ಬಿಬಿಸಿ ಸಾಕ್ಷ್ಯಚಿತ್ರದ ಮೇಲಿನ ನಿಷೇಧ, ಐಟಿ ದಾಳಿ ಖಂಡಿಸಿದ ನಿವೃತ್ತ ನ್ಯಾ. ರೋಹಿಂಟನ್‌ ನಾರಿಮನ್‌

“ನಿಷೇಧವೇ ದುರದೃಷ್ಟಕರ. ಆನಂತರ ಬಿಬಿಸಿ ಕಚೇರಿಯ ಮೇಲಿನ ದುರುದ್ದೇಶಪೂರಿತವಾದ ಆದಾಯ ತೆರಿಗೆ ಇಲಾಖೆಯ ದಾಳಿಯು ಮತ್ತಷ್ಟು ದುರದೃಷ್ಟಕರ” ಎಂದು ನ್ಯಾ. ನಾರಿಮನ್‌ ಹೇಳಿದ್ದಾರೆ.
Justice RF Nariman , BBC Documentary
Justice RF Nariman , BBC Documentary

ಎರಡು ದಶಕಗಳ ಹಿಂದಿನ ಗುಜರಾತ್‌ ಗಲಭೆ ಕುರಿತು ಬಿಬಿಸಿ ವಾಹಿನಿಯು ರೂಪಿಸಿದ್ದ “ಇಂಡಿಯಾ: ದ ಮೋದಿ ಕ್ವಶ್ಚೆನ್”‌ ಹೆಸರಿನ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌ ಅವರು ಕಟುವಾಗಿ ಟೀಕಿಸಿದ್ದಾರೆ.

ಅಹಮದಾಬಾದ್‌ನ ನವಜೀವನ್‌ ಟ್ರಸ್ಟ್‌ ವತಿಯಿಂದ ಜಿತೇಂದ್ರ ದೇಸಾಯಿ ಸ್ಮಾರಕದ ಭಾಗವಾಗಿ ಆಯೋಜಿಸಿದ್ದ “ವಾಕ್‌ ಸ್ವಾತಂತ್ರ್ಯ: ಸಮಕಾಲೀನ ಸವಾಲುಗಳು” ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

“ಈಚೆಗೆ ನಮ್ಮ ಗಮನ ಸೆಳೆದಿರುವ ಬಿಬಿಸಿಯ ಎರಡು ಸಾಕ್ಷ್ಯಚಿತ್ರಗಳನ್ನು ಉಲ್ಲೇಖಿಸುತ್ತಿದ್ದೇನೆ. ಹಾಲಿ ಪ್ರಧಾನ ಮಂತ್ರಿ ಅಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅವರು ಏನು ಮಾಡಿದರು ಮತ್ತು ಏನು ಮಾಡಿಲ್ಲ ಎಂಬುದರ ಬಗ್ಗೆ ಮೊದಲ ಸಾಕ್ಷ್ಯಚಿತ್ರವಿದೆ. ಎರಡನೇ ಸಾಕ್ಷ್ಯಚಿತ್ರದಲ್ಲಿ ಪ್ರಧಾನ ಮಂತ್ರಿಯಾಗಿ ಇಂದು ದೇಶ ಮುನ್ನಡೆಸುತ್ತಿರುವವರು ಮತ್ತು ಅವರ 'ವಿಭಜನಕಾರಿ ರಾಜಕೀಯ'ವನ್ನು ಬಿಬಿಸಿ ತೋರಿದ್ದು, ಇದರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ, ಜನರನ್ನು ಕೊಲ್ಲುತ್ತಿರುವ ಗೋರಕ್ಷಕರು ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ” ಎಂದು ವಿವರಿಸಿದರು.

