿ ಒಕ್ಕೂಟದ ಆಡಳಿತ ಮಂಡಳಿಗೆ ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶಿಸಿತ್ತು.
Justice P Krishna Bhat and Delhi High Court
Justice P Krishna Bhat and Delhi High Court

ಭಾರತೀಯ ಬ್ಯಾಸ್ಕೆಟ್‌ಬಾಲ್‌ ಒಕ್ಕೂಟದ (ಬಿಎಫ್‌ಐ) ಚುನಾವಣೆ ನಡೆಸುವುದಕ್ಕಾಗಿ ದೆಹಲಿ ಹೈಕೋರ್ಟ್‌ನಿಂದ ನೇಮಕಗೊಂಡಿದ್ದ ತಮ್ಮನ್ನು ಬೌನ್ಸರ್‌ಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ನೇಮಿಸುವ ಮೂಲಕ ಒಕ್ಕೂಟದ ಈ ಹಿಂದಿನ ಪದಾಧಿಕಾರಿಗಳು ಬಿಎಫ್‌ಐ ಕಚೇರಿ ಪ್ರವೇಶಿಸಿದಂತೆ ತಡೆಹಿಡಿಯುತ್ತಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ ಕೃಷ್ಣಭಟ್‌ ಅವರು ದೆಹಲಿ ಉಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ [ಆಡಳಿತಾಧಿಕಾರಿ ಮತ್ತು ಕೆ ಗೋವಿಂದರಾಜ್‌ ನಡುವಣ ಪ್ರಕರಣ].

ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವಂತೆ ಕೋರಿ ನ್ಯಾಯಮೂರ್ತಿ ಭಟ್ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

"ಮೇ 2, 2023 ರಂದು ನೀಡಿದ ಆದೇಶ ಪಾಲಿಸಬೇಕಿತ್ತು. ಪ್ರತಿವಾದಿಗಳಿಗೆ ನೋಟಿಸ್ ನೀಡಿ. ಜೂನ್ 1ರಂದು ನೋಟಿಸ್‌ಗೆ ಪ್ರತಿಕ್ರಿಯಿಸಬೇಕು" ಎಂದು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಸೂಚಿಸಿದ್ದಾರೆ.

Also Read
ಆರೋಪ ಗಂಭೀರ ಎಂದ ಸುಪ್ರೀಂ: ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧದ ಲೈಂಗಿಕ ಕಿರುಕುಳದ ದೂರು ಆಲಿಸಲು ಒಪ್ಪಿಗೆ

ಹೈಕೋರ್ಟ್‌ ಮೇ 2ರಂದು ಹೊರಡಿಸಿದ ಆದೇಶದನ್ವಯ ಆಡಳಿತಾಧಿಕಾರಿ ನ್ಯಾ. ಭಟ್‌ ಅವರು ಚೆಕ್ ಪುಸ್ತಕ, ಬ್ಯಾಂಕ್ ಪಾಸ್‌ಬುಕ್‌ ಸೇರಿದಂತೆ ಎಲ್ಲಾ ಕಚೇರಿ ದಾಖಲೆಗಳನ್ನು ಕೂಡಲೇ ತಮಗೆ ಸಲ್ಲಿಸುವಂತೆ ಪದಾಧಿಕಾರಿಗಳಿಗೆ ಆದೇಶಿಸಿದ್ದರು. ಪ್ರಕರಣ ಇತ್ಯರ್ಥವಾಗುವವರೆಗೆ ಬಿಎಫ್‌ಐ ಕಚೇರಿ ಯಾವುದೇ ಚೆಕ್‌ ನೀಡಬಾರದು ಅಥವಾ ತಮ್ಮ ಅನುಮತಿ ಇಲ್ಲದೇ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಕೂಡ ಅವರು ಸೂಚಿಸಿದ್ದರು ಎಂಬುದಾಗಿ ವಕೀಲ ಅಮನ್ ಹಿಂಗೋರನಿ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿದೆ.  

ಆದರೆ ನ್ಯಾಯಮೂರ್ತಿಗಳು ಬಿಎಫ್‌ಐ ಕಚೇರಿ ಪ್ರವೇಶಿಸಲು ಮುಂದಾದಾಗ ಒಕ್ಕೂಟದ ಈ ಹಿಂದಿನ ಪದಾಧಿಕಾರಿಗಳು ಭಾರಿ ಭದ್ರತೆ ಕಲ್ಪಿಸಿ, ಬೌನ್ಸರ್‌ಗಳನ್ನು ನಿಯೋಜಿಸಿದರು. ಆ ಮೂಲಕ ಕಚೇರಿ ಪ್ರವೇಶಿದಂತೆ ನಿರ್ಬಂಧ ಹೇರಲಾಯಿತು. ಯಾರನ್ನೂ ಕಚೇರಿಯ ಒಳಗೆ ಬಿಡುತ್ತಿರಲಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದರಿಂದಾಗಿ, ದೆಹಲಿ ಹೈಕೋರ್ಟ್‌ ಮೇ 2 ರಂದು ನೀಡಿದ್ದ ತೀರ್ಪಿನಂತೆ ಒಕ್ಕೂಟಕ್ಕೆ ಹೊಸದಾಗಿ ಚುನಾವಣೆ ನಡೆಸಲು ಕೂಡ ಅಡ್ಡಿ ಉಂಟಾಗಿದೆ ಎಂದು ಅರ್ಜಿಯಲ್ಲಿ  ದೂರಲಾಗಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನೇಮಿಸಿದ ಆಡಳಿತಾಧಿಕಾರಿ ಜೊತೆ  ಸಹಕರಿಸಬೇಕು ಎಂದು ಪದಾಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದ್ದು  ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಅವರಿಗೆ ನೋಟಿಸ್‌ ಜಾರಿ ಮಾಡಿದೆ.

Kannada Bar & Bench
kannada.barandbench.com