ವಿವಾದಾತ್ಮಕ ಪೊಕ್ಸೊ ತೀರ್ಪು: ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮುಂದುವರೆದ ನ್ಯಾ. ಪುಷ್ಪಾ ಗನೇದಿವಾಲಾ; ಪ್ರಮಾಣ ಬೋಧನೆ

ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಹಿರಿಯ ನ್ಯಾ. ನಿತಿನ್‌ ಜಾಮ್ದಾರ್‌ ಅವರು ನ್ಯಾ. ಗನೇದಿವಾಲಾಗೆ ಪ್ರಮಾಣ ವಚನ ಬೋಧಿಸಿದರು. ವರ್ಚುವಲ್‌ ವ್ಯವಸ್ಥೆಯ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಂಕರ್‌‌ ದತ್ತ ಭಾಗವಹಿಸಿದ್ದರು.
Chief Justice Dipankar Datta, Justice Pushpa V. Ganediwala
Chief Justice Dipankar Datta, Justice Pushpa V. Ganediwala

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೊಕ್ಸೊ) ಅಡಿ ಅಪರಾಧಿಗಳಾದವರನ್ನು ಖುಲಾಸೆಗಳಿಸಿದ್ದ ವಿವಾದಾತ್ಮಕ ತೀರ್ಪುಗಳನ್ನು ನೀಡಿದ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಪುಷ್ಪಾ ವಿ ಗನೇದಿವಾಲಾ ಅವರು ಮತ್ತೊಂದು ವರ್ಷ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಶನಿವಾರ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಯೂಟ್ಯೂಬ್‌ ಮೂಲಕ ನೇರಪ್ರಸಾರ ಮಾಡಲಾಗಿತ್ತು. ವರ್ಚುವಲ್‌ ವ್ಯವಸ್ಥೆಯ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಭಾಗವಹಿಸಿದ್ದರು. ಹಿರಿಯ ನ್ಯಾಯಮೂರ್ತಿಯಾದ ನಿತಿನ್‌ ಜಾಮ್ದಾರ್‌ ಅವರು ನ್ಯಾ. ಗನೇದಿವಾಲಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ನ್ಯಾ. ಪುಷ್ಪಾ ಅವರನ್ನು ಖಾಯಂ ನ್ಯಾಯಮೂರ್ತಿಯನ್ನಾಗಿಸುವ ಸಂಬಂಧ ಸುಪ್ರೀಂ ಕೋರ್ಟ್‌ ಕೊಲಿಜಿಯಂನ ಪುನರ್‌ ಪರಿಶೀಲಿಸಿದ್ದ ನಿರ್ಧಾರಕ್ಕೆ ಕೇಂದ್ರ ಕಾನೂನು ಇಲಾಖೆ ಸಮ್ಮತಿಸಿದೆ. ಕಾನೂನು ಇಲಾಖೆಯು ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ನ್ಯಾ. ಪುಷ್ಪಾ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.

“ಸಂವಿಧಾನದ 224ನೇ ವಿಧಿಯ ಅನುಚ್ಛೇದ (1) ರ ಪ್ರಕಾರ ಅಧಿಕಾರ ಚಲಾಯಿಸಿ ರಾಷ್ಟ್ರಪತಿಗಳು 2021ರ ಫೆಬ್ರುವರಿ 13ರಿಂದ ಅನ್ವಯವಾಗುವಂತೆ ಮುಂದಿನ ಒಂದು ವರ್ಷದವರೆಗೆ ಶ್ರೀಮತಿ ಪುಷ್ಪಾ ಗನೇದಿವಾಲಾ ಅವರನ್ನು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಿಸಿದ್ದಾರೆ” ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಸುಪ್ರೀಂ ಕೋರ್ಟ್‌ ಹಿಂದೆ ನ್ಯಾ. ಪುಷ್ಪಾ ಅವರನ್ನು ಕಾಯಂಗೊಳಿಸುವ ಸಂಬಂಧ ಶಿಫಾರಸ್ಸು ಮಾಡಿತ್ತು. ನ್ಯಾ. ಪುಷ್ಪಾ ಅವರು ಬರೆದ ವಿವಾದಾತ್ಮಕ ತೀರ್ಪುಗಳು ಸಾರ್ವಜನಿಕಗೊಂಡ ಬಳಿಕ ಆ ಶಿಫಾರಸ್ಸನ್ನು ಹಿಂಪಡೆಯಲಾಗಿತ್ತು. ನ್ಯಾ. ಪುಷ್ಪಾ ಅವರು ಒಂದೇ ವಾರದಲ್ಲಿ ಪೋಕ್ಸೊ ಕಾಯಿದೆಯಡಿ ಮೂರು ಪ್ರತ್ಯೇಕ ಪ್ರಕರಣಗಳನ್ನು ನಿರ್ದೋಷಿಗಳು ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಜನವರಿ 20ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅವರನ್ನು ಕಾಯಂ ನ್ಯಾಯಮೂರ್ತಿಯನ್ನಾಗಿಸುವ ಶಿಫಾರಸ್ಸನ್ನು ಹಿಂಪಡೆದಿತ್ತು.

