ಬರುವ ವರ್ಷ ಷಿಕಾಗೋ ವಿಶ್ವ ಧರ್ಮಗಳ ಸಂಸತ್‌ನಲ್ಲಿ ಪಾರ್ಸಿ ಧರ್ಮ ಪ್ರತಿನಿಧಿಸಲಿರುವ ನ್ಯಾ. ನಾರಿಮನ್

ಇದೇ ವೇದಿಕೆಯನ್ನು ಬಳಸಿ ಸ್ವಾಮಿ ವಿವೇಕಾನಂದರು 1893ರಲ್ಲಿ ಹಿಂದೂ ಧರ್ಮಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದರು.
Justice Rohinton Nariman
Justice Rohinton Nariman

ಸ್ವಾಮಿ ವಿವೇಕಾನಂದರು ಹಿಂದೂ ಧರ್ಮಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ವೇದಿಕೆಯೇರಿ 2023ರಲ್ಲಿ ಷಿಕಾಗೋದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ಇದೇ ಮೊದಲ ಬಾರಿಗೆ ಪಾರ್ಸಿ ಧರ್ಮದ ಪ್ರತಿನಿಧಿಯಾಗಿ ಭಾಷಣ ಮಾಡಲಿದ್ದಾರೆ.

ನ್ಯಾ. ನಾರಿಮನ್‌ ಅವರು ದೀಕ್ಷೆ ಪಡೆದ ಪಾರ್ಸಿ ಪುರೋಹಿತರಾಗಿದ್ದು ಧರ್ಮಗಳ ಸಂಸತ್‌ನಲ್ಲಿ ಪಾರ್ಸಿ ಧರ್ಮವನ್ನು ಪ್ರತಿನಿಧಿಸಲಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ ನಡೆದ ವಿ ಎಂ ತಾರ್ಕುಂಡೆ ಸ್ಮಾರಕ 13ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ನಾರಿಮನ್‌ ಅವರನ್ನು ಸಭಿಕರಿಗೆ ಪರಿಚಯಿಸುವ ವೇಳೆ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್‌ ಅವರು ಈ ವಿಚಾರ ತಿಳಿಸಿದರು.

"ಮುಂದಿನ ವರ್ಷ ಆಗಸ್ಟ್‌ನಲ್ಲಿ ತಮ್ಮ ಹುಟ್ಟುಹಬ್ಬದ ಮರುದಿನ ನಡೆಯಲಿರುವ, ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ್ದ ವೇದಿಕೆ, ಊರಿನಲ್ಲಿಯೇ ಪಾರ್ಸಿ ಧರ್ಮವನ್ನು ಪ್ರತಿನಿಧಿಸಿ ನ್ಯಾ. ನಾರಿಮನ್‌ ಅವರು ಮಾತನಾಡಲಿದ್ದಾರೆ. ʼವಿಶ್ವ ಧರ್ಮಗಳಲ್ಲಿ ಮುಕ್ತ ಮಾತುʼ ಎಂಬುದು ಮುಂದಿನ ವರ್ಷ ಧರ್ಮಗಳ ಸಂಸತ್ತಿನ ಚರ್ಚಾ ವಿಷಯವಾಗಿದೆ"  ಎಂದು ವಿ.ಎಂ.ತಾರ್ಕುಂಡೆ ಸ್ಮಾರಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ರಾಜು ಅವರು ವಿವರಿಸಿದರು.

Also Read
ನ್ಯಾಯವಾದಿ ಸಮುದಾಯದಿಂದ ಸುಪ್ರೀಂ ಕೋರ್ಟ್‌ಗೆ ನೇರ ನೇಮಕಾತಿ ಮಾಡಲು ಸೂಕ್ತ ಸಮಯ: ನಿವೃತ್ತ ನ್ಯಾ. ರೋಹಿಂಟನ್‌ ನಾರಿಮನ್

ನ್ಯಾಯಮೂರ್ತಿ ನಾರಿಮನ್ ಅವರು ಇತಿಹಾಸ ಮತ್ತು ಧರ್ಮಗಳ ಬಗ್ಗೆ ಆಳವಾದ ಜ್ಞಾನ ಪಡೆದಿರುವುದಕ್ಕೆ ಹೆಸರುವಾಸಿಯಾಗಿದ್ದಾರೆ. ನ್ಯಾ. ನಾರಿಮನ್‌ ನಿವೃತ್ತಿಯ ಮುನ್ನಾದಿನ ಮಾಜಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಇದೇ ವಿಚಾರವನ್ನು ವಿವರಿಸಿದ್ದರು.

 “ನ್ಯಾ. ನಾರಿಮನ್‌ ಅವರು ತಮ್ಮ 12 ನೇ ವಯಸ್ಸಿನಲ್ಲಿ ದೀಕ್ಷೆ ಪಡೆದ ಪುರೋಹಿತರಾಗಿದ್ದು ಅವರು ಪವಿತ್ರ ಪುಸ್ತಕವನ್ನು ಹೃದಯದಿಂದ ಬಲ್ಲರು. ವಿಶ್ವದೆಲ್ಲಾ ಧರ್ಮಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದಾರೆ ಅವರು” ಎಂದು ಆಗ ಅವರು ಹೇಳಿದ್ದರು.

ಈ ಹಿಂದೆಯೂ ಅಮೆರಿಕದಲ್ಲಿ ನ್ಯಾ. ನಾರಿಮನ್ ಅವರು ಧರ್ಮ ಕುರಿತು ಮಾತನಾಡಿದ್ದು ನ್ಯೂಯಾರ್ಕ್‌ನ ಪಾರ್ಸಿ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮತ್ತು 2005 ರಲ್ಲಿ ಫಿಲಿಡೆಲ್ಫಿಯಾದಲ್ಲಿ ಧಾರ್ಮಿಕ ಭಾಷಣ ಮಾಡಿದ್ದರು.

ಹಾರ್ವರ್ಡ್‌ ಕಾನೂನು ಶಾಲೆಯಿಂದ ಎಲ್‌ಎಲ್‌ಎಂ ಪದವಿ ಪಡೆದಿರುವ ನ್ಯಾ. ನಾರಿಮನ್‌ ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯವಾದಿಯಾಗಿ, ಭಾರತದ ಸಾಲಿಸಿಟರ್‌ ಜನರಲ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 7, 2014 ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡು ಆಗಸ್ಟ್ 12, 2021ರಂದು ನಿವೃತ್ತರಾಗಿದ್ದಾರೆ.

Related Stories

No stories found.
Kannada Bar & Bench
kannada.barandbench.com