ನ್ಯಾ. ಕುರೇಶಿ ಅವರಿಗೆ ಪದೋನ್ನತಿ ದೊರೆಯದ ಬಗ್ಗೆ ನ್ಯಾ. ರೋಹಿಂಟನ್ ಅವರು ಹೇಳಿದ್ದೇನು?

ತ್ರಿಪುರ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳೂ ಆದ ಅಕಿಲ್ ಕುರೇಶಿ ಅವರಿಗೆ ಎಸ್‌ಜಿಎಸ್‌ ಪ್ರಶಸ್ತಿ ಪ್ರದಾನ ಮಾಡಿದ ಸಮಾರಂಭದಲ್ಲಿ ನ್ಯಾಯಾಂಗ ಸ್ವಾತಂತ್ರ್ಯ ಕುರಿತು ನ್ಯಾ. ರೋಹಿಂಟನ್ ಮಾತನಾಡಿದರು.
Justice Akil Kureshi and Justice Rohinton Nariman
Justice Akil Kureshi and Justice Rohinton Nariman
Published on

ಉತ್ತಮ ಮತ್ತು ಸ್ವತಂತ್ರ ನ್ಯಾಯಮೂರ್ತಿಗಳನ್ನು ಕೊಲಿಜಿಯಂ ವ್ಯವಸ್ಥೆ ಪುರಸ್ಕರಿಸುವುದಿಲ್ಲ. ಅಂತಹವರನ್ನು ವ್ಯವಸ್ಥೆಯಿಂದ ಹೊರಹಾಕಲಾಗುತ್ತದೆ. ಆದ್ದರಿಂದಲೇ ನ್ಯಾ. ಕುರೇಶಿ ಅವರಂತಹ ಧೈರ್ಯಶಾಲಿ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ಎಫ್‌ ನಾರಿಮನ್‌ ಬೇಸರ ವ್ಯಕ್ತಪಡಿಸಿದರು.

ತಮಿಳುನಾಡಿನ ಮಾಜಿ ಅಡ್ವೊಕೇಟ್ ಜನರಲ್ ಮತ್ತು ಪ್ರಸಿದ್ಧ ವಕೀಲ ಎಸ್‌ ಗೋವಿಂದನ್‌ ಅವರ ಸ್ಮರಣಾರ್ಥ ದ ಜ್ಯೂನಿಯರ್ಸ್‌ ಆಫ್‌ ಮಿಸ್ಟರ್‌ ಎಸ್‌ ಗೋವಿಂದನ್‌ ಸಂಘಟನೆ ಭಾನುವಾರ ಚೆನ್ನೈನಲ್ಲಿ ಆಯೋಜಿಸಿದ್ದ ವಕೀಲ ವೃತ್ತಿಯಲ್ಲಿ ನೈತಿಕತೆಗಾಗಿ ಎಸ್‌ಜಿಎಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನ್ಯಾ. ಕುರೇಶಿ ಅವರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ಉತ್ತಮವಾಗಿದ್ದರೂ ಅದು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದರು.

ಅದು ತನ್ನಿಂದ ಸಾಧ್ಯವಾದಷ್ಟು ಉತ್ತಮವಾದುದನ್ನು ಮಾಡುತ್ತಿಲ್ಲ. ಹೀಗಾಗಿಯೇ ನ್ಯಾ. ಕುರೇಶಿ ಅಂತಹವರನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಲು ವಿಫಲವಾಯಿತು. ತುಂಬಾ ಒಳ್ಳೆಯವರು ಹಾಗೂ ಸ್ವತಂತ್ರರಾಗಿದ್ದರೆ ನಿಮ್ಮನ್ನು ವ್ಯವಸ್ಥೆಯಿಂದ ಹೊರಹಾಕಲಾಗುತ್ತದೆ ಎಂದು ನ್ಯಾ. ನಾರಿಮನ್‌ ತಿಳಿಸಿದರು.

ಪ್ರಸ್ತುತ ಕೊಲಿಜಿಯಂ ವ್ಯವಸ್ಥೆ ಒತ್ತಡಗಳಿಗೆ ಮಣಿದಿರುವುದರಿಂದ ಇಂತಹ ಉಲ್ಲಂಘನೆ ನಡೆಯುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಂವಿಧಾನದ ಸಂಸ್ಥಾಪಕರು ಬ್ರಿಟಿಷರು ಅನುಸರಿಸಿದ ವ್ಯವಸ್ಥೆಯನ್ನು ಮುಂದುವರಿಸಲು ನಿರ್ಧರಿಸಿದರು. ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನವರೆಗೂ ವ್ಯವಸ್ಥೆ ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದು ಭಾರತದಲ್ಲಿ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ನೀಡಿದ ಮೊದಲ ಪೆಟ್ಟಾಗಿದೆ ಎಂದರು.

ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಎರಡು ಬಾರಿ ಧಕ್ಕೆ ಒದಗಿದೆ. ಮೊದಲ ಬಾರಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಾಗ ಮತ್ತು ಈಗ 2023 ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ನ್ಯಾ. ಕುರೇಶಿ ಅವರಂತೆ ಧೈರ್ಯಶಾಲಿಗಳಾಗಿದ್ದ 16 ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿದಾಗ ಅದಕ್ಕೆ ಪೆಟ್ಟು ಬಿದ್ದಿದೆ.

“ಮತ್ತೆ ಎಲ್ಲವೂ ಸರ್ಕಾರದ ಕೈಯಲ್ಲಿದೆ ಎಂದು ಸುಪ್ರೀಂ ಕೋರ್ಟ್‌ ಬಹುಮತದೊಂದಿಗೆ ನುಡಿದಿದೆ” ಎಂದರು.

Kannada Bar & Bench
kannada.barandbench.com