Also Read
[ಪೋಕ್ಸೊ ಖುಲಾಸೆಗಳು] ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಕಾಯಂಗೊಳಿಸುವ ಶಿಫಾರಸು ಹಿಂಪಡೆದ ಸುಪ್ರೀಂ ಕೋರ್ಟ್‌ ಕೊಲಿಜಿಯಂ

ಅತ್ಯಾಚಾರವಾಗಿದೆ ಎಂಬ ಪ್ರಾಸಿಕ್ಯೂಷನ್‌ ಆರೋಪವನ್ನು ಬೆಂಬಲಿಸುವ ಯಾವುದೇ ಆಧಾರಗಳು ಇಲ್ಲ ಎಂದು ಜನವರಿ 14ರಂದು ಅಪರಾಧಿಯನ್ನು ನ್ಯಾ. ಗನೇದಿವಾಲಾ ಖುಲಾಸೆಗೊಳಿಸಿದ್ದರು (ಜೋಗೇಶ್ವರ್‌ ವಾಸುದಿಯೋ ಕಾವ್ಲೆ ವರ್ಸಸ್‌ ಮಹಾರಾಷ್ಟ್ರ ರಾಜ್ಯ). ಅಪ್ರಾಪ್ತೆಯ ಕೈಹಿಡಿದಿರುವುದು ಅಥವಾ ನಿರ್ದಿಷ್ಟ ಸಮಯದಲ್ಲಿ ಆರೋಪಿಯು ಪ್ಯಾಂಟ್‌ ಜಿಪ್‌ ತೆರೆದುಕೊಂಡಿರುವುದು ಪೋಕ್ಸೊ ಕಾಯಿದೆ ಸೆಕ್ಷನ್‌ 7ರ ಅಡಿ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ಜನವರಿ 15ರ ಆದೇಶದಲ್ಲಿ ನ್ಯಾ. ಗನೇದಿವಾಲಾ ತಿಳಿಸಿದ್ದರು (ಲಿಬ್ನುಸ್‌ ವರ್ಸಸ್‌ ಮಹಾರಾಷ್ಟ್ರ ರಾಜ್ಯ). 12 ವರ್ಷದ ಅಪ್ರಾಪ್ತೆಯ ಮೇಲುಡುಪು ತೆರೆಯದೇ ಸ್ತನ ಒತ್ತುವುದು ಪೋಕ್ಸೊ ಕಾಯಿದೆಯ ಸೆಕ್ಷನ್‌ 7ರ ಅಡಿ ಲೈಂಗಿನ ದೌರ್ಜನ್ಯವಲ್ಲ ಎಂದು ಜನವರಿ 19ರಂದು ಮೂರನೇ ತೀರ್ಪು ಹೊರಡಿಸಿದ್ದರು (ಸತೀಶ್‌ ರಾಗ್ಡೆ ವರ್ಸಸ್‌ ಮಹಾರಾಷ್ಟ್ರ ರಾಜ್ಯ).

ಮೂರನೇ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದ್ದು, ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅದನ್ನು ಉಲ್ಲೇಖಿಸಿದ್ದರಿಂದ ಆ ತೀರ್ಪಿಗೆ ತಡೆಯಾಜ್ಞೆ ನೀಡಲಾಗಿದೆ. ಮೂರನೇ ಪ್ರಕರಣದಲ್ಲಿ ತೀರ್ಪು ಹೊರಬಿದ್ದ ದಿನವೇ, ಅದಿನ್ನೂ ಸಾರ್ವಜನಿಕವಾಗಿಲ್ಲದ ಸಂದರ್ಭದಲ್ಲಿ ನ್ಯಾಯಮೂರ್ತಿ ಗನೇದಿವಾಲಾ ಅವರನ್ನು ಕಾಯಂ ನ್ಯಾಯಮೂರ್ತಿಯನ್ನಾಗಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.

2019ರ ಫೆಬ್ರುವರಿ 8ರಂದು ನ್ಯಾಯಮೂರ್ತಿ ಗನೇದಿವಾಲಾ ಅವರನ್ನು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿತ್ತು. 2007ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಅವರು ನ್ಯಾಯಾಂಗ ಸೇವೆ ಆರಂಭಿಸಿದ್ದರು. ಮುಂಬೈ ಸಿಟಿ ಸಿವಿಲ್‌ ನ್ಯಾಯಮೂರ್ತಿ; ನಾಗಪುರದ ಜಿಲ್ಲಾ ಮತ್ತು ಕೌಟುಂಬಿಕ ನ್ಯಾಯಾಲಯ; ಮಹಾರಾಷ್ಟ್ರ ನ್ಯಾಯಿಕ ಅಕಾಡೆಮಿಯ ಜಂಟಿ ನಿರ್ದೇಶಕರು; ನಾಗಪುರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು; ಬಾಂಬೆ ಹೈಕೋರ್ಟ್‌ ಜುಡಿಕೇಚರ್‌ನ ರಿಜಿಸ್ಟ್ರಾರ್‌ ಜನರಲ್‌ ಮತ್ತು ಮುಂಬೈ ಸಿಟಿ ಸಿವಿಲ್‌ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com