ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ವಿದ್ಯುತ್‌ಶಕ್ತಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಜೂನ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಚೆನ್ನೈ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.
ಸಚಿವ ಬಾಲಾಜಿ ತಾವು ದಾಖಲಾಗಿರುವ ಆಸತ್ರೆಯಲ್ಲಿ ಪಡೆಯುತ್ತಿರುವ ವೈದ್ಯಕೀಯ ಚಿಕಿತ್ಸೆ ಮುಂದುವರೆಸುವಂತೆ ಚೆನ್ನೈನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎಸ್ ಅಳ್ಳಿ ಅವರು ಸಚಿವರಿಗೆ ಅನುಮತಿಸಿದ್ದಾರೆ. ಉದ್ಯೋಗ ನೇಮಕಾತಿಗಾಗಿ ಲಂಚ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಬಾಲಾಜಿ ಅವರನ್ನು ಇ ಡಿ ಬಂಧಿಸಿತ್ತು. ಬಂಧನದ ಬಳಿಕ ಸಚಿವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಕರೋನರಿ ಆಂಜಿಯೋಗ್ರಾಮ್ ಮಾಡಲಾಯಿತು.
ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯನ್ನು ನಿರ್ಧರಿಸುವುದಕ್ಕೂ ಮುನ್ನ ನ್ಯಾಯಾಧೀಶರು ಮಧ್ಯಾಹ್ನ 3.45ರ ಸುಮಾರಿಗೆ ಆಸ್ಪತ್ರೆಗೆ ಭೇಟಿ ನೀಡಿ ಬಾಲಾಜಿ ಅವರ ಆರೋಗ್ಯ ಸ್ಥಿತಿ ಪರಿಶೀಲಿಸಿದರು. ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಬಾಲಾಜಿ ಅವರನ್ನು ಜೂನ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಜೊತೆಗೆ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಅನುಮತಿ ನೀಡಿದರು.
ಬಾಲಾಜಿ ಪರ ಹಿರಿಯ ವಕೀಲ ಎನ್ ಆರ್ ಇಳಂಗೋ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ಆದೇಶವನ್ನೂ ನ್ಯಾಯಾಧೀಶರು ಕಾಯ್ದಿರಿಸಿದ್ದಾರೆ.
ಇದಕ್ಕೂ ಮುನ್ನ ನಡೆದ ಬೆಳವಣಿಗೆಯೊಂದರಲ್ಲಿ ಬಾಲಾಜಿ ಅವರ ಬಂಧನ ಪ್ರಶ್ನಿಸಿ ಅವರ ಪತ್ನಿ ಎಸ್ ಮೇಗಲಾ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯಿಂದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆರ್ ಶಕ್ತಿವೇಲ್ ಹಿಂದೆ ಸರಿದರು.
ಪ್ರಕರಣದ ವಿಚಾರಣೆಗೆ ಕೆಲವು ತೊಡಕುಗಳು ಇದ್ದು ಹೀಗಾಗಿ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ನ್ಯಾ ಆರ್ ಶಕ್ತಿವೇಲ್ ಅವರು ತಿಳಿಸಿರುವುದಾಗಿ ನ್ಯಾ. ಎಂ ಸುಂದರ್ ಹಾಗೂ ಶಕ್ತಿವೇಲ್ ಅವರಿದ್ದ ವಿಭಾಗೀಯ ಪೀಠ ಇಂದು ಪ್ರಕರಣದ ವಿಚಾರಣೆ ವೇಳೆ ತಿಳಿಸಿತು.
ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಪೀಠದೆದುರು ಹಿರಿಯ ವಕೀಲ ಎನ್ ಆರ್ ಇಳಂಗೋ ಅರ್ಜಿ ಸಲ್ಲಿಸಿದ್ದರು. ಆಗ ಕೇಸ್ ಸಂಖ್ಯೆ ನಮೂದಾದ ಬಳಿಕ ಮಧ್ಯಾಹ್ನ 1.30ಕ್ಕೆ ಪ್ರಕರಣವನ್ನು ಉಲ್ಲೇಖಿಸುವಂತೆ ನ್ಯಾಯಾಲಯ ಸೂಚಿಸಿತ್ತು.
ಪೀಠ ಮಧ್ಯಾಹ್ನ ಪುನರಾರಂಭಗೊಂಡಾಗ ಇಳಂಗೋ ಅವರು ʼಪ್ರಕರಣದ ಸಂಖ್ಯೆ ಇನ್ನಷ್ಟೇ ನಮೂದಾಗಬೇಕಿದೆ. ಈ ಕುರಿತ ಪ್ರಕ್ರಿಯೆಗೆ ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರವಾಲಾ ಅವರನ್ನು ಕೋರಲಾಗಿದೆ ಎಂದು ಹೇಳಿದರು.
ಸ್ಥಾಯಿ ನಿರ್ದೇಶನಗಳ ಅನ್ವಯ, ಪ್ರಕರಣವನ್ನು ಈಗ ನ್ಯಾಯಮೂರ್ತಿಗಳಾದ ಜೆ ನಿಶಾ ಬಾನು ಮತ್ತು ಡಿ ಭರತ ಚಕ್ರವರ್ತಿ ಅವರಿರುವ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುತ್ತದೆ.