ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯಕಾರಿ ಅಧ್ಯಕ್ಷರಾಗಿ ಹೈಕೋರ್ಟ್ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷರಾಗಿದ್ದ ಹೈಕೋರ್ಟ್ ನ್ಯಾಯಮೂರ್ತಿ ಜಿ ನರೇಂದರ್ ಅವರು ಆಂಧ್ರ ಪ್ರದೇಶ ಹೈಕೋರ್ಟ್‌ಗೆ ಇತ್ತೀಚೆಗೆ ವರ್ಗಾವಣೆಯಾಗಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿಯಾಗಿರುವ ದಿನೇಶ್ ಕುಮಾರ್ ಅವರನ್ನು ರಾಜ್ಯಪಾಲರ ಥಾವರಚಂದ್ ಗೆಹ್ಲೋಟ್ ನಾಮನಿರ್ದೇಶನ ಮಾಡಿದ್ದಾರೆ. ಅದರಂತೆ ರಾಜ್ಯ ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ ಎಸ್ ಸಂಗ್ರೇಶಿ ಅವರು ನವೆಂಬರ್ 21ರಂದು ಅಧಿಸೂಚನೆ ಹೊರಡಿಸಿದ್ದಾರೆ. ಈ ಆದೇಶವು ನವೆಂಬರ್ 27ರಿಂದ ಜಾರಿಗೆ ಬರಲಿದೆ. ನ್ಯಾ. ದಿನೇಶ್ ಕುಮಾರ್ ಅವರು ಪ್ರಾಧಿಕಾರದ 15ನೇ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ.
1962 ರ ಫೆಬ್ರವರಿ 25ರಂದು ಜನಿಸಿರುವ ನ್ಯಾ. ದಿನೇಶ್ ಕುಮಾರ್ ಅವರು ನ್ಯಾಷನಲ್ ಹೈಸ್ಕೂಲ್, ನ್ಯಾಷನಲ್ ಕಾಲೇಜು ಮತ್ತು ಬಿಎಂಎಸ್ ಕಾಲೇಜುಗಳಲ್ಲಿ ಅಧ್ಯಯನ ಮಾಡಿದ್ದಾರೆ. 1990ರಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ಚೇಂಬರ್‌ನಲ್ಲಿ ಪ್ರಾಕ್ಟೀಸ್ ಆರಂಭಿಸಿದ ನ್ಯಾ. ದಿನೇಶ್ ಕುಮಾರ್ ಅವರು 1998ರಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಟ್ಯಾಂಡಿಂಗ್ ಕೌನ್ಸೆಲ್ ಆಗಿ ನೇಮಕವಾಗಿದ್ದರು. ಬಳಿಕ 2003ರಲ್ಲಿ ಹಿರಿಯ ಸ್ಟ್ಯಾಂಡಿಂಗ್ ಕೌನ್ಸೆಲ್ ಆಗಿ ನೇಮಕಗೊಂಡಿದ್ದರು.
ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 02.01.2015 ರಂದು ನೇಮಕಗೊಂಡಿದ್ದ ನ್ಯಾ. ದಿನೇಶ್ ಕುಮಾರ್ ಅವರು 30.12.2016ರಂದು ಕಾಯಂಗೊಂಡಿದ್ದಾರೆ.