“ಅಂತರ್ಜಾಲದಲ್ಲಿ ಹಲವು ಹಾದಿಗಳಿರುವುದರಿಂದ, ಈ ಎರಡೂ ಸಾಕ್ಷ್ಯಚಿತ್ರಗಳನ್ನು ನಿಷೇಧಿಸಿದ ಬಳಿಕ ಅದನ್ನು ಹೆಚ್ಚು ಜನರು ವೀಕ್ಷಿಸುವಂತಾಗಿದೆ. ಇಂಟರ್‌ನೆಟ್‌ ಎನ್ನುವುದು ಬಹುತಲೆಯ ಹಾವಿದ್ದಂತೆ, ನೀವು ಯೂಟ್ಯೂಬ್‌, ಎಕ್ಸ್‌ ಅಥವಾ ವೈನಲ್ಲಿ ನಿಷೇಧಿಸಲಾಗಿದೆ ಎಂದು ಹೇಳಬಹುದು. ಆದರೆ, ಮತ್ತೊಂದು ಕಡೆ ಅದು ತಲೆ ಎತ್ತಲಿದ್ದು, ಮತ್ತೊಂದು ವೆಬ್‌ಸೈಟ್‌ನಲ್ಲಿ ಯಾರಾದರೊಬ್ಬರು ಬಿಬಿಸಿ ಸಾಕ್ಷ್ಯಚಿತ್ರವನ್ನು ಒದಗಿಸುತ್ತಾರೆ. ಇದೊಂದು ನಿರರ್ಥಕ ನಿಷೇಧ” ಎಂದಿದ್ದಾರೆ.

“ನಿಷೇಧವೇ ದುರದೃಷ್ಟಕರ. ಆನಂತರ ಬಿಬಿಸಿ ಕಚೇರಿಯ ಮೇಲಿನ ದುರುದ್ದೇಶಪೂರಿತವಾದ ಆದಾಯ ತೆರಿಗೆ ಇಲಾಖೆಯ ದಾಳಿಯು ಮತ್ತಷ್ಟು ದುರದೃಷ್ಟಕರ. ಜಾರಿ ನಿರ್ದೇಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯನ್ನು ದುರುದ್ದೇಶಪೂರಿತವಾಗಿ ನಿಯೋಜಿಸುವುದು ವಾಕ್‌ ಸ್ವಾತಂತ್ರ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ” ಎಂದು ನ್ಯಾ. ನಾರಿಮನ್‌ ಹೇಳಿದ್ದಾರೆ.

“ನಮ್ಮ ನಡುವೆ ಇಲ್ಲದಿರುವ ನನ್ನ ಆತ್ಮೀಯ ಗೆಳೆಯ ಅರುಣ್‌ ಜೇಟ್ಲಿ ಅವರು ಯಾವುದರ ಪರವಾಗಿಯಾದರೂ ನಿಂತಿದ್ದರೆ ಅದು ವಾಕ್‌ ಸ್ವಾತಂತ್ರ್ಯದ ಪರ. ಏಕೆಂದರೆ ಅದರಿಂದ ಅವರು ಹಾನಿ ಅನುಭವಿಸಿದ್ದರು. ಈ ಇತರ ಮಹನೀಯರಂತಲ್ಲದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಹತ್ತೊಂಬತ್ತು ತಿಂಗಳು ಜೈಲಿನಲ್ಲಿದ್ದರು” ಎಂದು ನೆನಪಿಸಿದರು.

“ಇಂದು ಏನು ಮಾಡಲಾಗುತ್ತಿದೆಯೇ ಅಂದು ಅದನ್ನು ಮಾಡಲಾಗಿತ್ತು. ಇಂದು ಹೆಸರು ಹೇಳಬಲ್ಲ ಯಾವುದೇ ಪ್ರತಿಪಕ್ಷ ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದ್ದು, ಹಿಂದೆ ಟೀಕಿಸುತ್ತಿದ್ದ ರೀತಿಯಲ್ಲಿ ಸರ್ಕಾರವನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮ ಟೀಕಿಸುತ್ತಿಲ್ಲ. ಇವು ಎಲ್ಲರಿಗೂ ಗೊತ್ತಿರುವ ವಿಚಾರಗಳು. ಬಹಿರಂಗವಾಗಿ ಹೇಳದಿದ್ದರೂ ಇವು ವಾಸ್ತವಿಕ ವಿಚಾರಗಳಾಗಿವೆ” ಎಂದು ಹೇಳಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಭಾಷಣದ ಬಗ್ಗೆಯೂ ನ್ಯಾ. ನಾರಿಮನ್‌ ಅವರು ಕಳಕಳಿ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com