ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರನ್ನು ಸಶಸ್ತ್ರ ಪಡೆಗಳ ನ್ಯಾಯಾಧಿಕರಣದ ಅಧ್ಯಕ್ಷರನ್ನಾಗಿ ನಾಲ್ಕು ವರ್ಷಗಳ ಅವಧಿಗೆ ಮರು ನೇಮಕ ಮಾಡಲಾಗಿದೆ.
ನ್ಯಾ. ಮೆನನ್ ಅವರಿಗೆ 2027ರ ಜೂನ್ 6ಕ್ಕೆ 70 ವರ್ಷ ತುಂಬಲಿದ್ದು, ಅಲ್ಲಿಯವರೆಗೆ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 2019ರಲ್ಲಿ ಮೊದಲ ಬಾರಿಗೆ ನ್ಯಾ. ಮೆನನ್ ಅವರ ಹೆಸರು ಶಿಫಾರಸ್ಸು ಮಾಡಲಾಗಿದ್ದು, ಅವರು ನಾಲ್ಕು ವರ್ಷ ಕರ್ತವ್ಯ ನಿರ್ವಹಿಸಿದ್ದರು.
2002ರ ಏಪ್ರಿಲ್ 1ರಂದು ಮಧ್ಯಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದ ನ್ಯಾ. ಮೆನನ್ ಅವರು 2003ರ ಮಾರ್ಚ್ 21ರಂದು ಕಾಯಂಗೊಂಡಿದ್ದರು. ನ್ಯಾ. ಮೆನನ್ ಅವರು ಭೋಪಾಲ್ ಅನಿಲ ದುರಂತದಿಂದ ಸಂತ್ರಸ್ತರಾದವರಿಗೆ ಪರಿಹಾರ ಕಲ್ಪಿಸುವ ಸಮಿತಿಯ ಕಲ್ಯಾಣ ಆಯುಕ್ತರಾಗಿಯೂ 2010ರ ಡಿಸೆಂಬರ್‌ನಿಂದ 2015ರ ಮಾರ್ಚ್‌ವರೆಗೆ ಕೆಲಸ ನಿರ್ವಹಿಸಿದ್ದಾರೆ. 2017ರ ಮಾರ್ಚ್ 15ರಂದು ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದ ನ್ಯಾ, ಮೆನನ್ ಅವರು ಆನಂತರ ದೆಹಲಿ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದರು.
2018ರ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಮೆನನ್ ಅವರು 2019ರ ಮೇನಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.