ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ಅವರಿಂದ ಪ್ರಮಾಣ ವಚನ ಸ್ವೀಕಾರ

ಅತ್ಯಂತ ಕಿರು ಅವಧಿಯ ಸಿಜೆ ಪಟ್ಟಿಯಲ್ಲಿ ನ್ಯಾ. ದಿನೇಶ್‌ ಕುಮಾರ್‌ ಅವರಿಗೆ ಎರಡನೇ ಸ್ಥಾನ ಇರಲಿದ್ದು, ನ್ಯಾ. ಎಸ್‌ ಎ ಹಕೀಮ್‌ ಅವರಿಗೆ ಮೊದಲ ಸ್ಥಾನವಿದೆ . ಮೂರನೇ ಸ್ಥಾನದಲ್ಲಿ ನ್ಯಾ. ಸೋಮನಾಥ್‌ ಅಯ್ಯರ್‌ ಅವರ ಹೆಸರಿದೆ.
ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ಅವರಿಂದ ಪ್ರಮಾಣ ವಚನ ಸ್ವೀಕಾರ
Published on

ಕರ್ನಾಟಕ ಹೈಕೋರ್ಟ್‌ನ 33ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ನ್ಯಾ. ದಿನೇಶ್‌ ಕುಮಾರ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನ್ಯಾ. ದಿನೇಶ್‌ ಕುಮಾರ್‌ ಅವರು ಫೆಬ್ರವರಿ 24ರಂದು ನಿವೃತ್ತರಾಗಲಿದ್ದು, ಮುಂದಿನ 21 ದಿನಗಳ ಕಾಲ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿರಲಿದ್ದಾರೆ. ಕರ್ನಾಟಕ ಹೈಕೋರ್ಟ್‌ ಇತಿಹಾಸದಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿ ಅತ್ಯಂತ ಕಿರು ಅವಧಿ ಹೊಂದಿರುವವರ ಪಟ್ಟಿಯಲ್ಲಿ ನ್ಯಾ. ದಿನೇಶ್‌ ಕುಮಾರ್‌ ಅವರಿಗೆ ಎರಡನೇ ಸ್ಥಾನ ಇರಲಿದೆ.

ಹೈಕೋರ್ಟ್‌ನ 17ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌ ಎ ಹಕೀಮ್‌ ಅವರು ಕೇವಲ ಆರು ದಿನಗಳು ಮಾತ್ರ ಸಿಜೆ ಆಗಿದ್ದರು. ಈ ಮೂಲಕ ಅತ್ಯಂತ ಕಡಿಮೆ ಅವಧಿಯ ಸಿಜೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನ್ಯಾ ಹಕೀಮ್‌ ಅವರು 03.05.1996 ರಿಂದ 09.05.1996ರವರೆಗೆ ಕರ್ನಾಟಕ ಹೈಕೋರ್ಟ್‌ ಸಿಜೆಯಾಗಿದ್ದರು.

Also Read
ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪಿ ಎಸ್‌ ದಿನೇಶ್‌ ಕುಮಾರ್‌ ನೇಮಕ

ಇನ್ನು ಅತ್ಯಂತ ಕಿರು ಅವಧಿಯ ಸಿಜೆ ಪಟ್ಟಿಯಲ್ಲಿ ಕರ್ನಾಟಕ ಹೈಕೋರ್ಟ್‌ನ 4ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ ಆರ್‌ ಸೋಮನಾಥ್‌ ಐಯ್ಯರ್‌ ಅವರ ಹೆಸರಿದೆ. 23.11.1969 ರಿಂದ 29.12.1969ರ ಅವಧಿಗೆ ಸಿಜೆಯಾಗಿದ್ದ ನ್ಯಾ. ಐಯ್ಯರ್‌ ಅವರು ಒಟ್ಟು 36 ದಿನಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

Kannada Bar & Bench
kannada.barandbench.com